ಎಚ್ ಡಿಕೆಗೆ ಹುಚ್ಚಾಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಬೇಕು- ಡಿಕೆಶಿ ವ್ಯಂಗ್ಯ
ಕನಕಪುರ, ಆ-10- ಕೇಂದ್ರ ಸಚಿವ ಎಚ್.ಡಿ.ಕುಮಾರಸ್ವಾಮಿ ಅವರ ಹೇಳಿಕೆ ನೋಡುತ್ತಿದ್ದರೆ ಅವರಿಗೆ ಆದಷ್ಟು ಬೇಗ ಹುಚ್ಚಾಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಬೇಕು ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ವ್ಯಂಗ್ಯವಾಡಿದ್ದಾರೆ.
ಕನಕಪುರದಲ್ಲಿ ಜನರನ್ನು ಭೇಟಿ ಮಾಡಿ ಅಹವಾಲು ಸ್ವೀಕರಿಸಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಾನು ಅವರ ತಂದೆ ವಿರುದ್ಧ 1985ರಲ್ಲಿ ಚುನಾವಣೆಯಲ್ಲಿ ಸ್ಪರ್ಧೆ ಮಾಡಿದ್ದೆ. ಬಂಗಾರಪ್ಪನವರ ಸಂಪುಟದಲ್ಲಿ ಸಚಿವನಾಗಿದ್ದೆ. ನನ್ನ ಹಾಗೂ ಎಸ್.ಎಂ ಕೃಷ್ಣ ಅವರ ನಡುವಣ ಸಂಬಂಧ ಏನು ಎಂದು ಕುಮಾರಸ್ವಾಮಿಗೆ ಏನು ಗೊತ್ತಿದೆ? ಅವರಿಗೆ ಹುಚ್ಚು ಹಿಡಿದಿದೆ. ಅವರಿಗೆ ಸೂಕ್ತ ಚಿಕಿತ್ಸೆ ಕೊಡಿಸಿ ಎಂದು ಅವರ ಪಕ್ಷದವರಿಗೆ, ನಾಯಕರಿಗೆ, ಹಿತೈಷಿಗಳಿಗೆ ಹೇಳೋಣ ಎಂದು ತಿಳಿಸಿದರು.
ನಾನು ಯಾವ ಬಡವನ ಆಸ್ತಿ ಲೂಟಿ ಮಾಡಿದ್ದೇನೆ. ಆತನನ್ನು ಕರೆದುಕೊಂಡು ಬಂದು ನನ್ನ ಮುಂದೆ ನಿಲ್ಲಿಸಲಿ. ನಾವು ಬಡವರಿಗೆ ತೊಂದರೆ ನೀಡಿ ಆಸ್ತಿ ಕಿತ್ತುಕೊಂಡಿರುವುದು ನಮ್ಮ ಜಾಯಮಾನದಲ್ಲಿಲ್ಲ. ಕುಮಾರಸ್ವಾಮಿ ಅವರ ಬಗ್ಗೆ ಯೋಗೇಶ್ವರ್ ಅವರೇ ಈಗಾಗಲೇ ಮಾಹಿತಿ ನೀಡಿದ್ದಾರೆ. ಅವರ ಬಗ್ಗೆ ಯೋಗೇಶ್ವರ್ ಉತ್ತರ ನೀಡುತ್ತಾರೆ ಎಂದು ತಿಳಿಸಿದರು.
ನಾವು ಬಡವರು, ಹೊಲ ಉಳುಮೆ ಮಾಡಿಕೊಂಡಿ ದ್ದೆವು. ನಾನು ಬೆಂಗಳೂರಿನ ಎನ್ ಪಿಎಸ್ ಶಾಲೆಯಲ್ಲಿ ಓದಿದವನು. ನನ್ನ ಇತಿಹಾಸ ಅಲ್ಲಿಂದ ಶುರುವಾಗಿದೆ ಎಂದು ತಿಳಿಸಿದರು.
ನಿಮ್ಮನ್ನು ಜೈಲಿಗೆ ಹಾಕಲು ಷಡ್ಯಂತ್ರ ನಡೆಯುತ್ತಿ ದೆಯೇ ಎಂಬ ಪ್ರಶ್ನೆಗೆ, ಮೊದಲಿಂದಲೂ ದೊಡ್ಡ ಸಂಚು ನಡೆದುಕೊಂಡು ಬಂದಿದ್ದು, ಈಗಲೂ ಷಡ್ಯಂತ್ರ ಮಾಡುತ್ತಿದ್ದಾರೆ. ಹೀಗಾಗಿ 10 ತಿಂಗಳಲ್ಲಿ ಸರ್ಕಾರ ತೆಗೆಯುವುದಾಗಿ ಹೇಳಿದ್ದಾರೆ ಎಂದು ತಿಳಿಸಿದರು.
ನಾನು ಯಾವ ರೀತಿ ಅವರ ಮೇಲೆ ಬಂಡೆ ಹಾಕಿದ್ದೇನೆ ಎಂದು ಅವರು, ಅವರ ಪಕ್ಷದ ನಾಯಕರು ಹೇಳಲಿ. ಅವರ ಮಾತುಗಳನ್ನು ಕೇಳುತ್ತಿದ್ದರೆ, ಅವರಿಗೆ ಚಿಕಿತ್ಸೆ ಕೊಡಿಸುವುದು ಉತ್ತಮ ಎಂದರು.
ಸಿಎಂ ಸದನದಲ್ಲಿ ಉತ್ತರ ನೀಡದೇ ರಣಹೇಡಿಯಂತೆ ಕದ್ದು ಓಡಿ ಹೋಗುತ್ತಾರೆ ಎಂಬ ವಿಜಯೇಂದ್ರ ಆರೋಪದ ಬಗ್ಗೆ ಕೇಳಿದಾಗ, “ಹೇಡಿ ಯಾರು ಎಂಬುದನ್ನು ಸದನದಲ್ಲಿ ಬಂದು ಮಾತನಾಡಲಿ ಎಂದು ಸವಾಲು ಹಾಕಿದರು.
ಕುಮಾರಸ್ವಾಮಿ ಮೇಲೆ ಕಣ್ಣಾಕಿದರೆ ಸರ್ವನಾಶವಾಗ್ತಾರೆ ಎಂಬ ಹೇಳಿಕೆ ಬಗ್ಗೆ ಕೇಳಿದಾಗ, “ನಮ್ಮ ಮೇಲೆ ಕಣ್ಣಾಕಿದರೂ ಅದೇ ಸಮಸ್ಯೆ ಆಗುತ್ತದೆಯಲ್ಲವೇ” ಎಂದು ತಿಳಿಸಿದರು.