ಬಿಜೆಪಿ ಸುಳ್ಳಿನ ವಿರುದ್ಧ ಕಾಂಗ್ರೆಸ್ ಜನಾಂದೋಲನ
ಬೆಂಗಳೂರು, ಆ. ೪- ಬಿಜೆಪಿಯ ಸುಳ್ಳಿನ ಇತಿಹಾಸವನ್ನು ಸಾರ್ವಜನಿಕರಿಗೆ ತಿಳಿಸಲು ಕಾಂಗ್ರೆಸ್ ಜನಾಂದೋಲನ ಮಾಡುತ್ತಿದೆ ಎಂದು ಸಾರಿಗೆ ಮತ್ತು ಮುಜರಾಯಿ ಸಚಿವ ರಾಮಲಿಂಗಾರೆಡ್ಡಿ ಅವರು ತಿಳಿಸಿದರು.
ಮೈಸೂರು ಎಲೆಕ್ಟ್ರಿಕಲ್ ಇಂಡಸ್ಟ್ರೀಸ್ ಲಿಮಿಟೆಡ್ ವತಿಯಿಂದ ಕೊಡಗು ಮತ್ತು ಕೇರಳ ಮಳೆ ಸಂತ್ರಸ್ತರಿಗೆ ಅಗತ್ಯ ಪರಿಹಾರ ಸಾಮಗ್ರಿಗಳಿಗೆ ಇಂದು ಚಾಲನೆ ನೀಡಿ ಮಾತನಾಡಿದ ಅವರು, ಮುಡಾದಲ್ಲಿ ಮುಖ್ಯಮಂತ್ರಿ ಪತ್ನಿ ಹೆಸರಿನಲ್ಲಿ ಸೈಟ್ ನೀಡಿರುವುದು ತಪ್ಪು ಎಂದಾದರೆ ಅಂದಿನ ಬಿಜೆಪಿ ಸರ್ಕಾರದ ಮುಖ್ಯಮಂತ್ರಿಗಳು ತಪ್ಪು ಮಾಡಿದ್ದಾರೆ ಎಂದರ್ಥ. ರಾಜ್ಯಪಾಲರು ಮುಖ್ಯಮಂತ್ರಿಗಳಿಗೆ ನೋಟಿಸ್ ನೀಡಿರುವುದು ದೆಹಲಿ ನಾಯಕರ ಒತ್ತಡದಿಂದ ಎಂದು ತಿಳಿಸಿದರು.
ಮೈಸೂರು ಎಲೆಕ್ಟ್ರಿಕಲ್ ಸಂಸ್ಥೆಯವರು ಕೊಡಗು, ಕೇರಳ ಸಂತ್ರಸ್ತರಿಗೆ ಅಗತ್ಯ ವಸ್ತುಗಳನ್ನು ಕಳುಹಿಸಿಕೊಡುತ್ತಿದ್ದಾರೆ.
ಸರ್ಕಾರ ಜೊತೆಯಲ್ಲಿ ಸಾರ್ವಜನಿಕರ ಸಹಕಾರ, ಸಹಾಯವಿದ್ದರೆ ಸಂಕಷ್ಟಗಳು ಪರಿಹಾರ ವೇಗವಾಗಿ ಆಗುತ್ತದೆ ಎಂದು ಹೇಳಿದರು.
ಸಂಸ್ಥೆಯ ಅಧ್ಯಕ್ಷರಾದ ಎಸ್.ಮನೋಹರ್ ರವರು ಮಾತನಾಡಿ ಮನುಜಮತ ವಿಶ್ವಪಥ ರಾಷ್ಟ್ರ ಕವಿ ಕುವೆಂಪು ರವರ ಸಂದೇಶದಂತೆ, ಮನುಷ್ಯ, ಮನುಷ್ಯರಿಗೆ ಸಹಾಯ, ಸಹಕಾರ ನೀಡಿದಾಗ ಮಾತ್ರ ಮನುಷ್ಯ ಜನ್ಮ ಸಾರ್ಥಕ ಎಂದರು.
ಮಳೆ ಪ್ರವಾಹದಿಂದ ಕೊಡಗು ಮತ್ತು ಕೇರಳ ರಾಜ್ಯಕ್ಕೆ ಅಗತ್ಯ ವಸ್ತುಗಳನ್ನು ಮೈಸೂರ್ ಎಲೆಕ್ಟ್ರಿಕಲ್ ಇಂಡಸ್ಟ್ರೀಸ್ ಲಿಮಿಟೆಡ್ ಸಂಸ್ಥೆ ವತಿಯಿಂದ ಅಂದಾಜು ೧೫ಲಕ್ಷ ರೂಪಾಯಿ ಅಗತ್ಯ ವಸ್ತುಗಳನ್ನು ರವಾನೆ ಮಾಡಲಾಗುತ್ತಿದೆ ಎಂದು ಹೇಳಿದರು.
ವ್ಯವಸ್ಥಾಪಕ ನಿರ್ದೇಶಕರಾದ ಸಿ.ಎನ್.ಶ್ರೀಧರ್, ಮುಖಂಡರಾದ ಜಿ. ಜನಾರ್ದನ್, ಎ. ಆನಂದ್, ಪುಟ್ಟರಾಜು, ಮತ್ತಿತರರು ಉಪಸ್ಥಿತರಿದ್ದರು.