ಮಾಜಿ ಸಿಎಂ ಎಸ್ಸೆಂಕೆ ಅಳಿಯ ಸಿದ್ದಾರ್ಥ್ ಆತ್ಮಹತ್ಯೆಗೆ ಯಾರು ಕಾರಣ: ಡಿಕೆಶಿಗೆ ಎಚ್ ಡಿಕೆ ಸವಾಲು
ಮೈಸೂರು: ಆ.10- ಮಾಜಿ ಮುಖ್ಯಮಂತ್ರಿ ಎಸ್‌ಎಂ ಕೃಷ್ಣ ಅವರು ನಿಮಗೆ ರಾಜಕೀಯ ಜನ್ಮ ಕೊಟ್ಟರು. ಅವರ ಅಳಿಯ ಸಿದ್ಧಾರ್ಥ್ ಆತ್ಮಹತ್ಯೆಗೆ ಕಾರಣ ಯಾರು ಎಂಬುದನ್ನು ಜನರ ಮುಂದಿಡಿ ಎಂದು ಡಿಕೆ ಶಿವಕುಮಾರ್‌ಗೆ ಕೇಂದ್ರ ಸಚಿವ ಹೆಚ್.ಡಿ. ಕುಮಾರಸ್ವಾಮಿ ಸವಾಲು ಹಾಕಿದರು.
ಮೈಸೂರು ಚಲೋ ಸಮಾರೋಪ ಸಮಾವೇಶದಲ್ಲಿ ಮಾತನಾಡಿದ ಅವರು, ಸಿಎಂ ಹಾಗೂ ಡಿಸಿಎಂ ವಿರುದ್ಧ ಗುಡುಗಿದರು. ನನ್ನ ಮತ್ತು ಯಡಿಯೂರಪ್ಪ ನಡುವೆ ಬಿರುಕು ಮೂಡಿಸಲು ಯತ್ನ ನಡೆಯುತ್ತಿದೆ ಎಂದು ಆರೋಪಿಸಿದರು.
ಶ್ರಮಪಟ್ಟು 105 ಸ್ಥಾನವನ್ನು ಪಡೆದಿದ್ದಾಗ ಅಧಿಕಾರ ಸಿಗದ ಸಂದರ್ಭದಲ್ಲಿ ರಾಜಕೀಯವಾಗಿ ನನ್ನ ವಿರುದ್ಧ ಯಡಿಯೂರಪ್ಪ ಮಾತಾಡಿದ್ದಾರೆ. ಅದು ಸಹಜ. ವಿಧಾನಸಭೆಯಲ್ಲಿ ಅವತ್ತು ಯಡಿಯೂರಪ್ಪ ಅವರು ನನ್ನ ನಾಗರಹಾವು ಅಂದರು. ನಾನು ಡಿಕೆ ಶಿವಕುಮಾರ್ ಪಾಲಿಗೆ ನಾಗರಹಾವೇ ಎಂದು ತಿರುಗೇಟು ನೀಡಿದರು.
ಮಿಸ್ಟರ್ ಶಿವಕುಮಾರ್ ತಾಯಿ ಚಾಮುಂಡಿ ನೆಲದಲ್ಲಿ ನಿಂತು ಕೇಳ್ತೀನಿ. ಕೊತ್ವಾಲ್‌ನ ಬಳಿ ಜೀವನ ಮಾಡುತ್ತಿದ್ದ ನಿಮಗೆ ಎಸ್.ಎಂ. ಕೃಷ್ಣ ಅವರು ರಾಜಕೀಯ ಜನ್ಮ ಕೊಟ್ಟರು. ಅವರ ಅಳಿಯ ಸಿದ್ಧಾರ್ಥ್ ಆತ್ಮಹತ್ಯೆಗೆ ಕಾರಣ ಯಾರು ಎಂಬುದನ್ನು ಜನರ ಮುಂದೆ ಇಡಿ ಎಂದರು.
ಬೆಂಗಳೂರಿನ ಜೇಡರಹಳ್ಳಿ ಬಳಿ ರಾತ್ರಿ ಹೊತ್ತು ಮ್ಯಾನ್‌ಹೋಲ್ ಛೇಂಬರ್‌ನ ಮುಚ್ಚಳ ಕದ್ದು ಗುಜರಿಗೆ ಹಾಕಿ ಜೀವನ ಮಾಡುತ್ತಿದ್ದ ಶಿವಕುಮಾರ್ ನನ್ನ ಮತ್ತು ಯಡಿಯೂರಪ್ಪ ಬಗ್ಗೆ ಮಾತಾಡ್ತೀರಾ ಎಂದು ಕಿಡಿಕಾರಿದರು.
ಸಿದ್ದರಾಮಯ್ಯ ಪರ ನಾನು ಬಂಡೆ ಥರ ಇದ್ದೀನಿ ಅಂದರು. 2018 ರಲ್ಲಿ ನಾನು ಆ ಬಂಡೆ ಕಲ್ಲು ನಂಬಿಕೊಂಡೆ ಬಂಡೆಯನ್ನು ಮೈ ಮೇಲೆ ಎಳೆದುಕೊಂಡೆ. ಕಾಂಗ್ರೆಸ್‌ಗೆ ಲೋಕಸಭೆಯಲ್ಲಿ 8 ಸ್ಥಾನ ಬಂದಿದೆ. ನಾನು ಅದು 9 ಅನ್ನಲ್ಲ. ಇನ್ನೊಂದು ಸ್ಥಾನ ಹೇಗೆ ಬಂತು ಅಂತಾ ನನಗೆ ಗೊತ್ತಿದೆ ಎಂದರು.
ಸಿದ್ದರಾಮಯ್ಯನವರು ಬರೀ ಹಿಂದುಳಿದ ವರ್ಗಗಳ ಸಿಎಂ ಅಲ್ಲ. ಆರೂವರೆ ಕೋಟಿ ಜನರ ಸಿಎಂ ಎಂಬುದನ್ನು ಅರಿಯಿರಿ. ಸಿದ್ದರಾಮಯ್ಯ ಅವರು ಸಿಎಂ ಆದರೆ ನನಗೆ ಯಾಕೆ ಹೊಟ್ಟೆ ಉರಿ? ನನ್ನ ಪ್ರಶ್ನೆ ನಿಮ್ಮ ಅನ್ಯಾಯದ ವಿರುದ್ಧ. ಸಿದ್ದರಾಮಯ್ಯ ಚಡ್ಡಿಯೆಲ್ಲಾ ಕಪ್ಪಾಗಿದೆ. ಮುಖದಲ್ಲಿ ಕಪ್ಪು ಚುಕ್ಕೆ ಇಲ್ಲ ಅಂದರೆ ಹೇಗೆ ಎಂದು ವಾಗ್ದಾಳಿ ನಡೆಸಿದರು.
ಸಿಎಂ ಪತ್ನಿಗೆ ಬಂದಿರೋದು ಯಾರೋ ಒಬ್ಬರ ಜಮೀನಲ್ಲ. ಅದು ಸರ್ಕಾರದ ಜಮೀನು. ನೀವು ಸಹಿ ಹಾಕದೆ ಇರಬಹುದು. ನಿಮ್ಮ ಮೂಗಿನ ನೇರಕ್ಕೆ ಎಲ್ಲವೂ ನಡೆದಿದೆ. 14 ಸೈಟ್ ವಾಪಸ್ ಕೊಡಲು ಸಿದ್ಧನಿದ್ದೇನೆ ಅಂತಾರೆ. ಈಗ ಸೈಟ್ ವಾಪಸ್ ಕೊಟ್ಟರೆ ನೀವು ಮಾಡಿದ ಅಕ್ರಮ ಮುಚ್ಚಿ ಹೋಗುತ್ತಾ? ಎಂದು ಪ್ರಶ್ನಿಸಿದರು.