ರಾಜ್ಯಪಾಲರನ್ನು ಭೇಟಿಯಾದ ಟಿ.ಜೆ.ಅಬ್ರಾಹಂ: ಇನ್ನಷ್ಟು ದಾಖಲೆ ಸಲ್ಲಿಕೆ
ಬೆಂಗಳೂರು, ಆ.7- ಮುಡಾ ಹಗರಣಕ್ಕೆ ಸಂಬಂಧಿಸಿದಂತೆ ಮುಖ್ಯಮಂತ್ರಿ ಸಿದ್ದರಾಮಯ್ಯ ವಿರುದ್ಧ ಇನ್ನಷ್ಟು ದಾಖಲೆಗಳನ್ನು ಆರ್ ಟಿಐ ಕಾರ್ಯಕರ್ತ ಟಿ.ಜಿ.ಅಬ್ರಹಾಂ ಇಂದು ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್ ಅವರಿಗೆ ಸಲ್ಲಿಸಿದ್ದಾರೆ.
ರಾಜಭವನಕ್ಕೆ ಬರುವಂತೆ ರಾಜ್ಯಪಾಲರು ಸೂಚನೆಯ ಮೇರೆಗೆ ಅಬ್ರಹಾಂ ಭೇಟಿ ಮಾಡಿದ್ದರು. ಇದು ರಾಜಕೀಯ ವಲಯಗಳಲ್ಲಿ ಸಾಕಷ್ಟು ಕುತೂಹಲ ಕೆರಳಿಸಿದೆ.
ಮುಡಾ ಹಗರಣ ಕುರಿತು ಮತ್ತಷ್ಟು ದಾಖಲೆಗಳನ್ನು ರಾಜ್ಯಪಾಲರು ಕೇಳಿದ್ದಾರೆ ಎನ್ನಲಾಗಿದೆ. ಹೀಗಾಗಿ ಸಿಎಂ ವಿರುದ್ಧ ಪ್ರಾಸಿಕ್ಯೂಷನ್‌ ಗೆ ರಾಜ್ಯಪಾಲರು ಅನುಮತಿ ಕೊಡುತ್ತಾರಾ ಎಂಬ ಪ್ರಶ್ನೆಗಳು ಹುಟ್ಟುಹಾಕಿವೆ.
ರಾಜ್ಯಪಾಲರ ಭೇಟಿಯ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅಬ್ರಹಾಂ, ಸಿಎಂ ವಿರುದ್ಧ ಪ್ರಾಸಿಕ್ಯೂಷನ್ ನನ್ನ ಬೇಡಿಕೆ ಏನಿತ್ತೋ ಅದರ ಮೇರೆಗೆ ಸರ್ಕಾರಕ್ಕೆ ರಾಜ್ಯಪಾಲರು ಶೋಕಾಸ್ ನೊಟೀಸ್ ಕೊಟ್ಟಿದ್ದರು. ಆದರೆ ಸಚಿವ ಸಂಪುಟ ಸಿಎಂ ತಪ್ಪಿಲ್ಲ, ರಾಜ್ಯಪಾಲರು ನೋಟಿಸ್ ಕೊಟ್ಟಿರೋದೇ ತಪ್ಪು ಅಂತ ನಿರ್ಣಯ ಕೈಗೊಂಡಿದೆ. ತಾವು ಸರಿಯಿಲ್ಲ ಅಂತಲೂ ಸರ್ಕಾರ ಆಪಾದನೆ ಮಾಡಿದೆ. ಈ ಹಿನ್ನೆಲೆಯಲ್ಲಿ ಮುಡಾ ಪ್ರಕರಣದ ಬಗ್ಗೆ ರಾಜ್ಯಪಾಲರಿಗೆ ಸ್ಪಷ್ಟನೆ ಕೊಟ್ಟಿದ್ದೇನೆ ಎಂದರು.
ತಮಗೆ ಲಭ್ಯವಿರುವ ಮಾಹಿತಿ ಪ್ರಕಾರ, ರಾಜ್ಯಪಾಲರು ಮುಖ್ಯಮಂತ್ರಿಗಳಿಗೆ ಎರಡನೇ ಶೋಕಾಸ್ ನೋಟಿಸ್ ಕೊಟ್ಟಿಲ್ಲ. ರಾಜ್ಯಪಾಲರು ಸ್ಪಷ್ಟನೆ ಕೇಳಿದ್ದಾರೆ ಎಂದರೆ ಅವರಿಗೆ ಪ್ರಕರಣವನ್ನು ಮುಂದುವರಿಸಲು ಆಸಕ್ತಿ ಇದೆ ಎಂದರ್ಥ. ಕಳೆದ ಗುರುವಾರ ರಾಜ್ಯಪಾಲರ ಸಮಯ ಕೇಳಿದ್ದೆ, ಇವತ್ತು ಬರಲು ಹೇಳಿದ್ದರು, ಇಂದು ಭೇಟಿಯಾಗಿ ಸ್ಪಷ್ಟೀಕರಣ ನೀಡಿದ್ದಾಗಿ ತಿಳಿಸಿದರು.