ಬ್ರೆಜಿಲ್‌ನಲ್ಲಿ ವಿಮಾನ ಪತನ ೭೦ ಮಂದಿ ಸಜೀವ ದಹನ
ಬ್ರೆಸಿಲಿಯಾ,ಆ.೧೦:ಬ್ರೆಜಿಲ್‌ನಲ್ಲಿ ಭೀಕರ ವಿಮಾನಪಘಾತ ಸಂಭವಿಸಿದ್ದು, ಚಾಲಕರೂ ಸೇರಿದಂತೆ ಎಲ್ಲ ೭೦ ಮಂದಿ ಸಜೀವ ದಹನವಾಗಿರುವ ದಾರುಣ ಘಟನೆ ಸಂಭವಿಸಿದೆ.
೬೨ ಪ್ರಯಾಣಿಕರೂ ಸೇರಿದಂತೆ ಒಟ್ಟು ೭೦ ಮಂದಿ ಇದ್ದ ವಿಮಾನ ಬ್ರೆಜಿಲ್‌ನ ಸಾವೋಪೌಲೋದಲ್ಲಿ ಪತನವಾಗಿದೆ. ನೋಡ ನೋಡುತ್ತಿದ್ದಂತೆ ವಿಮಾನ ಭೂಮಿಗೆ ಅಪ್ಪಳಿಸುತ್ತಿದ್ದಂತೆ ಬೆಂಕಿ ಹೊತ್ತಿಕೊಂಡು ಧಗಧಗನೆ ಹೊತ್ತಿ ಉರಿದಿದೆ. ಇಡೀ ಪ್ರದೇಶದಲ್ಲಿ ದಟ್ಟವಾದ ಕಪ್ಪು ಹೊಗೆ ಆವರಿಸಿತು.
ಕಾಸ್ಕಾವೆಲ್‌ನಿಂದ ಗುವಾರು ಲ್ಹೋಸ್‌ಗೆ ತೆರಳುತ್ತಿದ್ದ ವೇಳೆ ವಿನ್ಹೆಡೊ ರಾಜ್ಯದಲ್ಲಿ ವಿಮಾನ ಪತನಗೊಂಡಿದೆ. ಆದರೆ, ಅದೃಷ್ಟವಶಾತ್ ಈ ವಿಮಾನ ಜನವಸತಿ ಪ್ರದೇಶದಲ್ಲಿ ಪತನಗೊಂಡಿಲ್ಲ. ವಿಮಾನದಲ್ಲಿದ್ದ ಎಲ್ಲ ಪ್ರಯಾಣಿಕರು ಸುಟ್ಟು ಕರಕಲಾಗಿದ್ದಾರೆ.
ಇದು ಬ್ರೆಜಿಲ್‌ನಲ್ಲಿ ಇತ್ತೀಚೆಗೆ ಸಂಭವಿಸಿದ ಭೀಕರ ದುರಂತವಾಗಿದೆ. ವಿಮಾನ ಹಾರಾಟ ನಡೆಸುತ್ತಿರುವಾಗಲೇ ನಿಯಂತ್ರಣ ಕಳೆದುಕೊಂಡಿದೆ. ಆದರೆ, ಪತನಗೊಳ್ಳುವ ಮುನ್ನ ಬೆಂಕಿ ಕಾಣಿಸಿಕೊಂಡಿರಲಿಲ್ಲ. ಭೂಮಿಗೆ ಅಪ್ಪಳಿಸಿದ ರಭಸಕ್ಕೆ ಕೆಲವೇ ಕ್ಷಣಗಳಲ್ಲಿ ವಿಮಾನಕ್ಕೆ ಬೆಂಕಿ ಹೊತ್ತಿಕೊಂಡಿದೆ. ಸ್ಥಳಕ್ಕೆ ಭದ್ರತಾ ಸಿಬ್ಬಂದಿ, ಅಗ್ನಿಶಾಮಕ ದಳ ದೌಡಾಯಿಸುವ ವೆಳೆಗೆ ಎಲ್ಲ ಪ್ರಯಾಣಿಕರು ಸಾವನ್ನಪ್ಪಿದ್ದಾರೆ. ವಿಮಾನ ಅಪಘಾತದ ಭೀಕರ ದೃಶ್ಯಗಳು ಜಾಲತಾಣಗಳಲ್ಲಿ ಹರಿದಾಡುತ್ತಿವೆ.
ಸ್ಥಳಕ್ಕೆ ಭೇಟಿ ನೀಡುತ್ತಿರುವ ಪರಿಹಾರ ತಂಡ ಅವಶೇಷಗಳಿಂದ ಮೃತದೇಹಗಳನ್ನು ಹೊರ ತೆಗೆದು ಪ್ರಯಾಣಿಕರ ಗುರುತು ಪತ್ತೆ ಹಚ್ಚಲಾಗುತ್ತಿದೆ.
ಅಗ್ನಿಶಾಮಕ ಸಿಬ್ಬಂದಿ ಮೃತದೇಹಗಳನ್ನು ಹೊರ ತೆಗೆದು ಆಂಬ್ಯುಲೆನ್ಸ್‌ನಲ್ಲಿ ಸಾಗಿಸಲಾಗುತ್ತಿದೆ. ವಿಮಾನ ಅಪಘಾತಕ್ಕೆ ನಿಖರ ಕಾರಣ ಗೊತ್ತಾಗಲಿಲ್ಲ.ತನಿಖೆಗೆ ಆದೇಶಿಸಲಾಗಿದೆ.