ಅಂಟು ಕಾರ್ಖಾನೆಯಲ್ಲಿ ಬೆಂಕಿ: ಮೂವರು ಗಂಭೀರ, ಓರ್ವ ನಾಪತ್ತೆ
ಬೆಳಗಾವಿ,ಆ.೭-ನಗರದ ಹೊರವಲಯದ ನಾವಗೆ ಗ್ರಾಮದ ಬಳಿಯಿರುವ ಟಿಕ್ಸ್ ಟೇಪ್ (ಅಂಟು) ಕಾರ್ಖಾನೆಯಲ್ಲಿ ಬೃಹತ್ ಪ್ರಮಾಣದ ಬೆಂಕಿ ಹೊತ್ತಿಕೊಂಡು ಮೂವರು ಕಾರ್ಮಿಕರು ಸ್ಥಿತಿ ಚಿಂತಾಜನಕವಾಗಿದ್ದು, ಮತ್ತೊಬ್ಬ ಕಾರ್ಮಿಕ ಕಾಣೆಯಾಗಿದ್ದಾನೆ.
ಕಾರ್ಮಿಕರಾದ ಬೆಳಗಾವಿ ತಾಲ್ಲೂಕಿನ ಕವಳವಾಡಿಯ ಮಾರುತಿ ನಾರಾಯಣ ಕರವೇಕರ (೩೨), ಜುನೇಬೆಳಗಾವಿಯ ಯಲ್ಲಪ್ಪ ಪ್ರಕಾಶ ಸಲಗುಡೆ (೩೫), ರಾಝವಾಡಿಯ ರಂಜೀತ ದಶರಥ ಪಾಟೀಲ (೩೯) ಗಾಯಗೊಂಡಿದ್ದು ಅವರನ್ನು ಜಿಲ್ಲಾ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ, ಮೂವರ ಸ್ಥಿತಿಯೂ ಚಿಂತಾಜನಕವಾಗಿದ್ದು, ಹೆಚ್ಚಿನ ಚಿಕಿತ್ಸೆಗೆ ಕೆಎಲ್‌ಇ ಆಸ್ಪತ್ರೆಗೆ ಸಾಗಿಸಲಾಗಿದೆ.
ಮಾರ್ಕಂಡೇಯ ನಗರದ ಯಲ್ಲಪ್ಪ (೨೦) ಎಂಬ ಕಾರ್ಮಿಕ ಇನ್ನೂ ಕಾರ್ಖಾನೆ ಒಳಗೇ ಸಿಲುಕಿದ್ದಾರೆ ಎಂದು ಕಾರ್ಮಿಕರು ಮಾಹಿತಿ ನೀಡಿದ್ದಾರೆ.
ಯುವಕನ ಸಂಬಂಧಿಕರು ಕಾರ್ಖಾನೆ ಆವರಣದಲ್ಲಿ ಜಮಾಯಿಸಿದ್ದು ಹೆತ್ತವರ ಆಕ್ರಂದನ ಮುಗಿಲುಮುಟ್ಟಿದೆ. ಮಗನನ್ನು ರಕ್ಷಿಸುವಂತೆ ದೇವರಲ್ಲಿ ಅಂಗಲಾಚುತ್ತಿದ್ದಾರೆ.
ಸ್ನೇಹಂ ಹೆಸರಿನ ಕಾರ್ಖಾನೆ ಇದಾಗಿದ್ದು ಮೂರು ಶಿಫ್ಟ್‌ಗಳಲ್ಲಿ ತಲಾ ೭೪ ಕಾರ್ಮಿಕರು ಕೆಲಸ ಮಾಡುತ್ತಿದ್ದರು. ಸ್ಥಳಕ್ಕೆ ಜಿಲ್ಲಾಧಿಕಾರಿ ಮೊಹಮ್ಮದ್ ರೋಷನ್, ಪೊಲೀಸ್ ಆಯುಕ್ತ ಯಡಾ ಮಾರ್ಟಿನ್ ಮಾರ್ಬನ್ಯಾಂಗ್, ಡಿಸಿಪಿ ರೋಹನ್ ಜಗದೀಶ ಭೇಟಿ ನೀಡಿ, ಪರಿಶೀಲನೆ ನಡೆಸಿದರು.
ಸ್ನೇಹಂ ಕಾರ್ಖಾನೆಯ ಮಾಲೀಕರನ್ನು ವಶಕ್ಕೆ ಪಡೆಯಲಾಗಿದೆ. ಒಳಗೆ ಎಷ್ಟು ಜನ ಸಿಲುಕಿದ್ದಾರೆ ಎಂದು ಗೊತ್ತಾಗಿಲ್ಲ. ಇದೊಂದು ದೊಡ್ಡ ಅವಘಡ. ಮುಂಜಾಗ್ರತಾ ಕ್ರಮವಾಗಿ ಜಿಲ್ಲಾ ಆಸ್ಪತ್ರೆಯಲ್ಲಿ ೨೦೦ ಬೆಡ್ ಸಿದ್ಧಗೊಳಿಸಲಾಗಿದೆ. ಆರು ಅಗ್ನಿಶಾಮಕ ವಾಹನಗಳ ಸಮೇತ ಹಲವು ಸಿಬ್ಬಂದಿ ಬೆಂಕಿ ನಂದಿಸುವಲ್ಲಿ ನಿರತರಾಗಿದ್ದಾರೆ. ಕಾರ್ಖಾನೆಯ ಸುತ್ತ ಮನೆಗಳಿದ್ದು, ಜನರು ಆತಂಕ ಪಡಬೇಕಾಗಿಲ್ಲ. ಕಾರ್ಖಾನೆಯಲ್ಲಿನ ಗ್ಯಾಸ್ ಸಿಲಿಂಡರ್‌ಗಳು ಸ್ಫೋಟಗೊಳ್ಳುವ ಸಾಧ್ಯತೆ ಇಲ್ಲ ಎಂದು ಪರಿಣಿತರು ಖಚಿತಪಡಿಸಿದ್ದಾರೆ.
’ಕಾರ್ಖಾನೆಯ ಲಿಫ್ಟ್‌ನಲ್ಲಿ ವಿದ್ಯುತ್ ಶಾರ್ಟ್ ಸರ್ಕ್ಯೂಟ್ ಆಗಿದೆ. ಅಲ್ಲಿ ಹೊತ್ತಿಕೊಂಡ ಬೆಂಕಿ ಕೆಲವೇ ಕ್ಷಣಗಳಲ್ಲಿ ಇಡೀ ಕಾರ್ಖಾನೆ ತುಂಬಾ ವ್ಯಾಪಿಸಿದೆ. ಟಿಕ್ಸೊ ಟೇಪ್ ತಯಾರಿಸಲು ಬಳಸುತ್ತಿದ್ದ ಕೆಲ ಸಲಕರಣೆಗಳು ಬೆಂಕಿ ಹೆಚ್ಚಲು ಕಾರಣವಾಗಿದೆ. ಬೆಂಕಿ ಕಂಡು ಜೀವ ಉಳಿಸಿಕೊಳ್ಳಲು ಕಾರ್ಖಾನೆಯಿಂದ ಕಾರ್ಮಿಕರು ದಿಕ್ಕಾಪಾಲಾಗಿ ಓಡಿದರು’ ಎಂದು ಗ್ರಾಮಸ್ಥರು ಮಾಹಿತಿ ನೀಡಿದ್ದಾರೆ.