2ನೇ ದಿನಕ್ಕೆ ಪಾದಯಾತ್ರೆ
ಮುಡಾ ಹಗರಣ ; ಬಿಡದಿಯಿಂದ ರಾಮನಗರದತ್ತ ಹೆಜ್ಜೆ ಹಾಕಿದ ಬಿಜೆಪಿ-ಜೆಡಿಎಸ್ ನಾಯಕರು, ಕಾಂಗ್ರೆಸ್ ವಿರುದ್ಧ ಆಕ್ರೋಶ


(ಸಂಜೆವಾಣಿ ಪ್ರತಿನಿಧಿಯಿಂದ)
ಬೆಂಗಳೂರು,ಆ.೪:ಮುಡಾ ಹಗರಣಕ್ಕೆ ಸಂಬಂಧಿಸಿದಂತೆ ಮುಖ್ಯಮಂತ್ರಿ ಸಿದ್ದರಾಮಯ್ಯ ರಾಜೀನಾಮೆಗೆ ಆಗ್ರಹಿಸಿ ಬಿಜೆಪಿ-ಜೆಡಿಎಸ್ ನಡೆಸಿರುವ ಮೈಸೂರು ಚಲೋ ಪಾದಯಾತ್ರೆ ಇಂದು ೨ನೇ ದಿನಕ್ಕೆ ಕಾಲಿಟ್ಟಿದೆ.
ಪಾದಯಾತ್ರೆಯ ಮೊದಲ ದಿನವಾದ ನಿನ್ನೆ ಕೆಂಗೇರಿಯಿಂದ ಬಿಡದಿವರೆಗೂ ಪಾದಯಾತ್ರೆ ನಡೆಸಿ ಬಿಡದಿಯಲ್ಲಿ ವಾಸ್ಯವ್ತ ಹೂಡಿದ್ದ ಎರಡೂ ಪಕ್ಷಗಳ ನಾಯಕರು ಹಾಗೂ ಕಾರ್ಯಕರ್ತರುಗಳು ಪಾದಯಾತ್ರೆಯ ೨ನೇ ದಿನವಾದ ಇಂದು ಬಿಡದಿಯಿಂದ ರಾಮನಗರಕ್ಕೆ ಹೆಜ್ಜೆ ಹಾಕಿದರು. ಇಂದು ಪಾದಯಾತ್ರಿಗಳು ರಾಮನಗರದಲ್ಲಿ ವಾಸ್ತವ್ಯ ಹೂಡುವರು.
ಪಾದಯಾತ್ರೆ ಯುದ್ದಕ್ಕೂ ಎಲ್ಲ ಮುಖಂಡರುಗಳು ಕಾರ್ಯಕರ್ತರುಗಳು ಕಾಂಗ್ರೆಸ್ ಸರ್ಕಾರದ ವಿರುದ್ಧ ಧಿಕ್ಕಾರದ ಘೋಷಣೆಗಳನ್ನು ಕೂಗುತ್ತ ಪಾದಯಾತ್ರೆ ನಡೆಸಿದರು.
ತೊಲಗಲಿ ತೊಲಗಲಿ ಕಾಂಗ್ರೆಸ್ ಸರ್ಕಾರ ತೊಲಗಲಿ, ಧಿಕ್ಕಾರ ಧಿಕ್ಕಾರ ಕಾಂಗ್ರೆಸ್ ಸರ್ಕಾರಕ್ಕೆ ಧಿಕ್ಕಾರ, ರಾಜೀನಾಮೆ ರಾಜೀನಾಮೆ ಸಿದ್ದರಾಮಯ್ಯ ರಾಜೀನಾಮೆ ಎಂಬ ಘೋಷಣೆಗಳನ್ನು ಕೂಗುತ್ತ ಭಿತ್ತಿಪತ್ರಗಳನ್ನು ಪ್ರದರ್ಶಿಸುತ್ತ ಪಾದಯಾತ್ರಿಗಳು ಸಾಗಿದರು.
೨ನೇ ದಿನದ ಪಾದಯಾತ್ರೆ ಸುಮಾರು ೨೨ ಕಿ.ಮೀ ಸಾಗಲಿದ್ದು, ರಾಮನಗರದಲ್ಲಿ ಸಂಜೆ ಎರಡೂ ಪಕ್ಷಗಳ ನಾಯಕರ ಸಾರ್ವಜನಿಕ ಸಭೆ ನಡೆಯಲಿದೆ.
ಬಿಡದಿಯಲ್ಲಿ ತಟ್ಟೆ ಇಡ್ಲಿ ಸವಿದ ಮುಖಂಡರು ಕಾರ್ಯಕರ್ತರು
ಪಾದಯಾತ್ರೆಯಲ್ಲಿ ಪಾಲ್ಗೊಂಡಿರುವ ಎಲ್ಲ ಮುಖಂಡರು ಹಾಗೂ ಕಾರ್ಯಕರ್ತರು ಬಿಡದಿಯಲ್ಲಿಂದು ತಟ್ಟೆ ಇಡ್ಲಿ ಸವಿದು ಉಫಹಾರ ಮುಗಿಸಿ ಪಾದಯಾತ್ರೆಯನ್ನು ಮುಂದುವರೆಸಿದರು.
ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ ವಿಜಯೇಂದ್ರ ಸೇರಿದಂತೆ ಎರಡೂ ಪಕ್ಷಗಳ ಶಾಸಕರುಗಳು ಹಾಗೂ ಮುಖಂಡರುಗಳು ಬಿಡದಿಯ ಶಿವದರ್ಶಿನಿ ಹೋಟೆಲ್‌ನಲ್ಲಿ ತಟ್ಟೆ ಇಡ್ಲಿ ಸವಿದು ಕಾರ್ಯಕರ್ತರ ಜತೆ ಹೆಜ್ಜೆ ಹಾಕಿದರು.