ಬಾಕಿ ಕೊಬ್ಬರಿ ಹಣ ಪಾವತಿಗೆ ಕೇಂದ್ರಕ್ಕೆ ಸೋಮಣ್ಣ ಮನವಿ
ತುಮಕೂರು, ಆ. ೧೦- ನವದೆಹಲಿಯಲ್ಲಿ ಕೇಂದ್ರ ಕೃಷಿ ಮತ್ತು ರೈತರ ಕಲ್ಯಾಣ ಸಚಿವ ಶಿವರಾಜ ಸಿಂಗ್ ಚೌಹಾಣ್ ರವರನ್ನು ರೈಲ್ವೆ ಮತ್ತು ಜಲಶಕ್ತಿ ರಾಜ್ಯ ಖಾತೆಯ ಸಚಿವ ವಿ.ಸೋಮಣ್ಣ ಅವರು ಭೇಟಿ ಮಾಡಿ, ರಾಜ್ಯದಲ್ಲಿ ಉಂಡೆ ಕೊಬ್ಬರಿಗೆ ಸಂಬಂಧಪಟ್ಟಂತೆ ನಫೆಡ್ ಸಂಸ್ಥೆಯಿಂದ ಪಾವತಿಸಬೇಕಾದ ರೂ. ೬೯೧ ಕೋಟಿ ಹಣವನ್ನು ರಾಜ್ಯದ ಸಂಬಂಧಪಟ್ಟ ಖರೀದಿ ಏಜೆನ್ಸಿಗಳಿಗೆ ಮರು ಪಾವತಿಸಲು ಸೂಚಿಸುವಂತೆ ಮನವಿಯನ್ನು ಸಲ್ಲಿಸಿದರು.
ಇದರಿಂದ ಕರ್ನಾಟಕ ರಾಜ್ಯದಲ್ಲಿ ತುಮಕೂರು, ಮಂಡ್ಯ, ಹಾಸನ, ಮೈಸೂರು, ಚಾಮರಾಜ ನಗರ, ಚಿತ್ರದುರ್ಗ, ಚಿಕ್ಕಮಗಳೂರು ಮತ್ತು ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ತೆಂಗು ಬೆಳೆಯುವ ರೈತರ ಹಿತಾಶಕ್ತಿ ಕಾಪಾಡಲು ಅನುಕೂಲವಾಗುತ್ತದೆ ಎಂದು ಕೇಂದ್ರ ಕೃಷಿ ಮತ್ತು ರೈತರ ಕಲ್ಯಾಣ ಸಚಿವರಿಗೆ ಸಚಿವರಾದ ವಿ.ಸೋಮಣ್ಣ ಮನವರಿಕೆ ಮಾಡಿಕೊಟ್ಟರು.
ವಿಶೇಷವಾಗಿ ತುಮಕೂರು ಜಿಲ್ಲೆ ಹೆಚ್ಚಿನ ಪ್ರಮಾಣದಲ್ಲಿ ಉಂಡೆ ಕೊಬ್ಬರಿ ಉತ್ಪಾದಕ ಜಿಲ್ಲೆಯಾಗಿದ್ದು, ಈ ಜಿಲ್ಲೆಯ ರೈತರಿಗೆ ಸಹಾಯ ಮಾಡುವಂತೆ ಕೇಂದ್ರ ಸಚಿವರು ಖುದ್ದಾಗಿ ಭೇಟಿ ಮಾಡಿ ಮನವಿ ಸಲ್ಲಿಸಿದರು.
ಕೇಂದ್ರ ರೈಲ್ವೆ ಮತ್ತು ಜಲಶಕ್ತಿ ಖಾತೆಯ ರಾಜ್ಯ ಸಚಿವರ ಮನವಿಗೆ ಸ್ಪಂದಿಸಿದ ಕೇಂದ್ರ ಕೃಷಿ ಮತ್ತು ರೈತರ ಕಲ್ಯಾಣ ಸಚಿವರು ಅತೀ ಶೀಘ್ರದಲ್ಲಿ ಮೊತ್ತವನ್ನು ಬಿಡುಗಡೆ ಮಾಡುವುದಾಗಿ ಭರವಸೆ ನೀಡಿದ್ದಾರೆ.
ಈಗಾಗಲೇ ೨೫೯೯ ಮೆಟ್ರಿಕ್ ಟನ್ ನಿಂದ ೧೦೫೦೦ ಮೆಟ್ರಿಕ್ ಟನ್ ಮಿಲ್ಲಿಂಗ್ ಕೊಪ್ರಾವನ್ನು ಬೆಂಬಲ ಬೆಲೆ ಅಡಿಯಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಖರೀದಿಗೆ ಅನುವು ಮಾಡಿಕೊಟ್ಟ ಕೇಂದ್ರ ಕೃಷಿ ಮತ್ತು ರೈತರ ಕಲ್ಯಾಣ ಸಚಿವರಿಗೆ ರಾಜ್ಯದ ರೈತರ ಪರವಾಗಿ ಸಚಿವ ವಿ.ಸೋಮಣ್ಣನವರು ಅಭಿನಂದನೆ ಸಲ್ಲಿಸಿದರು.