ಹಿಂಡಲಗಾ ಜೈಲಿನ ಮೇಲೆ ಖಾಕಿ ದಾಳಿ
ಬೆಳಗಾವಿ.ಆ.೧೦- ಸಾಕಷ್ಟು ದೂರುಗಳು ಕೇಳಿ ಬಂದ ಹಿನ್ನೆಲೆಯಲ್ಲಿ ಬೆಳಗಾವಿ ಹಿಂಡಲಗಾ ಕೇಂದ್ರ ಕಾರಾಗೃಹದ ಮೇಲೆ ಬೆಳ್ಳಂಬೆಳಗ್ಗೆ ಮಹಾನಗರ ಪೊಲೀಸರು ದಿಢೀರ್ ದಾಳಿ ನಡೆಸಿ
ಪರಿಶೀಲನೆ ನಡೆಸಿದ್ದಾರೆ.
ಇತ್ತೀಚೆಗೆ ಬೆಳಗಾವಿ ಕೇಂದ್ರ ಕಾರಾಗೃಹ ಸಾಕಷ್ಟು ವಿವಾದಗಳಿಂದ ಸುದ್ದಿಯಲ್ಲಿತ್ತು. ಪೊಲೀಸ್ ಆಯುಕ್ತ ಯಡಾ ಮಾರ್ಟಿನ್ ಮತ್ತು ಕಾನೂನು ಮತ್ತು ಸುವ್ಯವಸ್ಥೆ ವಿಭಾಗದ ಡಿಸಿಪಿ ರೋಹನ್ ಜಗದೀಶ್ ಸೇರಿ ೨೬೦ಕ್ಕೂ ಹೆಚ್ಚು ಪೊಲೀಸರು ಕಾರಾಗೃಹದ ಮೇಲೆ ಏಕಾಏಕಿ ದಾಳಿ ನಡೆಸಿದರು.
ದಾಳಿ ವೇಳೆ ತಂಬಾಕು, ಸಿಗರೇಟ್, ಎಲೆಕ್ಟ್ರಿಕಲ್ ಒಲೆ, ಹೀಟರ್ ವೈಯರ್ ವಶಕ್ಕೆ ತೆಗದುಕೊಳ್ಳಲಾಗಿದೆ. ಬೆಳಗಾವಿ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿ ಪೊಲೀಸರು ತನಿಖೆ ಮುಂದುವರೆಸಿದ್ದಾರೆ.
ದಾಳಿ ಕುರಿತು ಪೊಲೀಸ್ ಆಯುಕ್ತ ಯಡಾ ಮಾರ್ಟಿನ್, ತಂಬಾಕು, ಸಿಗರೇಟ್ ಸೇರಿದಂತೆ ಹಲವು ವಸ್ತುಗಳು ಜೈಲಿನೊಳಗೆ ಹೇಗೆ ಬಂದವು ಎನ್ನುವುದರ ಬಗ್ಗೆ ತನಿಖೆ ನಡೆಸಿ ವರದಿಯನ್ನು ಹಿರಿಯ ಅಧಿಕಾರಿಗಳಿಗೆ ನೀಡುತ್ತೇವೆ. ಮಾಹಿತಿ ಬಂದ ಹಿನ್ನೆಲೆಯಲ್ಲಿ ದಾಳಿ ಮಾಡಿರುವುದಾಗಿ ತಿಳಿಸಿದರು.