ಭ್ರಷ್ಟಾಚಾರ: ಹೈಕಮಾಂಡ್ ಪಾಲುದಾರ
ಹುಬ್ಬಳ್ಳಿ, ಆ ೪: ಕರ್ನಾಟಕದಲ್ಲಿ ಕಾಂಗ್ರೆಸ್ ಸರ್ಕಾರದಿಂದ ದಿನದಿಂದ ದಿನಕ್ಕೆ ಭ್ರಷ್ಟಾಚಾರ ಹೆಚ್ಚುತ್ತಿದ್ದು, ಭ್ರಷ್ಟಾಚಾರದ ಹಣದಲ್ಲಿ ಕಾಂಗ್ರೆಸ್ ಹೈಕಮಾಂಡ್‌ನ ಪಾಲುದಾರರಿದ್ದಾರೆ ಎಂದು ಕೇಂದ್ರ ಸಚಿವ ಪ್ರಹ್ಲಾದ ಜೋಶಿ ಆರೋಪಿಸಿದರು.
ನಗರದಲ್ಲಿಂದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಒಂದೂವರೆ ವರ್ಷದ ಒಳಗಾಗಿಯೇ ಸಿಎಂ ಮೇಲೆ ಗಂಭೀರ ಆರೋಪ ಬಂದಿರುವುದು ದುರ್ದೈವ ಎಂದರು.
ಯಾದಗಿರಿ ಪಿಎಸ್‌ಐ ವರ್ಗಾವಣೆ ವಿಚಾರದಲ್ಲಿ ಎಂಎಲ್‌ಎ ತಲೆಮರೆಸಿಕೊಂಡಿದ್ದಾರೆ. ಭ್ರಷ್ಟಾಚಾರದಲ್ಲಿ ಶಾಸಕರೂ ಸಹ ಮುಳುಗಿದ್ದಾರೆ ಎಂದವರು ದೂರಿದರು.
ವರ್ಗಾವಣೆ ವಿಚಾರದಲ್ಲಿ ಸವಾಲು ಪ್ರಕ್ರಿಯೆ ನಡೆಯುತ್ತಿದೆ. ಪೊಲೀಸ್ ಹಾಗೂ ಬೇರೆ ಬೇರೆ ಇಲಾಖೆ ಅಧಿಕಾರಿಗಳನ್ನು ಸವಾಲಿನ ಮೂಲಕ ವರ್ಗಾವಣೆ ಮಾಡಲಾಗುತ್ತಿದೆ ಎಂದು ಅವರು ಆಪಾದಿಸಿದರು.
ಮುಡಾ ಹಗರಣದಲ್ಲಿ ಸಿಎಂ ಭಾಗಿಯಾದ ಆರೋಪ ಎದುರಿಸುತ್ತಿದ್ದಾರೆ. ವಾಲ್ಮೀಕಿ ನಿಗಮದ ಹಗರಣದ ಬಗ್ಗೆಯೂ ನಾನು ಹಲವಾರು ಬಾರಿ ಹೇಳಿದ್ದೇನೆ. ಈ ಭ್ರಷ್ಟಾಚಾರದ ಹಣವನ್ನ ಕಾಂಗ್ರೆಸ್ ಹೈಕಮಾಂಡ್‌ಗೆ ಮುಟ್ಟಿಸಿಲ್ಲ ಅನ್ನೋದನ್ನ ಸಾಬೀತುಪಡಿಸಲಿ ಎಂದ ಅವರು, ಪಾಲುದಾರಿಕೆ ಇಲ್ಲದಿದ್ದಲ್ಲಿ ಸಿದ್ದರಾಮಯ್ಯನವರ ರಾಜೀನಾಮೆ ಪಡೆಯಲಿ ಎಂದು ಆಗ್ರಹಿಸಿದರು.
ಭ್ರಷ್ಟಾಚಾರದಲ್ಲಿ ನ್ಯಾಯಾಂಗ ತನಿಖೆ ಎಂದರೆ ತಪ್ಪಿಸಿಕೊಳ್ಳುವ ರಹದಾರಿಯಾಗಿದೆ. ಇದು ಸ್ಪಷ್ಟವಾಗಿ ‘ಗೇಮ್‌ಪ್ಲ್ಯಾನ್’ ಎನ್ನುವುದು ಸ್ಪಷ್ಟವಾಗಿದೆ. ಈ ಪ್ರಕರಣವನ್ನು ಸಿಬಿಐಗೆ ಕೊಡಬೇಕು ಎಂದು ಜೋಶಿ ಒತ್ತಾಯಿಸಿದರು.