ಪರಿಶಿಷ್ಟ ಜಾತಿ ಉಪವರ್ಗೀಕರಣ: ಇಂಡಿಯಾ ಸಭೆ
ನವದೆಹಲಿ,ಆ.೮- ಪರಿಶಿಷ್ಟ ಜಾತಿಗಳ ಉಪವರ್ಗೀಕರಣದ ಕುರಿತು ಸುಪ್ರೀಂಕೋರ್ಟ್ ಮಹತ್ವದ ತೀರ್ಪು ನೀಡಿರುವ ಹಿನ್ನೆಲೆಯಲ್ಲಿ ಈ ಬಗ್ಗೆ ಇಂಡಿಯಾ ಮೈತ್ರಿಕೂಟದ ನಾಯಕರು ಮತ್ತು ನಾಗರಿಕ ಸಮುದಾಯಗಳೊಂದಿಗೆ ವಿಸ್ತೃತ ಸಮಾಲೋಚನೆ ನಡೆಸಲು ಕಾಂಗ್ರೆಸ್ ಮುಂದಾಗಿದೆ.
ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ನೇತೃತ್ವದ ದಲ್ಲಿ ಪ್ರಮುಖ ನಾಯಕರೊಂದಿಗೆ ಚಿಂತನ ಮಂಥನ ನಡೆಸಿದ್ದು ಅಲ್ಲಿ ಈ ಅಭಿಪ್ರಾಯ ವ್ಯಕ್ತವಾಗಿದೆ.
ಈ ರೀತಿಯ ಸೂಕ್ಷ್ಮ ವಿಷಯದ ಕುರಿತು ಪ್ರತಿಕ್ರಿಯೆಗಾಗಿ ಪಕ್ಷದ ರಾಜ್ಯ ಘಟಕಗಳು, ಮುಖ್ಯಮಂತ್ರಿಗಳು, ಇಂಡಿಯಾ ಮೈತ್ರಿಕೂಟ ದ ಪಕ್ಷಗಳ ಅಭಿಪ್ರಾಯ ಪಡೆಯಲು ಮುಂದಾಗಿದೆ ಎನ್ನಲಾಗಿದೆ.ಜೊತೆಗೆ ಈ ಕುರಿತು ನಾಗರಿಕ ಸಮಾಜದ ಸದಸ್ಯರೊಂದಿಗೆ ವ್ಯಾಪಕ ಸಂವಾದ ನಡೆಸಲು ನಿರ್ಧರಿಸಿ ಅಲ್ಲಿ ಬರುವ ಅಭಿಪ್ರಾಯ ಆಲಿಸಿ ಮುಂದಿನ ನಿರ್ಧಾರ ಕೈಗೊಳ್ಳಲು ನಿರ್ಧರಿಸಿದೆ. ಸಭೆಯಲ್ಲಿ ಭಾಗವಹಿಸುವವರ ವೈಯಕ್ತಿಕ ಅಭಿಪ್ರಾಯಗಳನ್ನು ಸಂಗ್ರಹಿಸಲಾಗಿದೆ ಎಂದು ಮೂಲಗಳು ತಿಳಿಸಿವೆ.
ಅವರಲ್ಲಿ ಹಲವರು ತೀರ್ಪಿನ “ಕೆನೆ ಪದರ” ಪರಿಕಲ್ಪನೆಯನ್ನು ಎಸ್‌ಸಿ ಮತ್ತು ಎಸ್‌ಟಿಗಳಿಗೆ ವಿಸ್ತರಿಸಿರುವುದನ್ನು ಟೀಕಿಸಿದ್ದಾರೆ. ಏತನ್ಮಧ್ಯೆ, ಲೋಕಸಭೆಯಲ್ಲಿ ಡಿಎಂಕೆಯ ಎ ರಾಜಾ ಅವರು ಎಸ್‌ಸಿ/ಎಸ್‌ಟಿಗಳಿಗೆ “ಕೆನೆ ಪದರ” ವನ್ನು ಟೀಕಿಸಿದರು ಮತ್ತು ನ್ಯಾಯಾಲಯದ ತೀರ್ಪಿನಲ್ಲಿ ಎರಡು ಸಮುದಾಯಗಳ ಹಕ್ಕುಗಳನ್ನು ರಕ್ಷಿಸಲು ರಕ್ಷಣಾತ್ಮಕ ಕ್ರಮಗಳನ್ನು ಪರಿಚಯಿಸಲು ಸರ್ಕಾರವನ್ನು ಒತ್ತಾಯಿಸಿದ್ದಾರೆ.
ಉಪವರ್ಗೀಕರಣದ ಸಾಧಕ-ಬಾಧಕಗಳ ಕುರಿತಿ ಬಿಎಸ್‌ಪಿಯ ಮಾಯಾವತಿ ಮತ್ತು ಬಿಜೆಪಿ ಮಿತ್ರ ಪಕ್ಷ ಎಲ್‌ಜೆಪಿಯ ಚಿರಾಗ್ ಪಾಸ್ವಾನ್ ಅವರ ಅಭಿಪ್ರಾಯ ಉಲ್ಲೇಖಿಸಿದ್ದಾರೆ.
ಸಭೆಯಲ್ಲಿ ಸೋನಿಯಾ ಗಾಂಧಿ, ರಾಹುಲ್ ಗಾಂಧಿ, ಕೆಸಿ ವೇಣುಗೋಪಾಲ್, ಅಭಿಷೇಕ್ ಸಿಂಘ್ವಿ, ವಿವೇಕ್ ತಂಖಾ, ಚರಂಜಿತ್ ಚನ್ನಿ, ಕುಮಾರಿ ಸೆಲ್ಜಾ, ಪಿಎಲ್ ಪುನಿಯಾ, ಮುಕುಲ್ ವಾಸ್ನಿಕ್, ರಣದೀಪ್ ಸುರ್ಜೆವಾಲಾ, ಉದಿತ್ ರಾಜ್, ರಾಜೇಶ್ ಲಿಲೋಥಿಯಾ, ನಾಸಿರ್ ಹುಸೇನ್ ಮತ್ತು ಜೈರಾಮ್ ರಮೇಶ್ ಇದ್ದರು.
ಕಾಂಗ್ರೆಸ್, ಇತರ ಪಕ್ಷಗಳಂತೆ, ಉಪವರ್ಗೀಕರಣದ ಬಗ್ಗೆ ಎಚ್ಚರಿಕೆಯಿಂದ ಹೆಜ್ಜೆ ಹಾಕುತ್ತಿರುವಾಗ, ದೀರ್ಘಕಾಲದ ಮೀಸಲಾತಿ ಪೈ ಕುಗ್ಗುತ್ತಿರುವ ಇತರ ರಂಗಗಳ ಮೇಲೆ ಒತ್ತಡವನ್ನು ಹೆಚ್ಚಿಸುವ ಅಗತ್ಯವಿದೆ ಎಂದು ಮೂಲಗಳು ತಿಳಿಸಿವೆ.ಒಟ್ಟು ಎಸ್‌ಸಿ/ಎಸ್‌ಟಿ/ಒಬಿಸಿ ಮೀಸಲಾತಿಯಲ್ಲಿನ ಶೇಕಡಾ ೫೦ ರಷ್ಟು ನಿರ್ಬಂಧವನ್ನು ಸಾಂವಿಧಾನಿಕ ತಿದ್ದುಪಡಿಯ ಮೂಲಕ ಸಡಿಲಗೊಳಿಸಬೇಕೆಂಬ ತನ್ನ ಬೇಡಿಕೆಯನ್ನು ಪಕ್ಷ ಕೇಂದ್ರದ ಮೇಲೆ ಒತ್ತಡ ಹೇರಲು ಮುಂದಾಗಿದೆ ಎನ್ನಲಾಗಿದೆ., “ಬ್ಯಾಕ್‌ಲಾಗ್ ಖಾಲಿ ಹುದ್ದೆಗಳನ್ನು” ತುಂಬಲು ಮತ್ತು ಹೊರಗುತ್ತಿಗೆ ಯೋಜನೆಗಳಲ್ಲಿ ಕೋಟಾ ಭರ್ತಿ ಮಾಡಲು ಒತ್ತಾಯಿಸಲಾಗಿದೆ ಎನ್ನಲಾಗಿದೆ.