ಬಾಂಗ್ಲಾ ಹಿಂಸಾಚಾರ ಹತ್ತಿಕ್ಕಲು ಕರ್ಫ್ಯೂ ಜಾರಿ
ಢಾಕಾ,ಆ.೫- ಸರ್ಕಾರಿ ಉದ್ಯೋಗದಲ್ಲಿ ಮೀಸಲಾತಿ ವಿಷಯ ಮುಂದಿಟ್ಟುಕೊಂಡು ಬಾಂಗ್ಲಾದೇಶದಲ್ಲಿ ನಡೆಯುತ್ತಿರುವ ವಿದ್ಯಾರ್ಥಿಗಳು ಮತ್ತು ಭದ್ರತಾ ಪಡೆಗಳ ಸಂಘರ್ಷದಲ್ಲಿ ನೂರಕ್ಕೂ ಅಧಿಕ ಮಂದಿ ಮೃತಪಟ್ಟಿದ್ದು ಪರಿಸ್ಥಿತಿ ನಿಯಂತ್ರಣಕ್ಕೆ ತರಲು ರಾಜಧಾನಿ ಢಾಕಾ ಸೇರಿದಂತೆ ಹಲವು ಸೂಕ್ಷ್ಮ ಪ್ರದೇಶಗಳಲ್ಲಿ ಕರ್ಫ್ಯೂ ವಿಧಿಸಲಾಗಿದೆ
ಬಾಂಗ್ಲಾದೇಶಾದ್ಯಂತ ನಡೆಯುತ್ತಿರುವ ಹಿಂಸಾಚಾರದಲ್ಲಿ ೧೪ ಪೊಲೀಸರು ಸಾವನ್ನಪ್ಪಿದ್ದಾರೆ. ಅವರಲ್ಲಿ ೧೩ ಮಂದಿ ಸಿರಾಜ್‌ಗಂಜ್‌ನ ಎನಾಯೆತ್‌ಪುರ ಪೊಲೀಸ್ ಠಾಣೆ ಸಿಬ್ಬಂದಿಯಾಗಿದ್ದಾರೆ. ಕೊಮಿಲ್ಲಾದ ಎಲ್ಲಿಯೋಟ್‌ಗಂಜ್‌ನಲ್ಲಿ ಒಬ್ಬ ಪೊಲೀಸ್ ಮೃತಪಟ್ಟಿದ್ದಾರೆ. ಜೊತೆಗೆ ೩೦೦ಕ್ಕೂ ಹೆಚ್ಚು ಪೊಲೀಸರು ಗಾಯಗೊಂಡಿದ್ದಾರೆ.
ಬಾಂಗ್ಲಾದೇಶದಲ್ಲಿ ಹಿಂಸಾಚಾರ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಭಾರತೀಯ ಪ್ರಜೆಗಳು ಬಾಂಗ್ಲಾದೇಶಕ್ಕೆ ಪ್ರಯಾಣಿಸದಂತೆ ಕೇಂದ್ರ ಸರ್ಕಾರ ಸಲಹೆ ನೀಡಿದೆ.
ಈ ಕುರಿತು ಪ್ರತಿಕ್ರಿಯೆ ನೀಡಿರುವ ವಿದೇಶಾಂಗ ವ್ಯವಹಾರಗಳ ಸಚಿವಾಲಯ, ಮುಂದಿನ ಸೂಚನೆ ಬರುವವರೆಗೆ ಬಾಂಗ್ಲಾದೇಶಕ್ಕೆ ಪ್ರಯಾಣಿಸದಂತೆ ಭಾರತೀಯ ಪ್ರಜೆಗಳಿಗೆ ಕಟ್ಟುನಿಟ್ಟಿನ ಸೂಚನೆ ನೀಡಿದ್ದು ಪ್ರಸ್ತುತ ಬಾಂಗ್ಲಾದೇಶದಲ್ಲಿರುವ ಎಲ್ಲಾ ಭಾರತೀಯರು ತೀವ್ರ ಎಚ್ಚರಿಕೆ ವಹಿಸಲು, ತಮ್ಮ ಚಲನವಲನಗಳನ್ನು ನಿರ್ಬಂಧಿಸಲು ಮತ್ತು ಢಾಕಾದಲ್ಲಿರುವ ಭಾರತ ರಾಯಬಾರ ಕಚೇರಿ ಸೂಚಿಸಿದೆ
ಪ್ರಧಾನಿ ರಾಜಿನಾಮೆಗೆ ಆಗ್ರಹ
ಬಾಂಗ್ಲಾದೇಶದ ವಿವಿಧ ಭಾಗಗಳಲ್ಲಿ ನಡೆಯುತ್ತಿರುವ ಪ್ರತಿಭಟನೆ ಮತ್ತು ಹಿಂಸಾಚಾರ ತೀವ್ರ ಸ್ವರೂಪ ಪಡೆದುಕೊಂಡಿರುವ ಹಿನ್ನೆಲೆಯಲ್ಲಿ ಪ್ರಧಾನಿ ಶೇಖ್ ಹಸೀನಾ ಅವರ ರಾಜೀನಾಮೆಗೆ ಒತ್ತಾಯಿಸಿ ದೇಶಾದ್ಯಂತ ಹೋರಾಟ ಮತ್ತಷ್ಟು ತೀವ್ರತೆ ಪಡೆದುಕೊಂಡಿದೆ.
ಉದ್ಯೋಗ ಕೋಟಾ ವ್ಯವಸ್ಥೆಗೆ ಸಂಬಂಧಿಸಿದಂತೆ ಪ್ರಧಾನಿ ರಾಜೀನಾಮೆಗೆ ಆಗ್ರಹಿಸಿ ಹೋರಾಟ ನಡೆಯುತ್ತಿದೆ. ಅಸಹಕಾರ ಕಾರ್ಯಕ್ರಮದ ಭಾಗವಾಗಿ ಪ್ರತಿಭಟನಾಕಾರರು ಅವಾಮಿ ಲೀಗ್, ಛತ್ರ ಲೀಗ್ ಬೆಂಬಲಿಗರಿಂದ ವಿರೋಧದಿಂದ ಮತ್ತೆ ಹಿಂಸಾಚಾರಕ್ಕೆ ಕಾರಣವಾಗಿದೆ
ಬಾಂಗ್ಲಾದೇಶದ ಸ್ವಾತಂತ್ರ್ಯ ಸಂಗ್ರಾಮದಲ್ಲಿ ಹೋರಾಡಿದ ಅನುಭವಿಗಳ ಸಂಬಂಧಿಕರಿಗೆ ಸರ್ಕಾರಿ ಉದ್ಯೋಗಗಳಲ್ಲಿ ೩೦ ಪ್ರತಿಶತ ಮೀಸಲಿಡುವ ವಿವಾದಾತ್ಮಕ ಕೋಟಾ ವ್ಯವಸ್ಥೆ ಕೊನೆಗೊಳಿಸಬೇಕೆಂದು ಒತ್ತಾಯಿಸಿ ಪೊಲೀಸರು ಮತ್ತು ಹೆಚ್ಚಾಗಿ ವಿದ್ಯಾರ್ಥಿ ಪ್ರತಿಭಟನಾಕಾರರ ನಡುವಿನ ಹಿಂಸಾತ್ಮಕ ಘರ್ಷಣೆಯಲ್ಲಿ ೨೦೦ ಕ್ಕೂ ಹೆಚ್ಚು ಜನರು ಸಾವನ್ನಪ್ಪಿದ ಹಲವು ದಿನಗಳ ನಂತರ ಹೊಸದಾಗಿ ಪ್ರತಿಭಟನೆ ನಡೆದಿದೆ