ಸಿಎಂ ಪ್ರವಾಸ ರದ್ದು
ಬೆಂಗಳೂರು, ಆ. ೫- ರಾಜ್ಯದ ಮಳೆ ಹಾನಿ ಪ್ರದೇಶಗಳಿಗೆ ಭೇಟಿ ನೀಡುತ್ತಿರುವ ಮುಖ್ಯಮಂತ್ರಿ ಸಿದ್ದರಾಮಯ್ಯನವರು ನಾಳಿನ ವಿಜಯನಗರ ಹಾಗೂ ಕೊಪ್ಪಳ ಜಿಲ್ಲೆಯ ಪ್ರವಾಸವನ್ನು ರದ್ದು ಮಾಡಿದ್ದಾರೆ.
ಮುಡಾ ಹಗರಣಕ್ಕೆ ಸಂಬಂಧಿಸಿದಂತೆ ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್ ಇಂದು ಮುಖ್ಯಮಂತ್ರಿಗಳ ವಿರುದ್ಧ ಪ್ರಾಸಿಕ್ಯೂಷನ್‌ಗೆ ಅನುಮತಿ ನೀಡಬೇಕೇ, ಬೇಡವೇ ಎಂಬ ಬಗ್ಗೆ ತೀರ್ಮಾನ ಕೈಗೊಳ್ಳುವ ಸಾಧ್ಯತೆ ಇರುವುದರಿಂದ ಮುಖ್ಯಮಂತ್ರಿಗಳ ನಾಳಿನ ವಿಜಯನಗರ ಹಾಗೂ ಕೊಪ್ಪಳ ಜಿಲ್ಲಾ ಪ್ರವಾಸ ರದ್ದಾಗಿದೆ ಎಂದು ಹೇಳಲಾಗಿದೆ.
ನಿನ್ನೆ, ಮೊನ್ನೆ ಮೈಸೂರು, ಕೊಡಗು, ಹಾಸನ ಜಿಲ್ಲೆಯ ಮಳೆ ಪೀಡಿತ ಪ್ರದೇಶಗಳಿಗೆ ಭೇಟಿ ನೀಡಿದ್ದ ಮುಖ್ಯಮಂತ್ರಿ ಸಿದ್ದರಾಮಯ್ಯನವರು ಇಂದು ಬೆಳಗಾವಿ ಜಿಲ್ಲೆಗೆ ತೆರಳಿದ್ದು, ಅಲ್ಲಿ ಗೋಕಾಕ್, ಚಿಕ್ಕೋಡಿ ಸೇರಿದಂತೆ ಹಲವು ಮಳೆ ಪೀಡಿತ ಪ್ರದೇಶಗಳಿಗೆ ಭೇಟಿ ನೀಡಿದ್ದಾರೆ.ನಾಳೆ ಮುಖ್ಯಮಂತ್ರಿ ಸಿದ್ದರಾಮಯ್ಯನವರು ವಿಜಯನಗರ ಹಾಗೂ ಕೊಪ್ಪಳ ಜಿಲ್ಲೆಗೆ ಭೇಟಿ ನೀಡಬೇಕಿತ್ತು. ಹಾಗೆಯೇ ಮಳೆಯಿಂದ ಭರ್ತಿಯಾಗಿರುವ ತುಂಗಾಭದ್ರ ಜಲಾಶಯಕ್ಕೆ ಬಾಗಿನ ಅರ್ಪಿಸುವ ಕಾರ್ಯಕ್ರಮವೂ ನಿಗದಿಯಾಗಿತ್ತು. ಆದರೆ ಈ ಎರಡೂ ಜಿಲ್ಲೆಗಳ ಪ್ರವಾಸವನ್ನು ರದ್ದು ಮಾಡಲಾಗಿದೆ. ಈ ಬಗ್ಗೆ ಮುಖ್ಯಮಂತ್ರಿ ಕಾರ್ಯಾಲಯದಿಂದ ಪ್ರಕಟಣೆ ಹೊರ ಬಿದ್ದಿದ್ದು, ನಾಳಿನ ಮುಖ್ಯಮಂತ್ರಿಗಳ ಕೊಪ್ಪಳ, ವಿಜಯನಗರ ಜಿಲ್ಲಾ ಪ್ರವಾಸ ರದ್ದಾಗಿದೆ ಎಂದು ಪ್ರಕಟಣೆಯಲ್ಲಿ ಹೇಳಲಾಗಿದೆ.ಮುಖ್ಯಮಂತ್ರಿಗಳ ನಾಳಿನ ಪ್ರವಾಸ ರದ್ದಾಗಿರುವುದಕ್ಕೆ ಸ್ಪಷ್ಟ ಕಾರಣ ಗೊತ್ತಾಗಿಲ್ಲ. ಮುಡಾ ಪ್ರಕರಣಕ್ಕೆ ಸಂಬಂಧಿಸಿದಂತೆ ರಾಜ್ಯಪಾಲರು ಇಂದು ಸಂಜೆ ಪ್ರಾಸಿಕ್ಯೂಷನ್‌ಗೆ ಅನುಮತಿ ನೀಡುವ ಬಗ್ಗೆ ತೀರ್ಮಾನ ಕೈಗೊಳ್ಳುವ ಹಿನ್ನೆಲೆಯಲ್ಲಿ ಮುಖ್ಯಮಂತ್ರಿಗಳ ನಾಳಿನ ಪ್ರವಾಸ ರದ್ದಾಗಿದೆ ಎಂದು ಹೇಳಲಾಗುತ್ತಿದೆ.