ಅಮನ್‌ಗೂ ಎದುರಾಗಿತ್ತು ಕಠಿಣ ಸವಾಲು
ಪ್ಯಾರಿಸ್.ಆ.೧೦- ಐತಿಹಾಸಿಕ ಕಂಚಿನ ಪದಕ ಗೆಲ್ಲುವ ಮುನ್ನ ಕುಸ್ತಿ ಪಟು ಅಮನ್ ಸೆಹ್ರಾವತ್ ಕಠಿಣ ಸವಾಲೊಂದನ್ನ ಎದುರಿಸಿದ್ದರು ಎನ್ನುವ ವಿಚಾರ ಬಹಿರಂಗವಾಗಿದೆ.
ಅಮನ್ ಸೆಹ್ರಾವತ್ ಪುರುಷರ ೫೭ ಕೆ.ಜಿ. ವಿಭಾಗದಲ್ಲಿ ಸ್ಪರ್ಧಿಸಿದ್ದಾರೆ. ಆದರೆ ಆ.೮ರಂದು ಅಮನ್ ಸೆಹ್ರಾವತ್ ಸೆಮಿಫೈನಲ್‌ನಲ್ಲಿ ಸೋತ ಬಳಿಕ ೬೧.೫ ಕೆಜಿ ತೂಕ ಹೊಂದಿದ್ದರು. ಈ ವಿಭಾಗಕ್ಕೆ ಮಿತಿ ಇದ್ದಿದ್ದು ೫೭ಕೆಜಿ ಮಾತ್ರ.
ಕಂಚಿನ ಪದಕಕ್ಕೆ ಸ್ಪರ್ಧಿಸಬೇಕಾಗಿದ್ದರಿಂದ ಅಮನ್ ಸೆಹ್ರಾವತ್ ಅನಿವಾರ್ಯವಾಗಿ ಹೆಚ್ಚುವರಿ ನಾಲ್ಕು ಕೆಜಿ ತೂಕವನ್ನು ಇಳಿಸಬೇಕಾಗಿತ್ತು. ಕಂಚಿನ ಪದಕದ ಸ್ಪರ್ಧೆಗೆ ೧೦ ಗಂಟೆ ಬಾಕಿ ಇದ್ದಾಗ ಎಚ್ಚೆತ್ತ ಅಮನ್ ಸೆಹ್ರಾವತ್ ತಮ್ಮ ಕೋಚ್ ಜಗ್ಮಂದಿರ್ ಸಿಂಗ್ ಮತ್ತು ವೀರೇಂದರ್ ದಹಿಯಾ ಅವರ ನೆರವಿನೊಂದಿಗೆ ತೂಕ ಇಳಿಸಿದರು. ಮ್ಯಾಟ್ ಮೇಲೆ ಒಂದು ವರೆ ಗಂಟೆ ದಹಿಕ ಕಸರತ್ತು ನಡೆಸಿದರು. ಒಂದು ಗಂಟೆ ಬಿಸಿ ನೀರಿನಲ್ಲಿ ಸ್ನಾನ ಮಾಡಿದರು. ಬೆವರಿನ ಸಹಾಯದಿಂದ ತೂಕ ಕಡಿಮೆಯಾಯಿತು.
ಮಧ್ಯಾಹ್ನ ೧೨.೩೦ಕ್ಕೆ ಒಂದು ಗಂಟೆಗಳ ಕಾಲ ಜಿಮ್ ಮಾಡಿದರು. ಬೆವರಿನ ಸಹಾಯದಿಂದ ತೂಕ ಕಡಿಮೆಯಾಯಿತು. ನಂತರ ೩೦ ನಿಮಿಷಗಳ ಕಾಲ ವಿರಾಮ ಪಡೆದರು.
ನಂತರ ಐದು ನಿಮಿಷಗಳ ಕಾಲ ಸೌನಾ ಸ್ನಾನ (ಶಾಖ ಮತ್ತು ಬೆವರು) ಮಾಡಿ ತೂಕ ಕಡಿಮೆಗೊಳಿಸಿದರು.
ಇನ್ನು ೯೦೦ ಗ್ರಾಂ ತೂಕ ಕಡಿಮೆ ಮಾಡಿಕೊಳ್ಳಬೇಕಾದಾಗ ಅಮನ್ ಸೆಹ್ರಾವತ್ ಜಾಗಿಂಗ್ ಮತ್ತು ಮಸಾಜ್ ಮೊರೆ ಹೋದರು. ನಂತರ ೧೫ ನಿಮಿಷಗಳ ಕಾಲ ಓಡಿದರು. ಆಗ ೫೬.೯ಕೆಜಿ ತೂಕ ಪಡೆದರು. ಅಮನ್‌ಗೆ ಉಗುರು ಬೆಚ್ಚಗಿನ ನೀರು, ನಿಂಬೆಹಣ್ಣು, ಜೇನು ತುಪ್ಪ ಮತ್ತು ಸ್ವಲ್ಪ ಕಾಫಿ ನೀಡಲಾಯಿತು.
ಇದೆಲ್ಲಾ ನಂತರ ತೂಕ ಪರೀಕ್ಷಿಸುವ ಮುನ್ನ ರಾತ್ರಿ ಇಡೀ ಅಮನ್ ನಿದ್ದೆ ಮಾಡಲಿಲ್ಲ. ಪ್ರತಿ ಗಂಟೆ ತೂಕವನ್ನು ಪರೀಕ್ಷಿಸಿಕೊಳ್ಳುತ್ತಿದ್ದರು.
ಕುಸ್ತಿ ವಿಡಿಯೋಗಳನ್ನು ನೋಡಿ ಕಾಲಕಳೆದರು. ಹೀಗೆ ಅನರ್ಹತೆಯಿಂದ ಅಮನ್ ಸೆಹ್ರಾವತ್ ತಪ್ಪಿಸಿಕೊಂಡರು. ತಮ್ಮ ಕೊನೆಯ ಪಂದ್ಯದಲ್ಲಿ ಅಮನ್ ಕಂಚು ಗೆದ್ದು ಕುಸ್ತಿ ವಿಭಾಗಕ್ಕೆ ಮೊದಲ ಪದಕ ಗೆದ್ದುಕೊಟ್ಟರು.