ಸೆಂಟ್ರಿಂಗ್ ಹಠಾತ್ ಕುಸಿದು ಇಬ್ಬರು ಕಾರ್ಮಿಕರು ಸಾವು
ಬೆಂಗಳೂರು,ಆ.10-ನಿರ್ಮಾಣ ಕಟ್ಟಡದ ಕಾಮಗಾರಿ ವೇಳೆ ಹಠಾತ್ ಸೆಂಟ್ರಿಂಗ್ ಕುಸಿದು ಇಬ್ಬರು ಕಾರ್ಮಿಕರು ಸಾವನ್ನಪ್ಪಿ, ಮತ್ತೊರ್ವ ಕಾರ್ಮಿಕ ಗಂಭೀರವಾಗಿ ಗಾಯಗೊಂಡಿರುವ ಘಟನೆ
ಪೀಣ್ಯದ ಎನ್ಟಿಟಿಎಫ್ ರಸ್ತೆ ಬಳಿ‌ ಇಂದು ಮಧ್ಯಾಹ್ನ ನಡೆದಿದೆ.
ಯಾದಗಿರಿ ಮೂಲದ ಹಿಮಾಮ್ ಶೇಖ್ (28) ಸ್ಥಳದಲ್ಲೇ ಮೃತಪಟ್ಟರೆ, ಮಾರ್ಗ ಮಧ್ಯೆ ಕಲಬುರಗಿ ಮೂಲದ ವಿರೇಶ್ (35)ಮೃತಪಟ್ಟವರು.
ಗಂಭೀರವಾಗಿ ಗಾಯಗೊಂಡಿರುವ ಮತ್ತೋರ್ವ ಕಾರ್ಮಿಕ ಪ್ರಕಾಶ್(55) ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದು,ಅವರ ಸ್ಥಿತಿ ಚಿಂತಾಜನಕವಾಗಿದೆ.
ಎನ್ಟಿಟಿಎಫ್ ರಸ್ತೆಯ ಬಳಿ‌ ನಿರ್ಮಾಣಗೊಳ್ಳುತ್ತಿರುವ
ಐದು ಅಂತಸ್ತಿನ ಕಟ್ಟಡದ ಕಾಮಗಾರಿ ನಡೆಯುವಾಗ ಸೆಂಟ್ರಿಂಗ್ ಏಕಾಏಕಿ ಕುಸಿದು ಅದರಡಿ ಸಿಲುಕಿದ ಮೂವರಲ್ಲಿ ಇಬ್ಬರು ‌ಮೃತಪಟ್ಟು ಓರ್ವ ಗಾಯಗೊಂಡಿದ್ದಾರೆ.
ಗೋಮಾ ಎಲೈಟ್ಸ್ ಎಂಬ ಖಾಸಗಿ ಕಂಪನಿಗೆ ಸೇರಿದ ನಿರ್ಮಾಣ ಹಂತದ ಕಟ್ಟಡದಲ್ಲಿ ಐದನೇ ಅಂತಸ್ತಿಗೆ ಕಾಂಕ್ರಿಟ್ ಹಾಕಲು ಐದಾರು ಕಾರ್ಮಿಕರು ಮಧ್ಯಾಹ್ನ ಸೆಂಟ್ರಿಂಗ್ ಕೆಲಸ ಮಾಡುತ್ತಿದ್ದರು. ಈ ವೇಳೆ ಏಕಾಏಕಿ ಸೆಂಟ್ರಿಂಗ್ ಕುಸಿದು ಬಿದ್ದಿದೆ.
ಕಾರ್ಮಿಕರು ನಾಲ್ಕು ಅಂತಸ್ತಿನಿಂದ ಕೆಳಗೆ ಬಿದ್ದಿದ್ದಾರೆ. ಇಬ್ಬರು ಪ್ರಾಣ ಕಳೆದುಕೊಂಡಿದ್ದಾರೆ. ಮರಣೋತ್ತರ ಪರೀಕ್ಷೆಗಾಗಿ ಇಬ್ಬರ ಮೃತದೇಹಗಳನ್ನ ಸ್ಥಳೀಯ ಆಸ್ಪತ್ರೆಗೆ ರವಾನಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ಧಾರೆ.