ವಯನಾಡು ಭೂಕುಸಿತ: ಇನ್ನೂ 11 ಮೃತದೇಹ ಪತ್ತೆ
ತಿರುವನಂತಪುರ,ಆ.೪:ಕೇರಳದ ವಯನಾಡಿನಲ್ಲಿ ಸಂಭವಿಸಿದ ಸರಣಿ ಭೂಕುಸಿತ ಪ್ರಕರಣಗಳಲ್ಲಿ ದಿನದಿಂದ ದಿನಕ್ಕೆ ಸಾವಿನ ಸಂಖ್ಯೆ ಏರಿಕೆಯಾಗುತ್ತಲೇ ಇದೆ. ಸೂಚಿಪ್ಪಾರ ಜಲಪಾತದಲ್ಲಿ ೧೧ ಮೃತದೇಹಗಳು ಪತ್ತೆಯಾಗಿವೆ. ಇದರೊಂದಿಗೆ ಸಾವಿನ ಸಂಖ್ಯೆ ೩೫೦ರ ಗಡಿ ದಾಟಿದೆ.
ಸರಣಿ ಭೂಕುಸಿತ ಸಂಭವಿಸಿದ ಸ್ಥಳಗಳಲ್ಲಿ ಸೇನಾಪಡೆ, ಎನ್‌ಡಿಆರ್‌ಎಫ್, ಎಸ್‌ಡಿಆರ್‌ಎಫ್ ಮತ್ತು ಪೊಲೀಸರ ತಂಡ ನಡೆಸುತ್ತಿರುವ ಪರಿಹಾರ ಕಾರ್ಯಾಚರಣೆ ೬ನೇ ದಿನಕ್ಕೆ ಕಾಲಿಟ್ಟಿದೆ.
ಘಟನಾ ಸ್ಥಳದಲ್ಲಿ ದೃಶ್ಯಗಳು ಅತ್ಯಂತ ಭಯಾನಕವಾಗಿದ್ದು, ನಾಪತ್ತೆಯಾಗಿರುವ ೨೦೦ಕ್ಕೂ ಹೆಚ್ಚು ಜನರ ಪತ್ತೆಗಾಗಿ ಶೋಧಕಾರ್ಯ ಮುಂದುವರೆದಿದೆ.
ಮುಂಡಕ್ಕೈ ಮತ್ತು ಚೂರುಲ್ಮಲದಿಂದ ೫ ಕಿ.ಮೀ ದೂರದಲ್ಲಿ ಜಲಪಾತವಿದ್ದು, ಛಲಿಯಾರ್ ನದಿ ರಭಸವಾಗಿ ಹರಿದ ಪರಿಣಾಮ ಗ್ರಾಮದ ಮನೆಯಲ್ಲಿದ್ದ ಕಾರು, ಸಿಲಿಂಡರ್, ಕುಕ್ಕರ್ ಸೇರಿದಂತೆ ಗೃಹೋಪಯೋಗಿ ವಸ್ತುಗಳು ನೀರಿನಲ್ಲಿ ಕೊಚ್ಚಿಕೊಂಡು ಬಂದಿವೆ. ಈ ದೃಶ್ಯಗಳನ್ನು ಗಮನಿಸಿದರೆ ದುರಂತದ ಭೀಕರತೆಗೆ ಹಿಡಿದ ಕೈಗನ್ನಡಿಯಾಗಿದೆ. ಜಲಪಾತದ ಅಕ್ಕಪಕ್ಕದಲ್ಲಿಯೂ ರಕ್ಷಣಾ ಸಿಬ್ಬಂದಿ ಕಾರ್ಯಾಚರಣೆ ಮುಂದುವರೆಸಿದೆ.
ಇನ್ನೊಂದೆಡೆ ಉತ್ತರ ಪ್ರದೇಶದ ಮೀರಟ್‌ನಿಂದ ಬಂದಿರುವ ಶ್ವಾನಗಳು ಇದುವರೆಗೂ ೩೦ ಶವಗಳನ್ನು ಪತ್ತೆ ಹಚ್ಚುವಲ್ಲಿ ಸಫಲವಾಗಿವೆ. ಡಿಕ್ಸಿ ಹೆಸರಿನ ಶ್ವಾನ ಶವಗಳನ್ನು ಪತ್ತೆ ಹಚ್ಚುವ ಕಾರ್ಯದಲ್ಲಿ ಪ್ರಮುಖಪಾತ್ರ ವಹಿಸಿದೆ.