ಭೀಕರ ಅಪಘಾತ: ಫ್ಲೈಓವರ್ ಸಿಬ್ಬಂದಿ ಸಾವು
ಬೆಂಗಳೂರು,ಆ.೪- ಎಲೆಕ್ಟ್ರಾನಿಕ್ ಸಿಟಿ ಫ್ಲೈ ಓವರ್ ರಸ್ತೆಯಲ್ಲಿ ನಿನ್ನೆ ಮಧ್ಯರಾತ್ರಿ ಭೀಕರ ಅಪಘಾತ ಸಂಭವಿಸಿ ಎಲಿವೇಟೆಡ್ ಫ್ಲೈ ಓವರ್ ಸಿಬ್ಬಂದಿ ದಾರುಣವಾಗಿ ಮೃತಪಟ್ಟಿದ್ದಾರೆ.
ಎಲಿವೇಟೆಡ್ ಫ್ಲೈ ಓವರ್ ಸಿಬ್ಬಂದಿ ಮಂಜುನಾಥ್ (೪೨) ಮೃತ ದುರ್ದೈವಿ.ಕಾರೊಂದು ಎಲೆಕ್ಟ್ರಾನಿಕ್ ಸಿಟಿ ಫ್ಲೈ ಓವರ್ ರಸ್ತೆಯಲ್ಲಿ ಕೆಟ್ಟು ನಿಂತಿತ್ತು. ಹೀಗಾಗಿ ಫ್ಲೈ ಓವರ್ ಸಿಬ್ಬಂದಿ ಟೋಯಿಂಗ್ ವಾಹನ ಕರೆಸಿ ತೆರವು ಮಾಡಿಸುತ್ತಿದ್ದರು. ಈ ವೇಳೆ ಮಂಜುನಾಥ್ ಅವರು ಫ್ಲೈಓವರ್ ಟ್ರಾಫಿಕ್ ನಿಯಂತ್ರಣ ಮಾಡುತ್ತಿದ್ದರು.
ಇನ್ನೇನು ಕಾರು ಟೋಯಿಂಗ್ ಮಾಡಬೇಕು ಎನ್ನುವ ವೇಳೆ ಅತಿವೇಗವಾಗಿ ಬಂದ ಗೂಡ್ಸ್ ವಾಹನದಿಂದ ಸರಣಿ ಅಪಘಾತ ಸಂಭವಿಸಿದೆ. ಗೂಡ್ಸ್ ಚಾಲಕ ಕುಡಿದ ಮತ್ತಿನಲ್ಲಿ ವಾಹನ ಚಲಾಯಿಸಿದ್ದೆ ಈ ಅಪಘಾತಕ್ಕೆ ಕಾರಣ ಎನ್ನಲಾಗಿದೆ. ಫ್ಲೈ ಓವರ್ ಟೋಲ್ ಸಿಬ್ಬಂದಿ ವಾಹನ ಮತ್ತು ಕಾರಿಗೆ ಗೂಡ್ಸ್ ವಾಹನ ಡಿಕ್ಕಿ ಹೊಡೆದು ಬಳಿಕ ಪಲ್ಟಿ ಹೊಡೆದಿದೆ.
ಎರಡು ಕಾರುಗಳು ಸಂಪೂರ್ಣ ನಜ್ಜುಗುಜ್ಜಾಗಿದೆ. ಮಂಜುನಾಥ್ ಸೇರಿದಂತೆ ಮೂವರಿಗೆ ಗಂಭೀರ ಗಾಯವಾಗಿದೆ. ಆಸ್ಪತ್ರೆಗೆ ಸಾಗಿಸುವ ಮಾರ್ಗ ಮದ್ಯೆ ಮಂಜುನಾಥ್ ಕೊನೆಯುಸಿರೆಳೆದಿದ್ದಾರೆ. ಉಳಿದ ಇಬ್ಬರಿಗೆ ನಾರಾಯಣ ಹೆಲ್ತ್ ಸಿಟಿ ಆಸ್ಪತ್ರೆಗೆ ದಾಖಲು ಮಾಡಲಾಗಿದೆ.
ಮರಣೋತ್ತರ ಪರೀಕ್ಷೆ ಬಳಿಕ ಕುಟುಂಬಸ್ಥರಿಗೆ ಮೃತದೇಹವನ್ನು ಹಸ್ತಾಂತರ ಮಾಡಲಾಗಿದೆ. ಎಲೆಕ್ಟ್ರಾನಿಕ್ ಸಿಟಿ ಸಂಚಾರಿ ಪೊಲೀಸ್ ಠಾಣೆಯಲ್ಲಿ ಈ ಸಂಬಂಧ ಪ್ರಕರಣ ದಾಖಲಾಗಿದ್ದು, ತನಿಖೆಯನ್ನು ನಡೆಸಲಾಗುತ್ತಿದೆ.
ಮದುವೆ ಸಿದ್ಧತೆ:
ಇದೇ ತಿಂಗಳ ೧೦ರಂದು ಮಗಳ ಮದುವೆ ಇತ್ತು. ಹೀಗಾಗಿ ಮಂಜುನಾಥ್ ಅವರು ಮದುವೆ ಸಿದ್ಧತೆಗಳನ್ನು ಮಾಡಿಕೊಳ್ಳುತ್ತಿದ್ದರು. ನಿನ್ನೆ ಬೆಳಗ್ಗೆಯೂ ಸಹ ಮದುವೆಯ ಆಮಂತ್ರಣ ಪತ್ರಿಕೆ ಹಂಚಿ ಬಂದಿದ್ದರು.
ರಾತ್ರಿ ಪಾಳಯ ಕೆಲಸಕ್ಕೆ ಹಾಜರಾಗಿದ್ದ ಮಂಜುನಾಥ್ ಅಪಘಾತದಲ್ಲಿ ಮೃತಪಟ್ಟಿದ್ದಾರೆ. ಮಗಳ ಮದುವೆ ಸಂಭ್ರಮದಲ್ಲಿ ಇರಬೇಕಾದ ಮನೆಯಲ್ಲೀಗ ಸೂತಕದ ಛಾಯೆ ಆವರಿಸಿದೆ.