ಗಾಜಾ ಶಾಲೆಯ ಮೇಲೆ ಇಸ್ರೇಲ್ ದಾಳಿ:ನೂರು ಮಂದಿ ಸಾವು
ಗಾಜಾ,ಆ.೧೦:ಇಸ್ರೇಲ್ ಸೇನಾ ಪಡೆಗಳು ಗಾಜಾ ನಗರದ ಶಾಲೆಯ ಮೇಲೆ ದಾಳಿ ನಡೆಸಿದ್ದರಿಂದ ೧೦೦ ಮಂದಿ ಸಾವನ್ನಪ್ಪಿದ್ದಾರೆ. ಇಸ್ರೇಲ್ ಸೇನಾಪಡೆ ಹಮಾಸ್ ಉಗ್ರರ ಕೇಂದ್ರಗಳನ್ನು ಗುರಿಯಾಗಿಸಿಕೊಂಡು ದಾಳಿ ನಡೆಸಿರುವುದಾಗಿ ತಿಳಿಸಿದೆ.
ಘಟನೆಯಲ್ಲಿ ಹಲವಾರು ಮಂದಿ ಗಾಯಗೊಂಡಿದ್ದು, ಪ್ಯಾಲೆಸ್ತೇನಿಯರಿಗೆ ವಸತಿ ವ್ಯವಸ್ಥೆ ಕಲ್ಪಿಸಿದ್ದ ಶಾಲಾ ಕಟ್ಟಡದ ಮೇಲೆ ಇಸ್ರೇಲ್ ಸೇನಾ ಪಡೆಗಳು ರಾಕೆಟ್ ಅಪ್ಪಳಿಸಿದವು ಎಂದು ರಕ್ಷಣಾ ವಕ್ತಾರ ಮಹ್ಮದ್ ಭಾಸ್ಸಲ್ ಮಾಹಿತಿ ನೀಡಿದ್ದಾರೆ.
ದಾಳಿಯಲ್ಲಿ ೧೦೦ಕ್ಕೂ ಹೆಚ್ಚು ಮಂದಿ ಸಾವನ್ನಪ್ಪಿದ್ದಾರೆಂದು ಗಾಜಾದ ಸರ್ಕಾರಿಮಾಧ್ಯಮ ಕಚೇರಿ ದೃಢಪಡಿಸಿದೆ. ಕೆಲವು ದೇಹಗಳು ಬೆಂಕಿಯಲ್ಲಿ ಬೇಯುತ್ತಿದ್ದು, ಭಯಾನಕ ಹತ್ಯಾಕಾಂಡಕ್ಕೆ ಸಾಕ್ಷಿಯಾಗಿದೆ.
ಶವಗಳನ್ನು ಹೊರ ತೆಗೆಯಲು ಹಾಗೂ ಗಾಯಾಳುಗಳನ್ನು ರಕ್ಷಿಸಲು ಸಿಬ್ಬಂದಿ ಪರಿಹಾರ ಕಾರ್ಯಾಚರಣೆಯಲ್ಲಿ ತೊಡಗಿದ್ದಾರೆ. ಇಸ್ರೇಲ್ ಸೇನೆ ಈ ಬಗ್ಗೆ ಪ್ರತಿಕ್ರಿಯೆ ನೀಡಿದ್ದು, ಶಾಲೆಯ ಕಟ್ಟಡದಲ್ಲಿ ಅಡಗಿರುವ ಹಮಾಸ್ ಕಮಾಂಡ್ ಮತ್ತು ಅದರ ನಿಯಂತ್ರಣ ಕೇಂದ್ರದಲ್ಲಿ ಕಾರ್ಯನಿರ್ವಹಿಸುತ್ತಿರುವ ಹಮಾಸ್ ಉಗ್ರರನ್ನು ಗುರಿಯಾಗಿಸಿಕೊಂಡು ದಾಳಿ ಮಾಡಲಾಗಿದೆ.
ಗಾಜಾನಗರದ ೨ ಶಾಲೆಗಳ ಮೇಲೆ ಇಸ್ರೇಲ್ ದಾಳಿ ಮಾಡಿದ್ದು, ೧೮ಕ್ಕೂ ಹೆಚ್ಚು ಜನರು ಸಾವನ್ನಪ್ಪಿದ್ದರು. ಇದರ ಬೆನ್ನಲ್ಲೆ ಹಮಾಸ್ ಕಮಾಂಡ್ ಸೆಂಟರ್‌ಗಳ ಮೇಲೆ ದಾಳಿ ನಡೆಸಿರುವುದಾಗಿ ಇಸ್ರೇಲ್ ಸೇನೆ ತಿಳಿಸಿತ್ತು.