ತಮ್ಮದೇ ಮಠದ ಶ್ರೀಗಳ ವಿರುದ್ದ ಸಿಡಿದೆದ್ದ ಸಾದರ ಲಿಂಗಾಯತ ಸಮಾಜ ಬಾಂಧವರು-ಮುಖಂಡರು
ದಾವಣಗೆರೆ, ಆ.೫; ಸಿರಿಗೆರೆ ಶ್ರೀ ತರಳಬಾಳು ಬೃಹನ್ಮಠದ ಡಾ.ಶಿವಮೂರ್ತಿ ಶಿವಾಚಾರ್ಯ ಸ್ವಾಮೀಜಿ ಹಾಗೂ ಸಾಣೇಹಳ್ಳಿ ಡಾ.ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮೀಜಿ ಪೀಠದಿಂದ ನಿವೃತ್ತಿ ಘೋಷಿಸಿ, ಮುಂದಿನ ಮರಿ ಅಥವಾ ಉತ್ತರಾಧಿಕಾರಿ ಘೋಷಣೆ ಮಾಡಬೇಕು, ಶ್ರೀಮಠದ ಏಕವ್ಯಕ್ತಿ ಡೀಡ್ ರದ್ಧುಪಡಿಸಿ, ಲಿಂಗೈಕ್ಯ ಡಾ.ಶಿವಕುಮಾರ ಸ್ವಾಮೀಜಿಗಳ ಮೂಲ ಬೈಲಾ ಯಥವತ್ತಾಗಿ ಜಾರಿಗೊಳಿಸುವಂತೆ ಸಾದರ ಲಿಂಗಾಯತ ಸಮಾಜ ಒಕ್ಕೊರಲ ನಿರ್ಣಯ ಕೈಗೊಂಡಿದೆ.
ನಗರದ ಹೊರ ವಲಯದ ಅಪೂರ್ವ ರೆಸಾರ್ಟ್‌ನ ಸಭಾಂಗಣದಲ್ಲಿ ಭಾನುವಾರ ಅಖಿಲ ಭಾರತ ವೀರ‍ಶೈವ ಲಿಂಗಾಯತ ಮಹಾಸಭಾ ರಾಷ್ಟ್ರೀಯ ಅಧ್ಯಕ್ಷ, ಶಾಸಕ ಡಾ.ಶಾಮನೂರು
ಶಿವಶಂಕರಪ್ಪ ಅಧ್ಯಕ್ಷತೆಯಲ್ಲಿ ಮಾಜಿ ಸಚಿವರಾದ ಎಸ್.ಎ.ರವೀಂದ್ರನಾಥ, ಬಿ.ಸಿ.ಪಾಟೀಲ, ಎಂಎಲ್‌ಸಿ ರುದ್ರೇಗೌಡ, ಸಮಾಜದ ಹಿರಿಯ ಮುಖಂಡರಾದ ಆನಗೋಡು ನಂಜುಂಡಪ್ಪ,
ಅಣಬೇರು ರಾಜಣ್ಣ ಇತರರ ನೇತೃತ್ವದ ಸಭೆಯಲ್ಲಿ ಸುಧೀರ್ಘ ಚರ್ಚೆಯ ನಂತರ ಎರಡು ಪ್ರಮುಖ ತೀರ್ಮಾನ ಕೈಗೊಳ್ಳಲಾಯಿತು.
ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಶಾಸಕ ಡಾ.ಶಾಮನೂರು ಶಿವಶಂಕರಪ್ಪ, ದಶಕದ ಹಿಂದೆ ಮಲ್ಲಿಕಾರ್ಜುನ ಖರ್ಗೆ, ನಾನು ಸಿರಿಗೆರೆಯಲ್ಲಿ ಕಾರ್ಯಕ್ರಮ ಮುಗಿಸಿ ಹೊರಟಿದ್ದ ವೇಳೆ ಡಾ.ಶಿವಮೂರ್ತಿ ಸ್ವಾಮೀಜಿ ನಮಗೆ ತಡೆದು, ತಾವು ಪೀಠ ತ್ಯಾಗ ಮಾಡುವ ಘೋಷಣೆ ಮಾಡಿದರು. ಆಗ ಮುಗ್ಧ ಭಕ್ತರು ಸ್ವಾಮೀಜಿ ಕಾಲಿಗೆ ಬಿದ್ದು, ಅಂತಹ ನಿರ್ಧಾರ ಕೈಗೊಳ್ಳದಂತೆ ಒತ್ತಡ ಹೇರಿದ್ದರು. ಅದೆಲ್ಲಾ ಈಗ ಮುಗಿದದ ಕಥೆ. ಈಗ ಸ್ವಾಮೀಜಿ ಪೀಠ ತ್ಯಾಗ ಮಾಡುವುದಾಗಿ ಹೇಳಿಲ್ಲ. ಯಾರಿಗೂ ಕೇಳಿಲ್ಲ. 30 ವರ್ಷದ ಹಿಂದೆ ಮಾಡಿಸಿಕೊಂಡ ಏಕವ್ಯಕ್ತಿ ಡೀಡ್ ವಿಚಾರವೂ ಯಾರಿಗೂ ಗೊತ್ತಿರಲಿಲ್ಲ. ಈಗ ಗೊತ್ತಾಗಿ, ವಿಚಾರ ನ್ಯಾಯಾಲಯದ ಮೆಟ್ಟಿಲೇರಿದೆ ಎಂದರು.
ಸಮಾಜ ಬಾಂಧವರು ಮಠಕ್ಕಾಗಿ 10 ಪೈಸೆಯಿಂದ ಕೋಟ್ಯಾಂತರ ರು. ಕಾಣಿಕೆ ಕೊಟ್ಟು ಕಟ್ಟಿದ ಮಠ ಇದು. ಸುಮಾರು 300-400 ಕೋಟಿ ಹಣ ಭಕ್ತರ ಕಾಣಿಕೆಯದ್ದು. ಏಕವ್ಯಕ್ತಿ ಡೀಡ್‌ ಯಾರೂ ಸಹ ಒಪ್ಪಲ್ಲ. ಯಾರೋ ಒಬ್ಬರು ಮಾಡಿದ್ದನ್ನು ನೋಡಿ, ಉಳಿದವರು ಅದನ್ನು ಆರಂಭಿಸುತ್ತಾರೆ. ಅಂತಹದ್ದೆಲ್ಲಾ ಯಾವುದೇ ಸಮಾಜದಲ್ಲೂ ಆಗಬಾರದು. ಇದೇ ವಿಚಾರವನ್ನು
ದೊಡ್ಡದು ಮಾಡುವುದೂ ಬೇಡ. ಆ.18ಕ್ಕೆ ಬೆಂಗಳೂರಿನಲ್ಲಿ ಸಮಾಜದ ಪ್ರಮುಖರೆಲ್ಲಾ ಸೇರಿ, ಸ್ವಾಮೀಜಿ ಭೇಟಿ ಮಾಡಿ ಪೀಠ ತ್ಯಾಗ ಮಾಡುವಂತೆ, ಏಕವ್ಯಕ್ತಿ ಡೀಡ್ ರದ್ಧುಪಡಿಸಲು, ಶ್ರೀಮಠಕ್ಕೆ ಮರಿ ಅಥವಾ ಉತ್ತರಾಧಿಕಾರಿ ನೇಮಕ ಮಾಡುವಂತೆ ಮನವಿ ಮಾಡೋಣ ಎಂದು ಅವರು ತಿಳಿಸಿದರು.
ಶಿಕ್ಷಣ ಸಂಸ್ಥೆ, ಇಂಜಿನಿಯರಿಂಗ್ ಕಾಲೇಜು ಹೀಗೆ ಶಿಕ್ಷಣ ಕ್ಷೇತ್ರಕ್ಕೆ ಶ್ರೀಮಠ ಅಪಾರ ಕೊಡುಗೆ ನೀಡುತ್ತಿತ್ತು. ಆದರೆ, ಇಂದು ಅದೆಲ್ಲಾ ಮುಚ್ಚುವ ಪರಿಸ್ಥಿತಿ ಬಂದೊದಗಿದೆ. ಇಂತಹ ವೈಭವದ ಸಂಸ್ಥೆಗಳನ್ನು ಮುಚ್ಚುವುದು ನೋವಿನ ಸಂಗತಿ. ಹರಿಹರದ ಪಂಚಮಸಾಲಿ ಮಠದಲ್ಲಿ ಟ್ರಸ್ಟ್ ಮಾಡಿಕೊಂಡು, ಸಮಾಜದ ಮುಖಂಡರೇ ಅದನ್ನು ನಿರ್ವಹಿಸುತ್ತಾರೆ. ಅದೇ ರೀತಿ ಸಿರಿಗೆರೆಯ
ಮಠದಲ್ಲೂ ಆಗಬೇಕು. ಡಾ.ಶಿವಮೂರ್ತಿ ಶಿವಾಚಾರ್ಯ ಸ್ವಾಮೀಜಿ, ಡಾ.ಪಂಡಿತಾರಾಧ್ಯ ಸ್ವಾಮೀಜಿ, ಶ್ರೀ ಪ್ರಕಾಶ ಸ್ವಾಮೀಜಿ ಎಲ್ಲರೂ ಪೀಠ ತ್ಯಾಗ ಮಾಡಲಿ, ಅಲ್ಲಿ ಮರಿ ಅಥವಾ ಉತ್ತ
ರಾಧಿಕಾರಿ ನೇಮಿಸುವ ಕೆಲಸ ಆಗಲಿ ಅಂತಾ ಬೆಂಗಳೂರಿನಲ್ಲಿ ಸ್ವಾಮೀಜಿಗೆ ತಿಳಿಸಿ ಹೇಳೋಣ. ಆ ಸಭೆಯಲ್ಲಿ ಎಲ್ಲಾ ಸರಿಯಾದರೆ ಸರಿ. ಇಲ್ಲದಿದ್ದರೆ ಮುಂದೆ ಏನು ಮಾಡಬೇಕೆಂಬುದ
ನ್ನು ನಿರ್ಧರಿಸೋಣ ಎಂದು ಶಾಮನೂರು ಶಿವಶಂಕರಪ್ಪ ಹೇಳಿದರು.
ಮಾಜಿ ಸಚಿವ ಬಿ.ಸಿ.ಪಾಟೀಲ ಮಾತನಾಡಿ, ಸಿರಿಗೆರೆ ಮಠದ ಪರಂಪರೆಯಲ್ಲಿ ಸ್ವಾಮೀಜಿಗೆ 60 ವರ್ಷವಾದರೆ ಪೀಠ ತ್ಯಾಗ ಮಾಡಬೇಕೆಂಬ ನಿಯಮವಿದೆ. ಅದು ಪಾಲನೆಯಾಗಬೇಕು.
ಮಠದ ಆಸ್ತಿ, ಸ್ಥಿರ, ಚರ ಆಸ್ತಿಯೆಲ್ಲಾ ಸಮಾಜದ ಭಕ್ತರಿಗೆ ಸೇರಿದ್ದು. ಆದರೆ, ಸ್ವಾಮೀಜಿ ಸಮಾಜದ ಯಾರೊಬ್ಬರ ಗಮನಕ್ಕೂ ಬರದಂತೆ 1990ರಲ್ಲಿ ಏಕವ್ಯಕ್ತಿ ಡೀಡ್ ಮಾಡಿಕೊಂಡಿದ್ದು ಸರಿಯಲ್ಲ. ಈ ವಿಚಾರ ಈಚೆಗಷ್ಟೇ ಹೊರ ಬಂದಿದೆ. ಏಕವ್ಯಕ್ತಿ ಡೀಡ್ ರದ್ಧುಪಡಿಸಬೇಕು. ಮೂವರೂ ಸ್ವಾಮೀಜಿಗಳು ಪೀಠ ತ್ಯಾಗ ಮಾಡಬೇಕು. ಮರಿ ಅಥವಾ ಉತ್ತರಾಧಿಕಾರಿಗಳನ್ನು ಬಿಡಬೇಕು. ಗುರುಗಳು ನಮ್ಮ ಬೇಡಿಕೆಗೆ ಸ್ಪಂದಿಸಿದರೆ ಸಿರಿಗೆರೆ ಮಠದ ಇತಿಹಾಸದಲ್ಲೇ ಹಿಂದೆಂದೂ ಕಾಣದಂತಹ ತರಳಬಾಳು ಹುಣ್ಣಿಮೆ ಮಹೋತ್ಸವವನ್ನು ಭಕ್ತರು ಮಾಡಲಿದ್ದಾರೆ ಎಂದರು.
ಸಮಾಜದ ಹಿರಿಯ ಮುಖಂಡ ಆನಗೋಡು ನಂಜುಂಡಪ್ಪ ಮಾತನಾಡಿ, ಸಿರಿಗೆರೆ ತರಳಬಾಳು ಬೃಹನ್ಮಠದ ಡಾ.ಶಿವಮೂರ್ತಿ ಸ್ವಾಮೀಜಿ ವಿರುದ್ಧ 25 ವರ್ಷದಿಂದ ಹೋರಾಟ ನಡೆಸುತ್ತಾ
ಬಂದವನು ನಾನು. ನಮ್ಮ ವಿರುದ್ಧ ಕೇಸ್ ದಾಖಲಿಸಿದಾಗ ನನ್ನ ಮಗ ಸಹ ಹೋರಾಟಕ್ಕಿಳಿದ. ತಡವಾದರೂ ಇಂದು ಇಡೀ ಸಮಾಜ ಜಾಗೃತವಾಗಿರುವುದು ಖುಷಿ ತಂದಿದೆ. ಹೋರಾಟವುಇಲ್ಲಿಗೆ ಸಭೆಗೆ ಮುಕ್ತಾಯ ಆಗಬಾರದು. ಇದು ಆರಂಭವಾಗಿ, ರಾಜ್ಯವ್ಯಾಪಿ ಸಮಾಜದ ಭಕ್ತರು ಸ್ವಾಮೀಜಿ ವಿರುದ್ಧ ಧ್ವನಿ ಎತ್ತಬೇಕು. ಪರಂಪರಯ ಮಠವನ್ನು, ಗುರುಪೀಠದ ಗೌರವವನ್ನು
ಕಾಪಾಡುವ ಕೆಲಸಕ್ಕೆ ಎಲ್ಲರೂ ಕೈಜೋಡಿಸಬೇಕು ಎಂದು ಕರೆ ನೀಡಿದರು.
ಸಮಾಜದ ಮುಖಂಡರಾದ ಮಾಜಿ ಸಚಿವ ಎಸ್.ಎ.ರವೀಂದ್ರನಾಥ, ಅಪೂರ್ವ ಹೊಟೆಲ್‌ಗಳ ಸಮೂಹದ ಅಧ್ಯಕ್ಷ ಅಣಬೇರು ರಾಜಣ್ಣ, ಹರಿಹರ ಶಾಸಕ ಬಿ.ಪಿ.ಹರೀಶ, ಚಿಕ್ಕಮಗಳೂರು ಎಂಎಲ್‌ಸಿ ರುದ್ರಗೌಡ, ಮಾಜಿ ಶಾಸಕರಾದ ವಡ್ನಾಳ್ ರಾಜಣ್ಣ, ಟಿ.ಗುರುಸಿದ್ದನಗೌಡ, ಮಲ್ಲಿಕಾರ್ಜುನ ಮಾಡಾಳ, ಜೆ.ಆರ್‌.ಷಣ್ಮುಖಪ್ಪ, ಎಚ್.ಎನ್.ಚಂದ್ರಶೇಖರಪ್ಪ, ಬೆನಕಪ್ಪ, ಪ್ರೊ.ಸಿ
ದ್ದಪ್ಪ, ಚಟ್ನಹಳ್ಳಿ ಮಹೇಶ, ಮಹೇಶ ಪಲ್ಲಾಗಟ್ಟೆ, ಚೇತನ ಎಲೆಬೇತೂರು, ಬಿ.ಜಿ.ರಮೇಶ, ಶ್ರೀನಿವಾಸ ಮೆಳ್ಖೆಕಟ್ಟೆ, ಮೆಳ್ಳೆಕಟ್ಟೆ ನಾಗರಾಜ, ನಾಗರಾಜ ಪಲ್ಲಾಗಟ್ಟೆ, ಸಂತೋಷ ಮೆಳ್ಳೆಕಟ್ಟೆ,
ನಾಗರಾಜ ಬಣಕಾರ ಕುರುಡಿ, ವಿಶ್ವ ಮಂಡಲೂರು, ಶಿವಮೂರ್ತೆಯ್ಯ ಹಿರೇಮೇಗಳಗೆರೆ, ಬಸವಲಿಂಗಪ್ಪ ಕಲ್ಪನಹಳ್ಳಿ, ಆವರಗೆರೆ ಲಿಂಗರಾಜ, ಶ್ರೀನಿವಾಸ ಇತರರು ಇದ್ದರು.