ಸರ್ಕಾರಕ್ಕೆ ಅಸ್ಥಿರಕ್ಕೆ ಎಚ್ ಡಿಡಿ, ಎಚ್ ಡಿಕೆ ದುಷ್ಟ ಪ್ರಯತ್ನ:ಸಿಎಂ ತರಾಟೆ
ಮೈಸೂರು: ಕೇಂದ್ರ ಸಚಿವ ಎಚ್.ಡಿ.ಕುಮಾರಸ್ವಾಮಿ ಹಾಗೂ ಜೆಡಿಎಸ್ ವರಿಷ್ಠ ಎಚ್.ಡಿ. ದೇವೇಗೌಡರು ಸಹಿಸಲ್ಲ. ನಮ್ಮ ಸರ್ಕಾರವನ್ನು ಅಸ್ಥಿರ ಮಾಡುವ ದುಷ್ಟ ಪ್ರಯತ್ನ ಮಾಡುತ್ತಿದ್ದಾರೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತೀವ್ರ ವಾಗ್ದಾಳಿ ನಡೆಸಿದ್ದಾರೆ.
ದೇವೇಗೌಡರು, ಕುಮಾರಸ್ವಾಮಿ ಕೊಟ್ಟ ಮಾತಿನಂತೆ ನಡೆದುಕೊಳ್ಳಲ್ಲ. ಸೇಡಿನ ರಾಜಕೀಯ ಮಾಡುವ ಮನಸ್ಥಿತಿ ಇರೋದು ದೇವೇಗೌಡರು ಹಾಗೂ ಅವರ ಕುಟುಂಬಕ್ಕೆ ಎಂದು ಅವರು ಕಿಡಿಕಾರಿದ್ದಾರೆ.
ಮೈಸೂರಿನ ಮಹಾರಾಜ ಕಾಲೇಜು ಮೈದಾನದಲ್ಲಿ ಕಾಂಗ್ರೆಸ್ ಸಮಾವೇಶದಲ್ಲಿ ಮಾತನಾಡಿದ‌ ಅವರು, ಬಿಜೆಪಿ-ಜೆಡಿಎಸ್‍ನವರು ಒಬ್ಬರಿಗೊಬ್ಬರು ಹೇಗೆ ಬೈದಾಡಿಕೊಂಡಿದ್ದರು. ನರೇಂದ್ರ ಮೋದಿ ಪ್ರಧಾನಿ ಆದರೆ ದೇಶದಲ್ಲಿ ಇರಲ್ಲ ಎಂದು ದೇವೇಗೌಡರು ಹೇಳಿದ್ದರು. 2006 ರಲ್ಲಿ ಕುಮಾರಸ್ವಾಮಿ ಬಿಜೆಪಿ ಜೊತೆ ಸೇರಿ ಸರ್ಕಾರ ಮಾಡಿದ್ರೆ ನನ್ನ ಹೆಣದ ಮೇಲೆ ಮಾಡಬೇಕು ಎಂದಿದ್ದರು. ಈಗ ಕೋಮುವಾದಿಗಳ ಜೊತೆ ಸೇರಿ ಷಡ್ಯಂತ್ರ ಮಾಡಿದ್ದೀರಿ. ನಮ್ಮ ಸರ್ಕಾರವನ್ನು ಕೆಡವಲು ದುಷ್ಟ ಪ್ರಯತ್ನ ಮಾಡುತ್ತಿದ್ದಾರೆ. ನಾನು 4 ದಶಕಗಳಿಂದ ರಾಜಕೀಯದಲ್ಲಿ ಇದ್ದೀನಿ. ಅಂದಿನಿಂದ ಇಂದಿನವರೆಗೆ ಅನೇಕ ಖಾತೆಗಳು ಸಿಕ್ಕಿವೆ. ಜನರ ಆಶೀರ್ವಾದದ ಫಲದಿಂದ ರಾಜಕೀಯದಲ್ಲಿ ಮುಂಚೂಣಿಯಲ್ಲಿದ್ದೇನೆ ಎಂದು ತಿರುಗೇಟು ನೀಡಿದರು.
ನನ್ನ ರಾಜಕೀಯದ 40 ವರ್ಷಗಳಲ್ಲಿ ಯಾವುದೇ ಕಪ್ಪುಚುಕ್ಕಿ ಇಲ್ಲ. ನನ್ನ ರಾಜಕೀಯ ಜೀವನ ತೆರೆದ ಪುಸ್ತಕವಿದ್ದ ಹಾಗೆ. ಇಷ್ಟೆಲ್ಲಾ ಅಧಿಕಾರ ಸಿಕ್ಕಿದರೂ ಆಸ್ತಿ ಮಾಡುವ ವ್ಯಾಮೋಹ ಬರಲಿಲ್ಲ. ನನ್ನ ಧರ್ಮ ಪತ್ನಿ ಪಾರ್ವತಿ ಸಾರ್ವಜನಿಕ ಕಾರ್ಯಕ್ರಮಕ್ಕೆ ಬಂದಿಲ್ಲ. ನಾನು ಪ್ರಮಾಣವಚನ ಸ್ವೀಕಾರ ಮಾಡುವಾಗಲೂ ಬಂದಿಲ್ಲ. ಇಲ್ಲಿರುವವರು ಅನೇಕರು ನನ್ನ ಹೆಂಡತಿ ಮುಖ ನೋಡಿಲ್ಲ. ಅವರು ತಪ್ಪು ಮಾಡಲು ಸಾಧ್ಯನಾ? ನಾನು ತಪ್ಪು ಮಾಡಲು ಸಾಧ್ಯನಾ? ನಾನು ರಾಜಕೀಯದಲ್ಲಿ ಇರುವವರೆಗೆ ಜನರಿಗೆ ದ್ರೋಹ ಮಾಡುವುದಿಲ್ಲ ಎಂದರು.
ಮುಡಾ ಹಗರಣದಲ್ಲಿ ತಾವು ಯಾವುದೇ ತಪ್ಪು .ಮಾಡಿಲ್ಲ. ಆದರೆ ತಮ್ಮ ರಾಜೀನಾಮೆ ಕೇಳಲು ಬಿಜೆಪಿ ಮತ್ತು ಜೆಡಿಎಸ್ ನಾಯಕರಿಗೆ ಯಾವ ನೈತಿಕತೆ ಇದೆ ಎಂದು ಅವರು ತರಾಟೆಗೆ ತೆಗೆದುಕೊಂಡರು.
ಯಡಿಯೂರಪ್ಪಗೆ ಮಾನ ಮರ್ಯಾದೆ ಇದ್ದಿದ್ರೆ ರಾಜಕೀಯದಿಂದ ನಿವೃತ್ತಿಯಾಗಬೇಕಿತ್ತು. 82 ವರ್ಷ ಯಡಿಯೂರಪ್ಪ ಲೈಂಗಿಕ ದೌರ್ಜನ್ಯ ಮಾಡಿ ಪೋಕ್ಸೋ ಕೇಸ್‍ನಲ್ಲಿ ಸಿಕ್ಕಿಹಾಕಿಕೊಂಡಿದ್ದಾರೆ. ಅವರು ನನ್ನ ರಾಜೀನಾಮೆ ಕೇಳ್ತಾರೆ. ಮಿಸ್ಟರ್ ಯಡಿಯೂರಪ್ಪ ನೀವು ಒಂದಾ, ಎರಡಾ 18, 20 ಹಗರಣಗಳಲ್ಲಿ ಸಿಕ್ಕಿದ್ದೀರಾ? ವಿಜಯೇಂದ್ರ ಅನೇಕ ಹಗರಣಗಳಲ್ಲಿ ಸಿಕ್ಕಿದ್ದಾರೆ. ಯತ್ನಾಳ್ ಈ ಬಗ್ಗೆ ಹೇಳಿದ್ದಾರೆ ಎಂದು ಬಿಜೆಪಿಗೆ ಟಾಂಗ್ ಕೊಟ್ಟಿದ್ದಾರೆ
ಈ ವೇಳೆ ಮಹಾತ್ಮ ಗಾಂಧಿಯವರು ದೇಶದ ಜನರಿಗೆ ಕರೆ ಕೊಟ್ಟದಿನ. ಬ್ರಿಟಿಷರಿಗೆ ಎಚ್ಚರಿಕೆ ಕೊಟ್ಟು ಕಹಳೆ ಊದಿದ ದಿನ. ಸ್ವಾತಂತ್ರ್ಯ ಹೋರಾಟಗಾರರು ತ್ಯಾಗ ಬಲಿದಾನ ಮಾಡಿ ಸ್ವಾತಂತ್ರ್ಯಾನಂತರ ತಂದು ಕೊಟ್ಟರು. ಆ ದಿನವೇ ಸಮಾವೇಶ ಮಾಡಬೇಕಾದ ಅನಿವಾರ್ಯತೆ ಎದುರಾಗಿದೆ ಎಂದು ತಿಳಿಸಿದರು.
ದೇಶದಲ್ಲಿ ಕೋಮುವಾದಿ, ಜಾತಿವಾದಿ, ಪಾಳೇಗಾರಿಕೆ ಪ್ರವೃತ್ತಿ ಇರೋರನ್ನು ರಾಜಕೀಯದಿಂದ ಓಡಿಸಬೇಕು. ಮನುವಾದಿಗಳು, ಜಾತಿವಾದಿಗಳು, ಶೋಷಿತರು ಅಧಿಕಾರ ಮಾಡೋದನ್ನು ಸಹಿಸಲ್ಲ. ದೇವರಾಜ ಅರಸು, ಬಂಗಾರಪ್ಪ, ಮಯ್ಲಿಯವರಿಗೆ ಇದೇ ಗತಿ ಆಗಿತ್ತು. ಧರ್ಮಸಿಂಗ್ ಅವರಿಗೆ ಕೊಟ್ಟ ಮಾತನ್ನು ತಪ್ಪಿದ್ದರು. ಬಿಜೆಪಿ ಜೊತೆ ಅಧಿಕಾರ ಮಾಡಿದ್ದರು. ಈ ಮನಸ್ಥಿತಿಯನ್ನು ವಿರೋಧಿಸಲು ಸಮಾವೇಶ ಮಾಡುತ್ತಿದ್ದೇವೆ ಎಂದು ಹೇಳಿದರು.