ಕಂಚಿಗೆ ಕೊರೊಳೊಡ್ಡಿದ ಭಾರತ ಹಾಕಿ: ಶ್ರೀಜೇಶ್‍ಗೆ ಗೆಲುವಿನ ವಿದಾಯ
ಪ್ಯಾರಿಸ್: ಭಾರತ ಪುರುಷರ ಹಾಕಿ ತಂಡ ಸತತ ಎರಡನೆ ಬಾರಿ ಒಲಿಂಪಿಕ್ಸ್ ಕ್ರೀಡಾಕೂಟದಲ್ಲಿ ಕಂಚು ಗೆದ್ದು ಇತಿಹಾಸ ನಿರ್ಮಿಸಿದೆ. ಇದರೊಂದಿಗೆ ಭಾರತದ ಗೋಡೆ ಹಾಗೂ ತಾರಾ ಗೋಲ್ ಕೀಪರ್ ಶ್ರೀಜೇಶ್‍ಗೆ ಗೆಲುವಿನ ವಿದಾಯ ನೀಡಿದೆ.
ಕಂಚಿನ ಪದಕಕ್ಕಾಗಿ ನಡೆದ ಜಿದ್ದಾಜಿದ್ದಿನ ಪಂದ್ಯದಲ್ಲಿ ಭಾರತ ಪುರುಷರ ಹಾಕಿ ತಂಡ ಸ್ಪೇನ್ ವಿರುದ್ಧ 2-1 ಗೋಲುಗಳ ಅಂತರದಿಂದ ಗೆಲುವು ಸಾಸಿತು. ಮತ್ತೆ ನಾಯಕನ ಆಟವಾಡಿದ ನಾಯಕ ಹರ್ಮನ್‍ಪ್ರೀತ್ ಸಿಂಗ್ ಎರಡು ಗೋಲುಗಳನ್ನು ಹೊಡೆದು ತಂಡದ ಗೆಲುವಿನಲ್ಲಿ ಪ್ರಮುಖ ಪಾತ್ರವಹಿಸಿದರು.
ನಾಯಕ ಹರ್ಮನ್‍ಪ್ರೀತ್ (30 ಮತ್ತು 33ನೇ ನಿಮಿಷ) ಎರಡು ಪೆನಾಲ್ಟಿ ಕಾರ್ನರ್‍ಗಳನ್ನು ಗೋಲುಗಳನ್ನಾಗಿ ಪರಿವರ್ತಿಸಿದರು. ಸ್ಪೇನ್ ಪರ ನಾಯಕ ಮಾರ್ಕ್ ಮಿರಾಲೆಸ್ 18ನೇ ನಿಮಿಷದಲ್ಲಿ ಪೆನಾಲ್ಟಿ ಪಡೆದು ಗೋಲು ಬಾರಿಸಿದರು.
ಮೊನ್ನೆ ಜರ್ಮನಿ ವಿರುದ್ಧ ಸೆಮಿಫೈನಲ್‍ನಲ್ಲಿ 2-3 ಗೋಲುಗಳ ಅಂತರದಿಂದ ಪರಾಭವಗೊಂಡು ನಿರಾಸೆ ಅನುಭವಿಸಿತ್ತು. ಕ್ರೀಡಾಕೂಟದಲ್ಲಿ ಉತ್ತಮ ಪ್ರದರ್ಶನ ನೀಡಿ ಗಮನ ಸೆಳೆದಿತ್ತು.
ಕಂಚಿನ ಪದಕ ಗೆಲ್ಲಲ್ಲೇಬೇಕೆಂದು ಪಣ ತೊಟ್ಟು ಕಣಕ್ಕಿಳಿದಿದ್ದ ಹರ್ಮನ್‍ಪ್ರೀತ್ ಪಡೆ ಮಾನಸಿಕ ಸಾಮಥ್ರ್ಯವನ್ನು ಮತ್ತೊಮ್ಮೆ ಸಾಬೀತುಪಡಿಸಿ ಪದಕ ಗೆಲ್ಲುವಲ್ಲಿ ಯಶಸ್ವಿಯಾಯಿತು.