ಜಮೀನು ಖರೀದಿ ಸಿಎಂ ಉತ್ತರಿಸಲಿ
ಬೆಂಗಳೂರು. ಆ. ೪- ಮುಡಾ ಹಗರಣಕ್ಕೆ ಸಂಬಂಧಿಸಿದಂತೆ ಮುಖ್ಯಮಂತ್ರಿ ಸಿದ್ದರಾಮಯ್ಯನವರ ಭಾವಮೈದನ ಜಮೀನು ಖರೀದಿಸಿರುವ ಬಗ್ಗೆಯೇ ಸಾಕಷ್ಟು ಅನುಮಾನಗಳಿದ್ದು, ಹಲವು ಪ್ರಶ್ನೆಗಳಿಗೆ ಕನ್ನಡಿಗರು ಮುಖ್ಯಮಂತ್ರಿಗಳಿಂದ ಉತ್ತರ ಕೇಳುತ್ತಿದ್ದಾರೆ. ಇದಕ್ಕೆ ಮುಖ್ಯಮಂತ್ರಿಗಳು ಉತ್ತರ ನೀಡಬೇಕು ಎಂದು ಪ್ರತಿಪಕ್ಷ ನಾಯಕ ಆರ್. ಅಶೋಕ್ ಒತ್ತಾಯಿಸಿದ್ದಾರೆ.
ಈ ಬಗ್ಗೆ ಸಾಮಾಜಿಕ ಜಾಲತಾಣ ಎಕ್ಸ್‌ನಲ್ಲಿ ಟ್ವೀಟ್ ಮಾಡಿರುವ ಅವರು, ಮುಖ್ಯಮಂತ್ರಿ ಸಿದ್ದರಾಮಯ್ಯನವರೆ ತಮ್ಮ ಭಾವಮೈದ ಮಲ್ಲಿಕಾರ್ಜುನ ಸ್ವಾಮಿಯವರು ಜಮೀನು ಖರೀದಿಸಿದ್ದು, ದೇವರಾಜು ಅವರಿಂದ ಎಂದು ಹೇಳುತ್ತಾರೆ. ಆದರೆ ಅವರು ಭೂಮಿ ಖರೀದಿಸಿದಾಗ ದೇವರಾಜು ಹೆಸರಿನಲ್ಲಿ ಎನ್‌ಕಂಬರೆನ್ಸ್ ಸರ್ಟಿಫಿಕೆಟ್ ಇರಲಿಲ್ಲ ಎನ್ನುವುದು ಸತ್ಯ ಅಲ್ಲವೇ. ೧೯೬೮ ರಲ್ಲಿ ಜಮೀನನ್ನು ದೇವರಾಜ ಮೈಲಾರಯ್ಯ ಮತ್ತು ಕುಟುಂಬದವರಿಗೆ ಮಾರಿದ್ದು, ನಂತರ ನಕಲಿ ದಾಖಲೆ ಸೃಷ್ಠಿಸಿ ತಮ್ಮ ಭಾವಮೈದ ಮಲ್ಲಿಕಾರ್ಜುನಸ್ವಾಮಿಯವರಿಗೆ ಮಾರಿರುವುದು ಸತ್ಯವಲ್ಲವೇ ಮುಖ್ಯಮಂತ್ರಿಗಳೇ ಎಂದು ಅಶೋಕ್ ಪ್ರಶ್ನಿಸಿದ್ದಾರೆ.
ಜಮೀನಿನ ಮಾಲೀಕತ್ವದ ಬಗ್ಗೆ ಇಷ್ಟೆಲ್ಲಾ ಗೊಂದಲ ಇದ್ದರೂ ತಮ್ಮ ಭಾಮೈದ ಜಮೀನು ಖರೀದಿಸಿದ್ದು ಏಕೆ, ಜಮೀನು ಖರೀದಿಸುವಾಗ ಸ್ಥಳ ಪರಿಶೀಲನೆ ಮಾಡದೆಯೇ ಖರೀದಿ ಮಾಡಿದ್ದರಾ ಅಥವಾ ಆ ವೇಳೆಗೆ ಅಲ್ಲಿ ಹಾಗಾಗಲೇ ಬಡಾವಣೆ ಅಭಿವೃದ್ಧಿಯಾಗಿತ್ತು ಎಂದು ಜಮೀನು ಖರೀದಿ ಮಾಡಿದರಾ ಎಂದು ಅಶೋಕ್ ಪ್ರಶ್ನಿಸಿ, ೨೦೦೩ ರಲ್ಲೆ ಮುಡಾ ನಿವೇಶನ ಮಾಡಿ ಕ್ರಯಕ್ಕೆ ಹಂಚಿಕೆ ಮಾಡಿದ ಮೇಲೆ ೨೦೦೫ ರಲ್ಲಿ ಅದೇ ಜಾಗವನ್ನು ಜಿಲ್ಲಾಧಿಕಾರಿಗಳು ಪರಿಶೀಲನೆ ಮಾಡಿ, ಕೃಷಿಯೇತರ ಉದ್ದೇಶಕ್ಕೆ ಪರಿವರ್ತನೆ ಮಾಡಲು ವರದಿ ನೀಡಲು ಹೇಗೆ ಸಾಧ್ಯ ಎಂದು ಪ್ರಶ್ನಿಸಿದ್ದಾರೆ.
ಈ ಜಮೀನು ೨೦೧೦ ರಲ್ಲಿ ಅರಿಶಿನ-ಕುಂಕುಮ ರೂಪದಲ್ಲಿ ತಮ್ಮ ಪತ್ನಿ ಪಾರ್ವತಿಯವರಿಗೆ ಸಿಕ್ಕಾಗ ಅವರು ಸ್ಥಳಕ್ಕೆ ಭೇಟಿ ನೀಡಿರಲಿಲ್ಲವೇ ಸಿದ್ದರಾಮಯ್ಯನವರೇ ಉತ್ತರ ಕೊಡಿ ಎಂದು ಅಶೋಕ್ ಟ್ವೀಟ್‌ನಲ್ಲಿ ಆಗ್ರಹಿಸಿದ್ದಾರೆ.