ನಮ್ಮ ಮೆಟ್ರೊ ಟಿಕೆಟ್ ದರ ಏರಿಕೆಗೆ ಚಿಂತನೆ
(ಸಂಜೆವಾಣಿ ಪ್ರತಿನಿಧಿಯಿಂದ)
ಬೆಂಗಳೂರು,ಆ.೧೦:ನಮ್ಮ ಮೆಟ್ರೊ ಟಿಕೆಟ್ ದರ ಹೆಚ್ಚಿಸಲು ಬೆಂಗಳೂರು ಮೆಟ್ರೊ ರೈಲು ನಿಗಮ ಚಿಂತನೆ ನಡೆಸಿದೆ. ಈಗಾಗಲೇ ಬೆಲೆ ಏರಿಕೆಯಿಂದ ತತ್ತರಿಸಿರುವ ಜನತೆಗೆ ಮೆಟ್ರೊ ಟಿಕೆಟ್ ದರ ಏರಿಕೆಯ ಬಿಸಿ ತಟ್ಟಲಿದೆ.
ಮೆಟ್ರೊ ರೈಲ್ವೆ ನಿಲ್ದಾಣಗಳಲ್ಲಿ ಆತ್ಮಹತ್ಯೆ ಪ್ರಕರಣಗಳು ಹೆಚ್ಚಾಗಿವೆ. ಈ ಹಿನ್ನೆಲೆಯಲ್ಲಿ ಫ್ಲಾಟ್‌ಫಾರಂ ಸ್ಕ್ರೀನ್ ಬಾಗಿಲುಗಳನ್ನು ಅಳವಡಿಸಲು ಬಿಎಂಆರ್‌ಸಿಎಲ್ ಮುಂದಾಗಿದೆ.
ಈ ಕಾಮಗಾರಿಗಾಗಿ ಒಂದು ಮೆಟ್ರೊ ನಿಲ್ದಾಣಕ್ಕೆ ೬ ರಿಂದ ೭ ಕೋಟಿ ರೂ. ವೆಚ್ಚವಾಗಲಿದೆ. ಈ ಹಿನ್ನೆಲೆಯಲ್ಲಿ ಟಿಕೆಟ್ ದರ ಏರಿಕೆ ಮಾಡಲು ಗಂಭೀರ ಚಿಂತನೆ ನಡೆಸಿದೆ.
ಸದ್ಯಕ್ಕೆ ಯಾವುದೇ ದರ ಏರಿಕೆ ಇಲ್ಲ, ದರ ಏರಿಸುವ ಕುರಿತು ಚರ್ಚೆ ನಡೆಸಲಾಗುತ್ತಿದೆ. ೨-೩ ತಿಂಗಳಲ್ಲಿ ದರ ಏರಿಸಬೇಕೇ ಅಥೌಆ ಬೇಡವೇ ಎಂಬ ಬಗ್ಗೆ ನಿರ್ಧಾರ ಕೈಗೊಳ್ಳಲು ಮುಂದಾಗಿದೆ ಎಂದು ಬಿಎಂಆರ್‌ಸಿಎಲ್ ಮೂಲಗಳು ತಿಳಿಸಿವೆ.
ಇತ್ತೀಚಿನ ದಿನಗಳಲ್ಲಿ ಮೆಟ್ರೊ ರೈಲು ನಿಲ್ದಾಣಗಳಲ್ಲಿ ಆತ್ಮಹತ್ಯೆ ಪ್ರಕರಣಗಳು ಹೆಚ್ಚಾಗಿವೆ. ಇದು ಆತಂಕಕ್ಕೂ ಕಾರಣವಾಗಿದೆ. ಇಂತಹ ಪ್ರಕರಣಗಳನ್ನು ತಪ್ಪಿಸಲು ಮೆಜೆಸ್ಟಿಕ್ ಮೆಟ್ರೊ ನಿಲ್ದಾಣಗಳಲ್ಲಿ ಬ್ಯಾರಿಕೇಡ್ ಹಾಕಲಾಗಿದೆ. ಆದರೂ ಪ್ರಯಾಣಿಕರಿಂದ ವ್ಯಾಪಕ ಒತ್ತಡ ವ್ಯಕ್ತವಾಗಿರುವ ಹಿನ್ನೆಲೆಯಲ್ಲಿ ಸ್ಕ್ರೀನ್ ಡೋರ್‌ಗಳನ್ನು ನಿರ್ಮಿಸಲು ಬಿಎಂಆರ್‌ಸಿಎಲ್ ನಿರ್ಧರಿಸಿದೆ.