ಮಾನವ ಆನೆ ಸಂಘರ್ಷ ಆ.೧೨ ಅಂತಾರಾಷ್ಟ್ರೀಯ ಸಮ್ಮೇಳನ
ವಿಧಾನಸೌಧದಲ್ಲಿ ಮಾನವ-ಆನೆ ಸಂಘರ್ಷ ನಿರ್ವಹಣೆಯ ಕುರಿತು ಅಂತರರಾಷ್ಟ್ರೀಯ ಸಮ್ಮೇಳನ-೨೦೨೪ರ ಬ್ರಾಚರ್ ಅನ್ನು ಅರಣ್ಯ ಸಚಿವ ಈಶ್ವರ ಖಂಡ್ರೆ ಇಂದು ಬಿಡುಗಡೆ ಮಾಡಿದರು. ಅರಣ್ಯ ಇಲಾಖೆಯ ಅಧಿಕಾರಿಗಳು ಉಪಸ್ಥಿತರಿದ್ದರು.
ಬೆಂಗಳೂರು, ಆ.೫: ಕರ್ನಾಟಕ ಅರಣ್ಯ ಇಲಾಖೆ ಆಗಸ್ಟ್ ೧೨ರ – ವಿಶ್ವ ಆನೆಯ ದಿನದಂದು ಮಾನವ- ಆನೆ ಸಂಘರ್ಷ ಕುರಿತಂತೆ ಬೆಂಗಳೂರಿನ ಕೃಷಿ ವಿಶ್ವವಿದ್ಯಾಲಯದ ಗಾಂಧೀ ಕೃಷಿ ವಿಜ್ಞಾನ ಕೇಂದ್ರ-ಜಿಕೆವಿಕೆ ಆವರಣದಲ್ಲಿ ಆಗಸ್ಟ್ ೧೨ರಂದು ಅಂತಾರಾಷ್ಟ್ರೀಯ ಸಮ್ಮೇಳನ ಅಂತಾರಾಷ್ಟ್ರೀಯ ಸಮ್ಮೇಳನ ಹಮ್ಮಿಕೊಂಡಿದೆ ಎಂದು ಅರಣ್ಯ, ಜೀವಿಶಾಸ್ತ್ರ ಮತ್ತು ಪರಿಸರ ಸಚಿವ ಈಶ್ವರ ಬಿ ಖಂಡ್ರೆ ತಿಳಿಸಿದ್ದಾರೆ.
ವಿಧಾನಸೌಧದ ಸಮಿತಿ ಕೊಠಡಿಯಲ್ಲಿ ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಅವರು ಈ ಒಂದು ದಿನದ ಅಂ.ರಾ.ಸಮ್ಮೇಳನದಲ್ಲಿ ಅಮೆರಿಕಾ, ಜರ್ಮನಿ, ಜಪಾನ್, ಯುಕೆ ಸೇರಿದಂತೆ ೧೧ ರಾಷ್ಟ್ರಗಳ ಸುಮಾರು ೧೭ಕ್ಕೂ ಹೆಚ್ಚು ಪ್ರತಿನಿಧಿಗಳು ಹಾಗೂ ಭಾರತದ ವಿವಿಧ ರಾಜ್ಯಗಳ ೬೬೦ ಪ್ರತಿನಿಧಿಗಳು ಪಾಲ್ಗೊಳ್ಳಲಿದ್ದಾರೆ ಎಂದು ತಿಳಿಸಿದರು.
ಅನ್ಯ ರಾಷ್ಟ್ರ, ರಾಜ್ಯಗಳ ಉತ್ತಮ ರೂಢಿಯ ಅಳವಡಿಕೆ:ಆನೆಗಳು ಮತ್ತು ಇತರ ವನ್ಯಜೀವಿಗಳು ನಾಡಿಗೆ ಬಾರದಂತೆ ಬೇರೆ ಬೇರೆ ರಾಜ್ಯಗಳಲ್ಲಿ, ವಿದೇಶಗಳಲ್ಲಿ ಯಾವ ತಂತ್ರಗಾರಿಕೆ, ಪದ್ಧತಿ ಅನುಸರಿಸಲಾಗುತ್ತಿದೆ. ಯಾವ ಕಾರ್ಯತಂತ್ರ ಅಳವಡಿಸಿಕೊಳ್ಳಲಾಗಿದೆ ಎಂಬುದರ ಬಗ್ಗೆ ಈ ಅಂತಾರಾಷ್ಟ್ರೀಯ ಸಮ್ಮೇಳನದಲ್ಲಿ ಚಿಂತನ ಮಂಥನ ನಡೆಯಲಿದ್ದು, ಅತ್ಯುತ್ತಮ ರೂಢಿಗಳನ್ನು ನಮ್ಮಲ್ಲಿಯೂ ಅಳವಡಿಸಿಕೊಳ್ಳಲು ಈ ಸಮ್ಮೇಳನ ಸಹಕಾರಿ ಎಂದು ತಿಳಿಸಿದರು.
ಕರ್ನಾಟಕ ಸರ್ಕಾರ ಕಳ್ಳಬೇಟೆ ನಿಗ್ರಹಕ್ಕೆ ಕೈಗೊಂಡಿರುವ ಕಟ್ಟುನಿಟ್ಟಿನ ಕ್ರಮಗಳಿಂದಾಗಿ ವನ್ಯಮೃಗಗಳ ಸಂಖ್ಯೆಯಲ್ಲಿ ಹೆಚ್ಚಳವಾಗಿದೆ. ರಾಜ್ಯದಲ್ಲಿ ೬೩೯೫ ಆನೆಗಳಿದ್ದು, ರಾಜ್ಯ ದೇಶದಲ್ಲೇ ಗಜ ಸಂಖ್ಯೆಯಲ್ಲಿ ಪ್ರಥಮ ಸ್ಥಾನದಲ್ಲಿದೆ. ಅದೇ ರೀತಿ ೫೬೩ ಹುಲಿ ಹೊಂದಿರುವ ಕರ್ನಾಟಕ ವ್ಯಾಘ್ರಗಳ ಸಂಖ್ಯೆಯಲ್ಲಿ ೨ನೇ ಸ್ಥಾನದಲ್ಲಿದೆ. ಆದರೆ ಇದಕ್ಕೆ ಅನುಗುಣವಾಗಿ ಅರಣ್ಯ ಪ್ರದೇಶ ಹೆಚ್ಚಳ ಆಗದ ಹಿನ್ನೆಲೆಯಲ್ಲಿ ಆನೆಗಳು ನಾಡಿಗೆ ಬರುತ್ತಿದ್ದು, ಬೆಳೆ ಹಾನಿ, ಜೀವಹಾನಿ ಸಂಭವಿಸುತ್ತಿದೆ. ಈ ನಿಟ್ಟಿನಲ್ಲಿ ಆನೆ ಮತ್ತು ಮಾನವ ಸಂಘರ್ಷ ತಗ್ಗಿಸಲು ಈ ಸಮ್ಮೇಳನ ಬೆಳಕು ಚೆಲ್ಲಲಿ ಎಂಬ ಉದ್ದೇಶದಿಂದ ಆಯೋಜನೆ ಮಾಡಲಾಗಿದೆ ಎಂದರು.
ದೇಶದಲ್ಲಿ ಆನೆಗಳಿಂದ ಅತಿ ಹೆಚ್ಚು ಸಾವು ಒಡಿಶಾದಲ್ಲಿ ಸಂಭವಿಸುತ್ತದೆ. ೨೦೨೩-೨೪ರಲ್ಲಿ ೧೪೯ ಜನರು ಒಡಿಶಾದಲ್ಲಿ ಆನೆ ದಾಳಿಯಿಂದ ಪ್ರಾಣ ಕಳೆದುಕೊಂಡಿದ್ದಾರೆ. ರಾಜ್ಯ ಆನೆಗಳ ಸಂಖ್ಯೆಯಲ್ಲಿ ಮೊದಲ ಸ್ಥಾನದಲ್ಲಿದ್ದರೂ, ಇಲಾಖೆ ಕೈಗೊಂಡಿರುವ ಕ್ರಮಗಳಿಂದ ಆನೆ ದಾಳಿಯಿಂದ ಹೆಚ್ಚಿನ ದಾಳಿ ಆಗದಂತೆ ನಿಯಂತ್ರಿಸಲಾಗುತ್ತಿದೆ. ಆದಾಗ್ಯೂ ಪ್ರತಿಯೊಂದು ಜೀವವೂ ಅಮೂಲ್ಯ ಈ ನಿಟ್ಟಿನಲ್ಲಿ ಈ ಸಮ್ಮೇಳನದಲ್ಲಿ ಚಿಂತನ ಮಂಥನ ನಡೆಯಲಿದ್ದು, ಅತ್ಯುತ್ತಮ ರೂಢಿಗಳನ್ನು ಅಳವಡಿಸಿಕೊಳ್ಳಲು ಅನುಕೂಲವಾಗಲಿದೆ ಎಂದು ಈಶ್ವರ ಖಂಡ್ರೆ ತಿಳಿಸಿದರು.
ರಾಜ್ಯದಲ್ಲಿ ಪ್ರತಿ ವರ್ಷ ಸರಾಸರಿ ೩೦ ಜನರು ಆನೆಗಳ ದಾಳಿಯಿಂದ ಸಾವಿಗೀಡಾಗುತ್ತಿದ್ದಾರೆ.ಈ ವರ್ಷ ಜನವರಿಯಂದ ಇಲ್ಲಿಯವರೆಗೆ ೨೫ ಜನರು ಆನೆಯ ದಾಳಿಯಿಂದ ಮೃತಪಟ್ಟಿದ್ದಾರೆ. ಜನವರಿಯಲ್ಲಿ ೩, ಫೆಬ್ರವರಿಯಲ್ಲಿ ೪, ಮಾರ್ಚ್ ನಲ್ಲಿ ೭, ಏಪ್ರಿಲ್ ನಲ್ಲಿ ೭, ಮೇ ತಿಂಗಳಲ್ಲಿ ೧, (ಜೂನ್ ನಲ್ಲಿ ೦), ಜುಲೈನಲ್ಲಿ ೦೩ ಜನರು ಆನೆಯ ದಾಳಿಯಿಂದ ಸಾವಿಗೀಡಾಗಿದ್ದಾರೆ ಎಂದು ಮಾಹಿತಿ ನೀಡಿದರು.
ಜನರ ಜೀವವೂ ಅಮೂಲ್ಯ. ಅದೇ ರೀತಿ ವನ್ಯ ಜೀವಿಗಳ ಪ್ರಾಣವೂ ಅಮೂಲ್ಯ. ಆನೆಗಳು ಸೇರಿದಂತೆ ಕಾಡು ಪ್ರಾಣಿಗಳು ನಾಡಿಗೆ ಬಾರದಂತೆ ಮಾಡಬೇಕಾದರೆ ನಾವು ಮೊದಲಿಗೆ ವನ್ಯ ಜೀವಿಗಳ ಆವಾಸಸ್ಥಾನವನ್ನು ಸಂರಕ್ಷಿಸಬೇಕು ಎಂದು ಈಶ್ವರ ಖಂಡ್ರೆ ಪ್ರತಿಪಾದಿಸಿದರು.
ಕಸ್ತೂರಿರಂಗನ್ ವರದಿ ಬಗ್ಗೆ ಸಚಿವ ಸಂಪುಟದಲ್ಲಿ ಪುನಹ ಚರ್ಚಿಸಿ, ರಾಜ್ಯ ಸರ್ಕಾರ ಒಂದು ನಿಲುವಿಗೆ ಬರಲಿದೆ ಎಂದು ಅವರು ಹೇಳಿದರು.