ಬಾಂಗ್ಲಾದೇಶ ಪ್ರಧಾನಿ ಶೇಕ್ ಹಾಸೀನಾ ರಾಜೀನಾಮೆ
ಢಾಕಾ, ಆ.5-ಪ್ರತಿಭಟನಾಕಾರರು ಮತ್ತು ಆಡಳಿತಾರೂಢ ಅವಾಮಿ ಲೀಗ್ ಬೆಂಬಲಿಗರ ನಡುವೆ ನಡೆಯುತ್ತಿರುವ ಸಂಘರ್ಷದಿಂದ ಭುಗಿಲಿದ್ದಿರುವ ಹಿಂಸಾಚಾರ ನೂರಾರು ಮಂದಿಯನ್ನು ಬಲಿ ಪಡೆದಿರುವ ಬೆನ್ನಲ್ಲೆ ಇಂದು ಬಾಂಗ್ಲಾದೇಶ ಪ್ರಧಾನಿ ಶೇಕ್‌ ಹಸೀನಾ ರಾಜಿನಾಮೆ ನೀಡಿದ್ದಾರೆ.
ಪ್ರಧಾನಿ ರಾಜೀನಾಮೆಗೆ ಒತ್ತಾಯಿಸಿ ನಡೆಯುತ್ತಿರುವ ವಿದ್ಯಾರ್ಥಿಗಳ ಪ್ರತಿಭಟನೆ ತೀವ್ರಗೊಂಡು ಹಿಂಸಾಚಾರಕ್ಕೆ ತಿರುಗಿತ್ತು. ಹಸೀನಾ ಅವರಿಗೆ ರಾಜೀನಾಮೆ ನೀಡಲು ಬಾಂಗ್ಲಾದೇಶ ಸೇನೆ 45 ನಿಮಿಷಗಳ ಕಾಲಾವಕಾಶ ನೀಡಿತ್ತು ಎನ್ನಲಾಗಿದೆ.
ಇನ್ನೂ, ಬಾಂಗ್ಲಾದೇಶದ ಸೇನಾ ಮುಖ್ಯಸ್ಥ ದೇಶವನ್ನುದ್ದೇಶಿಸಿ ಮಾತನಾಡಲಿದ್ದಾರೆಂದು ತಿಳಿದು ಬಂದಿದೆ.
ಪ್ರಧಾನಿ ಶೇಖ್ ಹಸೀನಾ ರಾಜೀನಾಮೆ ನೀಡಿ, ಢಾಕಾವನ್ನು ತೊರೆದಿದ್ದಾರೆ ಎಂದು ಸ್ಥಳೀಯ ಮಾಧ್ಯಮ ವರದಿ ಮಾಡಿವೆ. ಶೇಖ್ ಹಸೀನಾ ಮಿಲಿಟರಿ ಹೆಲಿಕಾಪ್ಟರ್‌ನಲ್ಲಿ ತನ್ನ ಕಿರಿಯ ಸಹೋದರಿ ಶೇಖ್ ರೆಹಾನಾ ಅವರೊಂದಿಗೆ ಸುರಕ್ಷಿತ ಸ್ಥಳಕ್ಕೆ ತೆರಳಿದ್ದಾರೆ ಎಂದು ಮೂಲಗಳು ತಿಳಿಸಿವೆ.
ವಿಶೇಷ ಸೇನಾ ಹೆಲಿಕಾಪ್ಟರ್‌ನಲ್ಲಿ ಭಾರತಕ್ಕೆ ಬರುವ ಸಾಧ್ಯತೆ ಇದೆ ಎನ್ನಲಾಗಿದೆ.
ಲಕ್ಷಾಂತರ ಪ್ರತಿಭಟನಾಕಾರರು ಕರ್ಫ್ಯೂ ಅನ್ನು ಧಿಕ್ಕರಿಸಿ ಸೋಮವಾರ ರಾಜಧಾನಿಯ ಬೀದಿಗಳಲ್ಲಿ ಪ್ರತಿಭಟನೆ ನಡೆಸಿದ್ದಾರೆ. ನಂತರ ಢಾಕಾದಲ್ಲಿರುವ ಪ್ರಧಾನ ಮಂತ್ರಿ ಶೇಖ್ ಹಸೀನಾ ಅವರ ನಿವಾಸಕ್ಕೆ ಸಾವಿರಾರು ಬಾಂಗ್ಲಾದೇಶಿ ಪ್ರತಿಭಟನಾಕಾರರು ಮುತ್ತಿಗೆ ಹಾಕಿದ್ದಾರೆ.
ಪ್ರಧಾನಿ ಅವರ ನಿವಾಸಕ್ಕೆ ಪ್ರತಿಭಟನೆಕಾರರು ಮುತ್ತಿಗೆ ಹಾಕುವ ಮತ್ತು ಸಂಭ್ರಮಾಚರಣೆ ಮಾಡುವ ದೃಶ್ಯಗಳನ್ನು ಸ್ಥಳಿಯ ಚಾನೆಲ್ ಪ್ರಸಾರ ಮಾಡಿದೆ.
ಪ್ರಧಾನಿ ಶೇಖ್ ಹಸೀನಾ ಅವರ ಪುತ್ರ ಸಜೀಬ್ ವಾಜೇದ್ ನಮ್ಮ ಜನರನ್ನು ಸುರಕ್ಷಿತವಾಗಿರಿಸುವುದು ಮತ್ತು ನಮ್ಮ ದೇಶವನ್ನು ಸುರಕ್ಷಿತವಾಗಿರಿಸುವುದು, ಸಂವಿಧಾನವನ್ನು ಕಾಪಾಡುವುದು ನಿಮ್ಮ ಕರ್ತವ್ಯವಾಗಿದೆ ಎಂದು ಸಾಮಾಜಿಕ ಜಾಲತಾಣದಲ್ಲಿ ಮಾಡಿದ ಪೋಸ್ಟ್ನಲ್ಲಿ ತಿಳಿಸಿದ್ದಾರೆ.
ಸರ್ಕಾರಿ ಉದ್ಯೋಗದಲ್ಲಿನ ಮೀಸಲಾತಿ ವ್ಯವಸ್ಥೆಯನ್ನು ರದ್ದುಗೊಳಿಸಬೇಕೆಂದು ವಿದ್ಯಾರ್ಥಿ ಗುಂಪುಗಳಿಂದ ಜುಲೈನಲ್ಲಿ ಪ್ರಾರಂಭವಾದ ಪ್ರತಿಭಟನೆ ಹಿಂಸಾತ್ಮಕ ರೂಪವನ್ನು ಪಡೆದುಕೊಂಡಿದೆ. ಪ್ರತಿಭಟನಾಕಾರರನ್ನು ಚದುರಿಸಲು ಭಾನುವಾರ ಪೊಲೀಸರು ಅಶ್ರುವಾಯು ಮತ್ತು ರಬ್ಬರ್ ಬುಲೆಟ್‌ಗಳನ್ನು ಬಳಸಿದರು. ಆ ಸಮಯದಲ್ಲಿ ಕನಿಷ್ಠ 91ಮಂದಿ ಮೃತಪಟ್ಟಿದ್ದಾರೆ ಮತ್ತು 100 ಜನರು ಗಾಯಗೊಂಡಿದ್ದಾರೆ.