ಕಾಂಗ್ರೆಸ್ ಸರ್ಕಾರದ ಭ್ರಷ್ಟಾಚಾರದ ವಿರುದ್ಧ ಪಾದಯಾತ್ರೆ
(ಸಂಜೆವಾಣಿ ಪ್ರತಿನಿಧಿಯಿಂದ)
ಬೆಂಗಳೂರು,ಆ.೪:ಮೈಸೂರು ಚಲೋ ಪಾದಯಾತ್ರೆಯನ್ನು ಅಸೂಯೆಯಿಂದ ಹಮ್ಮಿಕೊಂಡಿಲ್ಲ ನನಗೆ ಮತ್ತೆ ಅಧಿಕಾರಕ್ಕೆ ಬರುವ ಆಸೆ ಇಲ್ಲ ನಾನು ೨ ಸಲ ಮುಖ್ಯಮಂತ್ರಿಯಾಗಿದ್ದೇನೆ. ರಾಜ್ಯಕ್ಕೆ ಒಳ್ಳೆಯದು ಆಗಬೇಕು ಎಂದು ಹಾಗೂ
ಕಾಂಗ್ರೆಸ್ ಸರ್ಕಾರದ ಭ್ರಷ್ಟಾಚಾರದ ವಿರುದ್ಧ ಹೋರಾಟ ನಡೆಸಿದ್ದೇವೆ ಅಷ್ಟೆ ಎಂದು ಕೇಂದ್ರ ಸಚಿವ ಜೆಡಿಎಸ್ ರಾಜ್ಯಾಧ್ಯಕ್ಷ ಎಚ್‌ಡಿ ಕುಮಾರಸ್ವಾಮಿ ಹೇಳಿದರು.
ಡಿ.ಕೆ ಶಿವಕುಮಾರ್ ನೊಣವಿನಕೆರೆ ಅಜ್ಜಯ್ಯನ ಮೇಲೆ ಭಕ್ತಿ ಗೌರವವಿದ್ದರೆ ಪ್ರಾಮಾಣಿಕವಾಗಿ ಬೆಳೆದು ಬಂದೆ ಎಂದು ಪ್ರಮಾಣ ಮಾಡಲಿ ನಾನು ಪ್ರಮಾಣ ಮಾಡುತ್ತೇನೆ ಎಂದು ಸವಾಲು ಹಾಕಿದ ಕುಮಾರಸ್ವಾಮಿ ಅವರು ಡಿಕೆಶಿಗೆ ಅಜ್ಜಯ್ಯನ ಶಾಪವೂ ಆರಂಭವಾಗಿದೆ ಎಂದರು.
ಉಪಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ದಲಿತರಿಗೆ ಸೇರಿಬೇಕಾದ ೬೮ ಎಕರೆ ಜಮೀನನ್ನು ಲಪಟಾಯಿಸಿದ್ದಾರೆ. ದಲಿತರಿಗೆ ಸಿಗಬೇಕಾದ ನಿವೇಶನಗಳನ್ನು ಡಿಕೆಶಿ ಅಸಲಿ ಸೊಸೈಟಿ ನಕಲಿ ಮಾಡಿ ದಲಿತರ ಭೂಮಿ ನುಂಗಿದ್ದಾರೆ ಎಂದು ಆರೋಪಿಸಿದರು.
ನಾನು ಯಾರಿಗೂ ದ್ರೋಹ ಮಾಡಿಲ. ಜನರ ಆರ್ಶೀವಾದವೇ ನನ್ನ ಬಲ, ಅದೇ ನನ್ನ ಬೆಳೆಸಿದೆ ನಾನು ಯಡಿಯೂರಪ್ಪgವರಿಗೂ ದ್ರೋಹ ಮಾಡಲಿಲ್ಲ ಆ ಸಂದರ್ಭದಲ್ಲಿ ಅಧಿಕಾರ ಹಂಚಿಕೆ ಮಾಡಲು ಆಗಲಿಲ್ಲ ಎಂದರು.
ಮೈಸೂರು ಚಲೋ ಪಾದಯಾತ್ರೆಯ ೨ನೇ ದಿನವಾದ ಇಂದು ಬಿಡದಿಯಲ್ಲಿ ಮಾತನಾಡಿದ ಅವರು, ಕಾಂಗ್ರೆಸ್ ಸರ್ಕಾರ ಜನವಿರೋಧಿ ಸರ್ಕಾರವಾಗಿದೆ. ಗ್ಯಾರಂಟಿಗಳಿಂದ ಬದಲಾವಣೆಗಳನ್ನು ತರುವ ಬದಲು ಕಾಂಗ್ರೆಸ್ ಸರ್ಕಾರ ರಾಜ್ಯವನ್ನು ದರಿದ್ರದತ್ತ ತೆಗೆದುಕೊಂಡು ಹೋಗಿದ್ದಾರೆ ಎಂದು ವಾಗ್ದಾಳಿ ನಡೆಸಿದರು.
ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದ ದಿನವೆ ಅಂಗಡಿ ಬಾಗಿಲು ತೆರೆದು ಕೂತಿದೆ. ಮಂತ್ರಿಗಳಲ್ಲಿ ಭ್ರಷ್ಟಾಚಾರ ನಡೆಸಲು ಪೈಪೋಟಿ ನಡೆಯುತ್ತಿದೆ ಎಂದು ಹರಿಹಾಯ್ದರು.ಬಿಜೆಪಿ ಸರ್ಕಾರದ ಅಕ್ರಮದ ಬಗ್ಗೆ ಮಾತನಾಡುವ ಕಾಂಗ್ರೆಸ್ಸಿಗರಿಗೆ ಒಂದೇ ಒಂದು ದಾಖಲೆ ಕೊಡಲು ಆಗಿಲ್ಲ. ಆದರೆ ನಮ್ಮ ಎರಡೂ ಪಕ್ಷಗಳ ಶಾಸಕರು ನಾಯಕರುಗಳು ಕಾಂಗ್ರೆಸ್ ಅಕ್ರಮದ ಬಗ್ಗೆ ದಾಖಲೆ ಸಮೇತ ಮಾತನಾಡುತ್ತಿದ್ದಾರೆ ಎಂದರು.
ಮೈಸೂರುನಗರದ ಉಸ್ತುವಾರಿಯನ್ನು ಮುಖ್ಯಮಂತಿಗಳೇ ವಹಿಸಿಕೊಂಡಿದ್ದಾರೆ ಸಿಎಂ ತಮ್ಮ ಪತ್ನಿ ಹೆಸರಿನ್ನಲ್ಲಿ ೧೫ ಸೈಟು ಪಡೆಯಲು ನಮ್ಮ ವಿರೋಧವಿಲ್ಲ. ಆದರೆ ಅಧಿಕಾರ ದುರುಪಯೋಗ ಮಾಡಿಕೊಂಡು ನಿವೇಶನ ಪಡೆದಿದ್ದಾರೆ ಎಂದು ದೂರಿದರು.
ನಕಲಿ ದಾಖಲೆ ಸೃಷ್ಟಿಸಿ ಕಾನೂನುಬಾಹಿರವಾಗಿ ನಿವೇಶನ ಪಡೆದಿದ್ದಾರೆ. ಸಿದ್ದರಾಮಯ್ಯ ಸರ್ಕಾರದ ಆಸ್ತಿ ಲಪಟಾಯಿಸಿದ್ದಾರೆ. ಇದರ ದಾಖಲೆ ವಿಧಾನಸಭೆಯಲ್ಲಿ ಇಟ್ಟಿದ್ದೇವೆ. ಆದರೆ ಉತ್ತರ ಕೊಡದೆ ಕಾಂಗ್ರೆಸ್ ನಾಯಕರು ಪಲಾಯನ ಮಾಡಿದ್ದಾರೆ ಎಂದು ಟೀಕಿಸಿದರು.
ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಏನೇನು ಪ್ರಶ್ನೆಗಳನ್ನು ಹಾಕಿದ್ದಾರೋ ಅದಕ್ಕೆಲ್ಲ ನಾನು ಉತ್ತರ ಕೊಡಲು ಇಲ್ಲಿದ್ದೇನೆ. ಯಾರಿಗಾದರೂ ತಾಕತ್ತಿದ್ದರೆ, ಗಟ್ಟಿ ದನಿ ಇದ್ದರೆ ಅದು ಕುಮಾರಸ್ವಾಮಿಗೆ ಎಂಬುದು ಶಿವಕುಮಾರ್ ಅವರಿಗೆ ಗೊತ್ತಿದೆ. ಡಿ.ಕೆ. ಶಿವಕುಮಾರ್ ನನ್ನ ಬಗ್ಗೆ ವಿಜಯೇಂದ್ರ ಬಗ್ಗೆ ಏಕವಚನದಲ್ಲಿ ಮಾತನಾಡಿದ್ದಾರೆ. ನಾವು ಹಳ್ಳಿಯ ಮಕ್ಕಳೆ, ಏಕವಚನದಲ್ಲಿ ಮಾತನಾಡಲು ನಮಗೂ ಗೊತ್ತು. ಆದರೆ, ಆ ಕೆಳಮಟ್ಟಕ್ಕೆ ನಾವು ಇಳಿಯಲ್ಲ ಎಂದರು.
ನಾನು ಯಾರಿಗೂ ಮೋಸ ಮಾಡಿಲ್ಲ ವಂಚನೆ ಮಾಡಿಲ್ಲ ಯಾರಿಗೋ ವಂಚನೆ ಮಾಡಿ ಬಿಡದಿಯ ಕೇತಗಾನಹಳ್ಳಿ ಜಮೀನು ಖರೀದಿಸಿದ್ದು ಸಾಬೀತಾದರೆ ರಾಜಕೀಯ ನಿವೃತ್ತಿ ಹೊಂದುತ್ತೇನೆ ಎಂದು ಸವಾಲು ಹಾಕಿದರು.
ಹೆಣ್ಣುಮಗಳ ಅಪಹರಣ ಮಾಡಿ ಅವರ ತಂದೆಯಿಂದ ಸದಾಶಿವನಗರದಲ್ಲಿ ನಿವೇಶನ ಬರೆಸಿಕೊಂಡಿದ್ದ್ದು ಯಾರು ಎಂಬುದು ಬಿಚ್ಚಿಡಲೇ ಎಂದು ಡಿಕೆಶಿ ವಿರುದ್ಧ ಪರೋಕ್ಷವಾಗಿ ವಾಗ್ದಾಳಿ ನಡೆಸಿದ ಕುಮಾರಸ್ವಾಮಿ ಅವರು ಅದೇನೋ ಬಿಚ್ಚಿಡುತ್ತೇನೆ ಅಂದ್ಯಲಪ್ಪ ಬಿಚ್ಚು ನೋಡೋಣ ನಂದು ವಿಜಯೇಂದ್ರದು ಏನಿದೆ ನಿಮ್ಮ ಬಳಿ ಬಿಚ್ಚಲು ನಾನಿರುವುದು ಬೀದಿಯಲ್ಲಿ ನೀವಿರೋದು ಗಾಜಿನ ಮನೆಯಲ್ಲಿ ಡಿಕೆಶಿ ವಿರುದ್ಧ ಕಿಡಿಕಾರಿದರು.