ಬೋನಿಗೆ ಬಿದ್ದ ಚಿರತೆ
ಚಿಕ್ಕನಾಯಕನಹಳ್ಳಿ, ಆ. ೧೦- ತಾಲ್ಲೂಕಿನ ಮೇಲನಹಳ್ಳಿ ಕಿತ್ತೂರು ರಾಣಿ ಚೆನ್ನಮ್ಮ ವಸತಿ ಶಾಲೆ ಬಳಿ ಅರಣ್ಯ ಇಲಾಖೆ ಇಟ್ಟಿದ್ದ ಬೋನಿನಲ್ಲಿ ಚಿರತೆ ಸೆರೆಯಾಗಿದೆ.
ಕಿತ್ತೂರು ರಾಣಿ ಚೆನ್ನಮ್ಮ ವಸತಿ ಶಾಲೆಯ ಹಿಂಬದಿ ಇರುವ ಗುಡ್ಡದ ಬಳಿ ಚಿರತೆ ಮರಿಯೊಂದು ಓಡಾಡುತ್ತಿರುವ ಬಗ್ಗೆ ಶಾಲೆಯ ಭದ್ರತಾ ಸಿಬ್ಬಂದಿ ಸಿ. ಜಯರಂಗಯ್ಯ ಎಂಬುವರು ಮಾಹಿತಿ ನೀಡಿದ್ದರು. ಇವರ ಮಾಹಿತಿ ಆಧಾರದ ಮೇಲೆ ಬೋನ್ ಇಡಲಾಗಿತ್ತು.
ಅರಣ್ಯ ಇಲಾಖೆಯವರು ಇಟ್ಟಿದ್ದ ಬೋನಿಗೆ ಆಹಾರ ಅರಸಿ ಬಂದಿರುವ ಚಿರತೆ ಸೆರೆಯಾಗಿದೆ.
ಘಟನಾ ಸ್ಥಳಕ್ಕೆ ಅರಣ್ಯ ಇಲಾಖೆ ಅಧಿಕಾರಿಗಳು ಭೇಟಿ ನೀಡಿ ಪರಿಶೀಲಿಸಿ ಚಿರತೆಯನ್ನು ಹೊಸಹಳ್ಳಿ ನರ್ಸರಿ ಫೀಲ್ಡ್‌ಗೆ ಸಾಗಿಸಿದ್ದಾರೆ.
ಒಂದೂವರೆ ವರ್ಷ ವಯಸ್ಸಿನ ಈ ಚಿರತೆಯ ಲಿಂಗಪತ್ತೆಗೆ ಅದು ಅವಕಾಶವೇ ಮಾಡಿಕೊಡುತ್ತಿಲ್ಲ. ಮೇಲ್ಮೈ ಲಕ್ಷಣಗಳ ಆಧಾರದಿಂದ ಹೆಣ್ಣುಚಿರತೆ ಎಂದು ಗುರುತಿಸಬಹುದು. ಅದನ್ನು ಕಾಡಿಗೆ ಬಿಡಬೇಕೋ ಅಥವಾ ಬನ್ನೇರುಘಟ್ಟ ರಾಷ್ಟ್ರೀಯ ಉದ್ಯಾನವನಕ್ಕೆ ಕಳುಸಿಕೊಡಬೇಕೋ ಎಂಬುದನ್ನು ಹಿರಿಯ ಅರಣ್ಯ ಇಲಾಖೆ ಅಧಿಕಾರಿಗಳ ಜತೆ ಸಮಾಲೋಚಿಸಿ ತೀರ್ಮಾನಿಸಲಾಗುವುದು ಎಂದು ಅರಣ್ಯ ಸಂರಕ್ಷಣಾಧಿಕಾರಿ ಅರುಣ್ ತಿಳಿಸಿದ್ದಾರೆ.