ಬಾಂಗ್ಲಾ ದಂಗೆ: ಸರ್ವಪಕ್ಷ ಸಭೆ
ನವದೆಹಲಿ,ಆ.೬:ನೆರೆಯ ಬಾಂಗ್ಲಾ ದೇಶದಲ್ಲಿ ನಡೆದಿರುವ ರಾಜಕೀಯ ದಂಗೆಯ ಬೆನ್ನಲ್ಲೆ ಪ್ರಧಾನಿ ನರೇಂದ್ರಮೋದಿ ಅವರು ಸರ್ವಪಕ್ಷಗಳ ಸಭೆ ನಡೆಸಿ ಬಾಂಗ್ಲಾದ ರಾಜಕೀಯ ಬೆಳವಣಿಗೆಗಳ ಬಗ್ಗೆ ಎಲ್ಲ ಪಕ್ಷಗಳ ಮುಖಂಡರ ಜತೆ ಸಮಾಲೋಚನೆ ನಡೆಸಿ ಮುಂದಿನ ಆಗುಹೋಗುಗಳ ಬಗ್ಗೆ ಚರ್ಚೆ ನಡೆಸಿದರು.
ನೆರೆಯ ಬಾಂಗ್ಲಾದೇಶದಲ್ಲಿ ಕ್ಷಿಪ್ರಕಾಂತಿ ನಡೆದು ಅಲ್ಲಿನ ಸರ್ಕಾರ ಪತನವಾಗಿ ಬಾಂಗ್ಲಾದಲ್ಲಿ ರಾಜಕೀಯ ಬಿಕ್ಕಟ್ಟು ತಲೆದೋರಿ ಸೇನೆ ಆಡಳಿತವನ್ನು ಕೈಗೆ ತೆಗೆದುಕೊಂಡಿರುವ ಬೆನ್ನಲ್ಲೆ ಭಾರತ-ಬಾಂಗ್ಲಾ ಗಡಿಯಲ್ಲಿ ಏನೆಲ್ಲ ಭದ್ರತಾ ಕ್ರಮಗಳನ್ನು ಕೈಗೊಳ್ಳಬೇಕು. ಬಾಂಗ್ಲಾ ಬೆಳವಣಿಗೆಗಳನ್ನು ಭಾರತ ಯಾವ ದೃಷ್ಟ್ಟಿಕೋನದಿಂದ ನೋಡಬೇಕು, ಬಾಂಗ್ಲಾದಲ್ಲಿರುವ ಭಾರತೀಯರ ಸುರಕ್ಷತೆ, ಬಾಂಗ್ಲಾದಿಂದ ಭಾರತಕ್ಕೆ ಓಡಿ ಬಂದಿರುವ ಬಾಂಗ್ಲಾದ ಮಾಜಿ ಪ್ರಧಾನಿ ಶೇಖ್‌ಹಸೀನಾ ಅವರ ಭದ್ರತೆ ಸೇರಿದಂತೆ ಹಲವು ವಿಚಾರಗಳ ಬಗ್ಗೆ ಸಭೆಯಲ್ಲಿ ಚರ್ಚೆಗಳು ನಡೆದವು.ಇಂದಿನ ಸಭೆಯಲ್ಲಿ ಕೇಂದ್ರ ರಕ್ಷಣಾ ಸಚಿವ ರಾಜ್‌ನಾಥ್‌ಸಿಂಗ್, ಗೃಹ ಸಚಿವ ಅಮಿತ್ ಶಾ, ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ವಿರೋಧ ಪಕ್ಷದ ನಾಯಕ ರಾಹುಲ್‌ಗಾಂಧಿ, ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ ನಡ್ಡಾ ಸೇರಿದಂತೆ ವಿವಿಧ ಪಕ್ಷಗಳ ಪ್ರಮುಖ ಮುಖಂಡರುಗಳು ಭಾಗಿಯಾಗಿದ್ದರು.ಬಾಂಗ್ಲಾದಲ್ಲಿನ ರಾಜಕೀಯ ಪ್ರಕ್ಷುಬ್ಧತೆ ಹಿನ್ನೆಲೆಯಲ್ಲಿ ಬಾಂಗ್ಲಾದಲ್ಲಿರುವ ಭಾರತೀಯರ ಸುರಕ್ಷತೆ, ರಕ್ಷಣೆ ಬಗ್ಗೆಯೂ ಈ ಸಭೆಯಲ್ಲಿ ಹೆಚ್ಚಿನ ಚರ್ಚೆಗಳು ನಡೆದವು. ಬಾಂಗ್ಲಾದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಭಾರತೀಯರು ಉದ್ಯಮಗಳನ್ನು ನಡೆಸುತ್ತಿದ್ದು, ಹಾಗೆಯೇ ಹಲವು ವಿಶ್ವವಿದ್ಯಾಲಯಗಳಲ್ಲಿ ಭಾರತೀಯ ವಿದ್ಯಾರ್ಥಿಗಳು ಅಧ್ಯಯನ ಮಾಡುತ್ತಿದ್ದು, ಇವರೆಲ್ಲರ ಸುರಕ್ಷತೆಗೆ ಕೇಂದ್ರ ಸರ್ಕಾರ ಎಲ್ಲ ರೀತಿಯ ಕ್ರಮಗಳನ್ನೂ ಕೈಗೊಳ್ಳಬೇಕು ಎಂದು ಸರ್ವ ಪಕ್ಷಗಳ ಮುಖಂಡರು ಸಭೆಯಲ್ಲಿ ಒತ್ತಾಯಿಸಿದರು.
ಶೇಖ್ ಹಸೀನಾ ಆಶ್ರಯ ಚರ್ಚೆ
ಬಾಂಗ್ಲಾದಲ್ಲಿ ರಾಜಕೀಯ ದಂಗೆ ಹಿನ್ನೆಲೆಯಲ್ಲಿ ಪ್ರಧಾನಿ ಸ್ಥಾನಕ್ಕೆ ರಾಜೀನಾಮೆ ನೀಡಿ ಬ್ರಿಟನ್‌ನಲ್ಲಿ ರಾಜಕೀಯ ಆಶ್ರಯ ಪಡೆಯಲು ತೆರಳುವ ಮುನ್ನ ಭಾರತದಲ್ಲಿ ಆಶ್ರಯ ಪಡೆದಿರುವ ಬಾಂಗ್ಲಾದ ಮಾಜಿ ಪ್ರಧಾನಿ ಶೇಖ್‌ಹಸೀನಾ ಅವರ ಭದ್ರತೆ ಬಗ್ಗೆಯೂ ಸಭೆಯಲ್ಲಿ ಚರ್ಚೆ ನಡೆದಿದ್ದು, ಶೇಖ್‌ಹಸೀನಾ ಅವರನ್ನು ಸುರಕ್ಷಿತ ಸ್ಥಳದಲ್ಲಿ ಇರಿಸುವ ಬಗ್ಗೆ ಸಮಾಲೋಚನೆಗಳು ನಡೆದವು.ಬಾಂಗ್ಲಾದ ಮಾಜಿ ಪ್ರಧಾನಿ ಹಸೀನಾ ಅವರು ಕ್ಷಿಪ್ರಕ್ರಾಂತಿಯ ಬೆನ್ನಲ್ಲೆ ಪ್ರಧಾನಿ ಸ್ಥಾನಕ್ಕೆ ರಾಜೀನಾಮೆ ನೀಡಿ ವಿಶೇಷ ಸೇನಾ ಹೆಲಿಕಾಪ್ಟರ್‌ನಲ್ಲಿ ಭಾರತದ ತ್ರಿಪುರ ರಾಜಧಾನಿ ಅರ್ಗತಲಾಗೆ ನಿನ್ನೆ ರಾತ್ರಿ ಆಗಮಿಸಿದ್ದರು ಬಳಿಕ ಅವರನ್ನು ದೆಹಲಿ ಸಮೀಪದ ಗಾಜಿಯಾ ಬಾದ್‌ನಲ್ಲಿರುವ ಇಂಡೆನ್ ವಾಯುನೆಲೆಯಲ್ಲಿ ಸುರಕ್ಷಿತವಾಗಿ ಇರಿಸಲಾಗಿದ್ದು, ಪ್ರಧಾನಿಗಳ ಭದ್ರತಾ ಸಲಹೆಗಾರ ಅಜಿತ್ ದೋವಲ್ ಅವರು ಹಸೀನಾ ಅವರನ್ನು ಭೇಟಿ ಮಾಡಿ ಚರ್ಚೆ ನಡೆಸಿದರು.
ತುರ್ತು ಭದ್ರತಾ ಸಭೆ
ಬಾಂಗ್ಲಾದಲ್ಲಿ ನಿನ್ನೆ ನಡೆದ ಕ್ಷಿಪ್ರಕ್ರಾಂತಿ ಬೆನ್ನಲ್ಲೆ ಪ್ರಧಾನಿ ಮೋದಿ ಅವರು ಕೇಂದ್ರ ಸಂಪುಟದ ಭದ್ರತಾ ಸಮಿತಿ ತುರ್ತು ಸಭೆ ನಡೆಸಿ ಬಾಂಗ್ಲಾ ದೇಶದ ಜತೆ ಹಂಚಿಕೊಂಡಿರುವ ೪೦೯೬ ಕಿ.ಮೀ ಗಡಿಯುದ್ಧಕ್ಕೂ ಬಿಗಿ ಭದ್ರತೆಗಳನ್ನು ಕೈಗೊಳ್ಳುವ ಬಗ್ಗೆ ಚರ್ಚೆ ನಡೆಸಿದರು.
ಈ ಸಭೆಯಲ್ಲಿ ರಕ್ಷಣಾ ಸಚಿವ ರಾಜ್‌ನಾಥ್‌ಸಿಂಗ್, ಗೃಹ ಸಚಿವ ಅಮಿತ್ ಶಾ, ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್, ಸಂಪುಟ ಕಾರ್ಯದರ್ಶಿ ರಾಜೀವ್‌ಗೌಬಾ, ಪ್ರಧಾನಿಯವರ ಪ್ರಧಾನಕಾರ್ಯದರ್ಶಿ ಆರ್.ಕೆ ಮಿಶ್ರಾ, ಭದ್ರತಾ ಸಲಹೆಗಾರ ಅಜಿತ್‌ದೋವಲ್ ರಾಜಕೀಯ ಮುಖ್ಯಸ್ಥ ರವಿಸಿನ್ಹಾ, ಐಬಿ ಮುಖ್ಯಸ್ಥ ತಫನ್‌ದೇಖಾ ಈ ಸಭೆಯಲ್ಲಿ ಭಾಗಿಯಾಗಿದ್ದರು.
ಸರ್ವ ಪಕ್ಷ ಸಭೆ ವಿಪಕ್ಷಗಳ ಬೆಂಬಲ
ಬಾಂಗ್ಲಾ ದೇಶದಲ್ಲಿ ಸೃಷ್ಟಿಯಾದ ಅರಾಜಕತೆ ಬಗ್ಗೆ ವಿವರಿಸಲು ಕರೆಯಲಾಗಿದ್ದ ಸರ್ವಪಕ್ಷಗಳ ಸಭೆಯಲ್ಲಿ ಎಲ್ಲ ಪಕ್ಷಗಳು ಒಮ್ಮತದ ಬೆಂಬಲ ನೀಡಿದ್ದಕ್ಕೆ ವಿದೇಶಾಂಗ ಸಚಿವ ಎಸ್. ಜೈಶಂಕರ್ ಶ್ಲಾಘಿಸಿದ್ದಾರೆ.ಈಕುರಿತು ಎಕ್ಸ್‌ನಲ್ಲಿ ಫೋಟೊ ಹಂಚಿಕೊಂಡಿರುವ ಜೈಶಂಕತ್ ಬಾಂಗ್ಲಾದಲ್ಲಿ ನಡೆಯುತ್ತಿರುವ ಬೆಳವಣಿಗೆಗಳ ಬಗ್ಗೆ ಇಂದು ಸಂಸತ್ತಿನಲ್ಲಿ ಸರ್ವಪಕ್ಷಗಳಸಭೆಯಲ್ಲಿ ಮಾಹಿತಿ ನೀಡಿದ್ದೇವೆ ಎಂದರು.ಕೇಂದ್ರ ಸರ್ಕಾರ ಬಾಂಗ್ಲಾ ದೇಶದ ಸೇನೆಯೊಂದಿಗೆ ಸಂಪರ್ಕದಲ್ಲಿದೆ ಸರಿಯಾದ ಸಮಯದಲ್ಲಿ ಸಏನೆ ನಿರ್ಧಾರ ಕೈಗೊಳ್ಳಲಿದೆ ಎಂದು ಹೇಳಿದರು.ಬಾಂಗ್ಲಾದಲ್ಲಿ ೨೦ ಸಾವಿರ ಭಾರತೀಯರಿದ್ದಾರೆ. ಅವರಲ್ಲಿ ೮ ಸಾವಿರ ಭಾರತೀಯರು ವಾಪಸ್ಸಾಗಿದ್ದಾರೆ. ಭಾರತ ಸರ್ಕಾರ ಬಾಂಗ್ಲಾದಲ್ಲಿರುವ ಭಾರತೀಯರು ಮತ್ತು ಹೈಕಮಿಷನ್‌ನೊಂದಿಗೆ ನಿರಂತರವಾಗಿ ಸಂಪರ್ಕದಲ್ಲಿದೆ ಎಂದು ಹೇಳಿದರು.
ಬಾಂಗ್ಲಾದ ಮಾಜಿ ಪ್ರಧಾನಿ ಶೇಖ್‌ಹಸೀನಾ ಅವರು ಭಾರತದಲ್ಲಿದ್ದಾರೆ. ಅವರ ಮುಂದಿನ ಕ್ರಮ ಏನೆಂದು ತಿಳಿಯುವ ತನಕ ಅವರಿಗೆ ಭಾರತ ಸರ್ಕಾರ ಭಧ್ರತೆ ಒದಗಿಸಲಿದೆ ಎಂದು ಅವರು ಸರ್ವ ಪಕ್ಷಗಳ ಮುಖಂಡರುಗಳಿಗೆ ಮನವರಿಕೆ ಮಾಡಿಕೊಟ್ಟರು.
ಸಭೆಯಲ್ಲಿ ದೀರ್ಘಕಾಲದ ಮತ್ತು ತ್ವರಿತ ತಂತ್ರಗಳ ಬಗ್ಗೆ ಏನು ಕ್ರಮವಹಿಸಲಾಗಿದೆ ಎಂಬ ವಿಪಕ್ಷ ನಾಯಕ ರಾಹುಲ್‌ಗಾಂಧಿ ಪ್ರಶ್ನೆಗೆ ಉತ್ತರಿಸಿದ ಜೈಶಂಕರ್, ಪರಿಸ್ಥಿತಿಯನ್ನು ನೋಡಿಕೊಂಡು ವಿಶ್ಲೇಷಿಸಿ ಕ್ರಮಕೈಗೊಳ್ಳುವುದಾಗಿ ಹೇಳಿ ಭಾರತ ಬಾಂಗ್ಲಾದ ಬೆಳವಣಿಗೆಗಳ ಬಗ್ಗೆ ನಿಗಾ ಇಟ್ಟಿದೆ ಎಂದರು.
ಅನಿರ್ದಿಷ್ಟಾವಧಿ ಆಶ್ರಯ ಇಲ್ಲ ಹಸೀನಾಗೆ ಭಾರತ ಸಂದೇಶ
ಬಾಂಗ್ಲಾ ತೊರೆದು ಭಾರತಕ್ಕೆ ಬಂದಿರುವ ಮಾಜಿ ಪ್ರಧಾನಿ ಶೇಖ್‌ಹಸೀನಾ ಅವರಿಗೆ ಅನಿರ್ದಿಷ್ಟಾವಧಿಯ ಆಶ್ರಯ ನೀಡಲು ಸಾಧ್ಯವಿಲ್ಲ. ನಿಮ್ಮ ಮುಂದಿನ ಭವಿಷ್ಯದ ಬಗ್ಗೆ ನೀವೇ ನಿರ್ಧಾರ ಕೈಗೊಳ್ಳಿ. ಅಲ್ಲಿಯವರೆಗೂ ಭಾರತ ಆಶ್ರಯ ನೀಡುತ್ತದೆ ಎಂದು ಶೇಖ್‌ಹಸೀನಾ ಅವರಿಗೆ ಭಾರತ ಸರ್ಕಾರ ಹೇಳಿದೆ ಎನ್ನಲಾಗಿದೆ.
ದೀರ್ಘ ಕಾಲದವರೆಗೂ ನಾವು ಆಶ್ರಯ ನೀಡಲ್ಲ. ಸದ್ಯ ನಿಮ್ಮ ಭದ್ರತೆ ಸುರಕ್ಷತೆಯನ್ನು ನೋಡಿಕೊಳ್ಳುತ್ತೇವೆ. ಎಲ್ಲಿ ರಾಜಕೀಯ ಆಶ್ರಯಪಡೆಯಬೇಕು ಎಂಬುದನ್ನು ಆದಷ್ಟು ಶೀಘ್ರ ತೀರ್ಮಾನಿಸಿ. ನಾವು ಅನಿರ್ದಿಷ್ಟಾವಧಿ ಆಶ್ರಯ ನೀಡಲು ಆಗಲ್ಲ ಎಂಬ ಮಾತುಗಳನ್ನು ಶೇಖ್‌ಹಸೀನಾ ಅವರಿಗೆ ಹೇಳಿದೆ ಎಂದು ಕೇಂದ್ರ ಸರ್ಕಾರದ ಉನ್ನತ ಮೂಲಗಳು ಹೇಳಿವೆ.
ಸಹಜ ಸ್ಥಿತಿಗೆ ಬಾಂಗ್ಲಾ
ಬಾಂಗ್ಲಾದ ಪ್ರಧಾನಿ ಶೇಖ್‌ಹಸೀನಾ ಪ್ರಧಾನಿ ಹುದ್ದೆಗೆ ರಾಜೀನಾಮೆ ನೀಡಿ ದೇಶ ಬಿಟ್ಟು ಪಲಾಯನ ಮಾಡಿದ ನಂತರವೂ ಕೆಲ ಕಾಲ ಬಾಂಗ್ಲಾದಲ್ಲಿ ಹಿಂಸಾಚಾರ ಮುಂದುವರೆದಿದ್ದು, ೧೧೯ ಮಂದಿ ಮೃತಪಟ್ಟಿದ್ದಾರೆ.
ಇಂದು ಮಂಗಳವಾರ ಪರಿಸ್ಥಿತಿ ಶಾಂತವಾಗಿದ್ದು, ಬಾಂಗ್ಲಾದಲ್ಲಿ ಸಹಜಸ್ಥಿತಿ ಮರಳುತ್ತಿದೆ. ಬಸ್ಸುಗಳು ಮತ್ತು ಇತರ ಸಾರ್ವಜನಿಕ ಸಾರಿಗೆಗಳು ಸಂಚಾರ ಆರಂಭಿಸಿದ್ದವು. ವ್ಯಾಪಾರಿಗಳು ಅಂಗಡಿ ಮುಂಗಟ್ಟುಗಳನ್ನು ತೆರೆಯುತ್ತಿದ್ದಾರೆ. ಸರ್ಕಾರಿ ಕಚೇರಿಗಳು ತೆರೆದಿವೆ.
ಬಾಂಗ್ಲಾ ಪ್ರಧಾನಿಯಾಗಿದ್ದ ಶೇಖ್‌ಹಸೀನಾ ದೇಶ ತೊರೆಯುತ್ತಿದ್ದಂತೆಯೇ ಅವರ ನಿವಾಸ ಪ್ರವೇಶಿಸಿದ ಪ್ರತಿಭಟನಾಕಾರರು ಮನೆಯೊಳಗಿನ ವಸ್ತುಗಳನ್ನು ಕೊಳ್ಳೆ ಹೊಡೆದು ಮನೆಯೊಳಗೆ ದಾಂಧಲೆ ನಡೆಸಿದ್ದಾರೆ. ಜತೆಗೆ ಅವಾಮಿ ಲೀಗ್ ಪಕ್ಷದ ನಾಯಕರ ನಿವಾಸ ಕಚೇರಿಗಳಿಗೂ ಪ್ರತಿಭಟನಾಕಾರರು ನುಗ್ಗಿ ದಾಂಧಲೆ ನಡೆಸಿದ್ದು, ರಾಜಧಾನಿ ಢಾಕಾ ಮತ್ತು ಇತರೆಡೆ ಹಿಂದೂ ದೇವಾಲಯಗಳ ಮೇಲೆ ದಾಳಿಗಳು ನಡೆದಿತ್ತು. ಕೆಲಕಾಲ ಹಿಂಸಾಚಾರ ಮುಂದುವರೆದಿತ್ತಾದರೂ ಪರಿಸ್ಥಿತಿ ಶಾಂತವಾಗಿದೆ.