ಮೆಟ್ರೋ ಹಳಿಗೆ ಹಾರಿದ ವ್ಯಕ್ತಿ ರೈಲಿಗೆ ಸಿಕ್ಕಿ ಸಾವು
ಬೆಂಗಳೂರು,ಆ.3-ನಮ್ಮ ಮೆಟ್ರೋ ಹಳಿಗೆ ಹಾರಿ ಚಲಿಸುತ್ತಿದ್ದ ರೈಲಿಗೆ ಸಿಕ್ಕಿ ವ್ಯಕ್ತಿಯೊಬ್ಬರು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಇಂದು ಸಂಜೆ ನಾಗಸಂದ್ರ-ರೇಷ್ಮೆ ಸಂಸ್ಥೆ ಹಸಿರು ಮಾರ್ಗದ ದೊಡ್ಡಕಲ್ಲಸಂದ್ರ ನಿಲ್ದಾಣದಲ್ಲಿ ನಡೆದಿದೆ.
ಕುಮಾರಸ್ವಾಮಿ ಲೇಔಟ್ ನ ನವೀನ್ ಕುಮಾರ್ ಅರೋರಾ(57)ಆತ್ಮಹತ್ಯೆ ಮಾಡಿಕೊಂಡವರು,ಅವರ ಆತ್ಮಹತ್ಯೆಗೆ ಕಾರಣವ ತಿಳಿದುಬಂದಿಲ್ಲ.
ಸಂಜೆ 5.41ರ ಸುಮಾರಿಗೆ ಮೆಟ್ರೋ ರೈಲು ನಿಲ್ದಾಣಕ್ಕೆ ಬರುತ್ತಿದ್ದಂತೆ ಅರೋರಾ ಹಳಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಮೆಟ್ರೋ ರೈಲಿನಡಿಯಲ್ಲೇ ಇದ್ದ ಅರೋರಾ ಮೃತದೇಹವನ್ನು ಹೊರತೆಗೆದು ಸುಗುಮ ಸಂಚಾರಕ್ಕೆ ಅನುವು ಮಾಡಿಕೊಡಲಾಗಿದೆ.
ಘಟನೆ ನಂತರ ಕೆಲಕಾಲ ಮೆಟ್ರೋ ರೈಲು ಸಂಚಾರದಲ್ಲಿ ವ್ಯತ್ಯಯ ಉಂಟಾಗಿತ್ತು ಸ್ಥಳಕ್ಕೆ ಕೋಣನಕುಂಟೆ ಠಾಣೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ಮಾಡಿದ್ದಾರೆ. ಸದ್ಯ ಯಲಚೇನಹಳ್ಳಿ ಟೂ ನಾಗಸಂದ್ರ ಮಾತ್ರ ಮೆಟ್ರೋ ಸಂಚಾರವಿದ್ದು, ದೊಡ್ಡಕಲ್ಲಸಂದ್ರ ಟೂ ಸಿಲ್ಕ್ ಇನ್ಸ್ಟಿಟ್ಯೂಟ್ ಮೆಟ್ರೋ ಸಂಚಾರ ಸ್ಥಗಿತಗೊಳಿಸಿ ನಂತರ ಸಂಚಾರವನ್ನು ಆರಂಭಿಸಲಾಗಿದೆ.
ಅರೋರಾ ಹಳಿಗೆ ಜಂಪ್ ಮಾಡಿದ ಕೆಲ ಸೆಕಂಡ್ನಲ್ಲಿ ವಿದ್ಯುತ್ ಸಂಪರ್ಕ ಸ್ಥಗಿತಗೊಂಡಿದೆ. ಇದರಿಂದ ಮೆಟ್ರೋ ಸಂಚಾರ ಏಕಾಏಕಿ ಸ್ಥಗಿತಗೊಂಡಿದೆ. ಹಾಗಾಗಿ ದೊಡ್ಡಕಲ್ಲಸಂದ್ರ ಮೆಟ್ರೋ ನಿಲ್ದಾಣ ಪಕ್ಕದ ಬ್ರಿಡ್ಜ್ ಮೇಲೆ ಪ್ರಯಾಣಿಕರು ನಡೆದುಕೊಂಡು ಹೋಗಿದ್ದಾರೆ.
ಹಾಗಾಗಿ ಪ್ರಯಾಣಿಕರನ್ನು ಅರ್ಧ ದಾರಿಯಲ್ಲಿಯೇ ಇಳಿಸಿದ್ದಾರೆಯೇ ಎಂಬ ಅನುಮಾನಗಳು ಹುಟ್ಟಿಕೊಂಡಿವೆ.ನಾಗಸಂದ್ರದಿಂದ ಯಲಚೇನಹಳ್ಳಿವರೆಗೆ ಮೆಟ್ರೊ ಸಂಚಾರ ಎಂದಿನಂತೆ ಇದೆ. ಮೃತ ಅರೋರಾ ಬಗ್ಗೆ ಮಾಹಿತಿ ಸಂಗ್ರಹಿಸಲಾಗುತ್ತಿದೆ ಎಂದು ಬಿಎಂಆರ್‌ಸಿಎಲ್ ಅಧಿಕಾರಿಗಳು ತಿಳಿಸಿದ್ದಾರೆ.
ಐದನೇ ಘಟನೆ:
ನಗರದಲ್ಲಿ ಈ ವರ್ಷ ಮೆಟ್ರೊ ಹಳಿಗೆ ಹಾರಿದ ಐದನೇಘಟನೆ ಇದಾಗಿದೆ.ಕಳೆದ ಮಾರ್ಚ್‌ನಲ್ಲಿ ಅತ್ತಿಗುಪ್ಪೆ ಮೆಟ್ರೊ ನಿಲ್ದಾಣದಲ್ಲಿ ಯುವಕನೊಬ್ಬ ಹಾರಿ ಜೀವ ಕಳೆದುಕೊಂಡಿದ್ದು,ಆತ್ಮಹತ್ಯೆ ಪ್ರಕರಣ ದಾಖಲಾಗಿತ್ತು.
ಜನವರಿಯಲ್ಲಿ ಜಾಲಹಳ್ಳಿ ಮೆಟ್ರೊ ನಿಲ್ದಾಣದಲ್ಲಿ ಕೇರಳದ ಯುವಕ ಹಳಿಗೆ ಹಾರಿ ಆತ್ಮಹತ್ಯೆಗೆ ಯತ್ನಿಸಿದ್ದ. ಇಂದಿರಾನಗರ ನಿಲ್ದಾಣದಲ್ಲಿ ಮಹಿಳೆಯೊಬ್ಬರು ಕೆಳಗೆ ಬಿದ್ದ ಮೊಬೈಲ್ ಎತ್ತಿಕೊಳ್ಳಲು ಹಳಿಗೆ ಹಾರಿದ್ದರು. ಜೂನ್‌ನಲ್ಲಿ ಹೊಸಹಳ್ಳಿ ನಿಲ್ದಾಣದಲ್ಲಿ ಯುವಕನೊಬ್ಬ ಆತ್ಮಹತ್ಯೆಗೆ ಯತ್ನಿಸಿದ್ದ.
ಇದಲ್ಲದೇ ಎರಡು ದಿನಗಳ ಹಿಂದೆ ಬೈಯಪ್ಪನಹಳ್ಳಿ ಮೆಟ್ರೊ ನಿಲ್ದಾಣದಲ್ಲಿ ನಾಲ್ಕು ವರ್ಷದ ಬಾಲಕನೊಬ್ಬ ಆಯತಪ್ಪಿ ಹಳಿಗೆ ಬಿದ್ದಿದ್ದು, ಬಿಎಂಆರ್‌ಸಿಎಲ್ ಸಿಬ್ಬಂದಿ ರಕ್ಷಿಸಿದ್ದರು.