ನಾಲ್ವರು ಸಾಧಕರಿಗೆ ಜೀವನ್ಮುಖಿ ಪ್ರಶಸ್ತಿ
(ಸಂಜೆವಾಣಿ ಪ್ರತಿನಿಧಿಯಿಂದ)
ಬೆಂಗಳೂರು,ಆ.೬: ಅಖಿಲ ಕರ್ನಾಟಕ ಕುವೆಂಪು ಸಾಂಸ್ಕೃತಿಕ ವೇದಿಕೆ ಸಹಯೋಗದೊಂದಿಗೆ ಜೀವನ್ಮುಖಿ ಕನ್ನಡ ಪಾಕ್ಷಿಕ ಪತ್ರಿಕೆಯು ನೀಡುತ್ತಿರುವ ೧೪ನೇ ವರ್ಷದ “ಜೀವನ್ಮುಖಿ ಪ್ರಶಸ್ತಿ” ಪುರಸ್ಕಾರಕ್ಕೆ ರಾಜ್ಯ ಮಟ್ಟದ ನಾಲ್ಕು ಮಂದಿ ಗಣ್ಯ ಸಾಧಕರು ಆಯ್ಕೆಯಾಗಿದ್ದಾರೆ.
ಪ್ರಸಿದ್ಧ ಸಾಹಿತಿ ಹಾಗೂ ವಿಶ್ರಾಂತ ಪ್ರಾಧ್ಯಾಪಕರಾದ ಡಾ. ಅರವಿಂದ ಮಾಲಗತ್ತಿ, ಕನ್ನಡ ಸಾಹಿತ್ಯ ಪರಿಷತ್ತು ನಿಕಟಪೂರ್ವ ಕೋಶಾಧ್ಯಕ್ಷರಾದ ಪಿ. ಮಲ್ಲಿಕಾರ್ಜುನಪ್ಪ, ಭಾರತ ಸರ್ಕಾರದ ಸಾಮಾನ್ಯ ಸರಕು ಮತ್ತು ಸೇವಾ ತೆರಿಗೆ ಗುಪ್ತಚರ ನಿರ್ದೇಶನಾಲಯದ ಉಪ ಆಯುಕ್ತರಾದ ಬಿ. ರತನ್ ಐಆರ್‌ಎಸ್, ಮತ್ತು ಸಮಾಜ ಸೇವಕರಾದ ಶ್ರೀ ಜೆ. ಸುರೇಂದ್ರ ನಾಯ್ಡು ರವರು ೨೦೨೪ರ “ಜೀವನ್ಮುಖಿ ಪ್ರಶಸ್ತಿ” ಪುರಸ್ಕಾರಕ್ಕೆ ಆಯ್ಕೆಯಾಗಿದ್ದಾರೆ.
ಈ ಸಮಾರಂಭವು ದಿನಾಂಕ : ೧೮-೦೮-೨೦೨೪ರ ಭಾನುವಾರ ಸಂಜೆ ೪-೦೦ ಗಂಟೆಗೆ ನಗರದ ಕನ್ನಡ ಭವನದ ನಯನ ಸಭಾಂಗಣದಲ್ಲಿ ನಡೆಯಲಿದ್ದು, ಪ್ರಸಿದ್ಧ ಸಾಹಿತಿ ಪ್ರೊ. ಎಸ್.ಜಿ. ಸಿದ್ಧರಾಮಯ್ಯ ರವರು ಉದ್ಘಾಟನೆ ಮಾಡುವರು, ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರಾದ ಡಾ. ಪುರುಷೋತ್ತಮ ಬಿಳಿಮಲೆ ರವರು ಪ್ರಶಸ್ತಿ ಪ್ರದಾನ ಮಾಡುವರು, ಸಂಸ್ಕೃತಿ ಚಿಂತಕರು ಹಾಗೂ ರೈಲ್ವೆ ಪೊಲೀಸ್ ಉಪ ಮಹಾನಿರೀಕ್ಷಕರಾದ ಡಾ. ಎಸ್.ಡಿ. ಶರಣಪ್ಪ ಐಪಿಎಸ್ ರವರು ವಿಶೇಷ ಸಂಚಿಕೆ ಬಿಡುಗಡೆ ಮಾಡುವರು. ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘದ ನಿಕಟಪೂರ್ವ ಅಧ್ಯಕ್ಷರಾದ ಶ್ರೀ ಹೆಚ್.ಕೆ. ರಾಮು ರವರು ಅಧ್ಯಕ್ಷತೆ ವಹಿಸುವರು.
ಇದೇ ಸಂದರ್ಭದಲ್ಲಿ ನಾಡಿನ ಪ್ರತಿಭಾವಂತ ಬಾಲ ಪ್ರತಿಭೆಗಳಾದ ತುಳಸಿ ಹೆಗಡೆ, ಎಸ್.ಪಿ. ಮೋಹಕ ವದನ, ಅದಿತಿ ಹಾನಗಲ್ಲ, ಬೆಳಕು ಎಸ್.ಎಸ್. ಗೌಡ, ಅದ್ಯಾ ಎಲ್., ಸಮರ್ಥ್ ಸಿ., ತನ್ಮಯಿ ವಿ., ಮುಕುಂದ್ ಕೆ. ರಚನ ಜಿ.ಡಿ., ಪೂಜಿತ್ ರಾಜ್ ಎಸ್.ಆರ್., ದೀಪಕ್ ರಾಜ್ ಆರ್., ಸಿಂಚನ ಪಿ.ಆರ್. ಇವರುಗಳಿಗೆ ಪ್ರತಿಭಾ ಪುರಸ್ಕಾರ ನೀಡಿ ಸತ್ಕರಿಸಲಾಗುವುದು ಎಂದು ಅಧ್ಯಕ್ಷ ಟಿ. ಸುರೇಶ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.