ವಯನಾಡಲ್ಲಿ ಮರಣ ಮೃದಂಗ: ಮೃತರ ಸಂಖ್ಯೆ 300
ತಿರುವನಂತಪುರ, ಆ,1- ದೇವರನಾಡು ಕೇರಳದ ವಯನಾಡಿನಲ್ಲಿ ಸರಣಿ ಭೂಕುಸಿತ ರಣ ಭೀಕರತೆಗೆ ಮೃತಪಟ್ಟವರ ಸಂಖ್ಯೆ ತ್ರಿಶತಕ ಬಾರಿಸಿದೆ.
ಅವಶೇಷಗಳಡಿ ಇನ್ನೂ 240 ಮಂದಿ ಸಿಲುಕಿರಬಹುದು ಎಂದು ಅಂದಾಜಿಸಲಾಗಿದೆ. ಅವರ ಪತ್ತೆಗೆ ಪ್ರತಿಕೂಲ ಹವಾಮಾನದ ನಡುವೆಯೂ ಸೇನೆ ಮತ್ತು ಎನ್‌ಡಿಆರ್‌ಎಫ್ ಜೀವದ ಹಂಗು ತೊರೆದು ಅವಿರತವಾಗಿ ಶ್ರಮಿಸುತ್ತಿವೆ.
10ಕ್ಕೂ ಹೆಚ್ಚು ಜೆಸಿಬಿ ಬಳಸಿ ಕೆಸರು ಮಣ್ಣು, ಕಲ್ಲುಗಳನ್ನು ತೆರವು ಮಾಡಲಾಗುತ್ತಿದೆ. ಶ್ವಾನಗಳನ್ನುಬಳಸಿ ಶೋಧ ಕಾರ್ಯ ನಡೆಯುತ್ತಿದೆ.
ಜೆಸಿಬಿಯನ್ನು ನದಿಗೂ ಇಳಿಸಲಾಗಿದೆ. ಚಲಿಯಾರ್ ನದಿ ಪ್ರತಾಪ ಸ್ವಲ್ಪಮಟ್ಟಿಗೆ ಕಡಿಮೆ ಆಗಿದ್ದು ಮಂಗಳವಾರ ನಿರ್ಮಿಸಿದ್ದ ತಾತ್ಕಾಲಿಕ ಸೇತುವೆ ಮತ್ತೆ ಮರು‌‌‌ ನಿರ್ಮಾಣ ಮಾಡಿ ಸೇವೆಗೆ ಬಳಸಿಕೊಳ್ಳಲಾಗುತ್ತಿದೆ.
ರಕ್ಷಣಾ ತಂಡಗಳು ರಾತ್ರೋರಾತ್ರಿ ನದಿಗೆ ಅಡ್ಡಲಾಗಿ 2 ಕಬ್ಬಿಣದ ಸೇತುವೆಗಳನ್ನು ತಾತ್ಕಾಲಿಕವಾಗಿ ನಿರ್ಮಿಸಿದೆ. ಇದನ್ನು ಬಳಸಿ ಜನರನ್ನುಸುರಕ್ಷಿತ ಸ್ಥಳಗಳಿಗೆ ಸ್ಥಳಾಂತರ ಮಾಡಲಾಗುತ್ತಿದೆ. ಈ ಕಾರ್ಯಾಚರಣೆ ಸದ್ಯಕ್ಕೆ ಮುಗಿಯುವುದು ಅನುಮಾನವಾಗಿದೆ. ಕನಿಷ್ಠ 15 ದಿನ ಈ ಕಾರ್ಯಾಚರಣೆ ನಡೆಯಬಹುದು ಎಂದು ಹೇಳಲಾಗುತ್ತಿದೆ.
ದುರಂತ ನಡೆದ ಸ್ಥಳಕ್ಕೆ ಸಿಎಂ ಪಿಣರಾಯ್ ವಿಜಯನ್ , ವಿಪಕ್ಷ ನಾಯಕ ರಾಹುಲ್ ಗಾಂಧಿ , ಪ್ರಿಯಾಂಕಾ ಗಾಂಧಿ ಭೇಟಿ ನೀಡಿ ಪರಿಶೀಲಿಸಿದರು. ಆಸ್ಪತ್ರೆಯಲ್ಲಿರುವ ಗಾಯಾಳುಗಳ ಆರೋಗ್ಯ ವಿಚಾರಿಸಿದರು.
ಆಸ್ಪತ್ರೆಗಳಲ್ಲಿ ನೂರಾರು ಶವಗಳಿದ್ದು, ಸಂಬಂಧಿಕರು ಕಣ್ಣೀರಿಡುತ್ತಲೇ ತಮ್ಮವರ ಶವಗಳಿಗಾಗಿ ಹುಡುಕಾಟ ನಡೆಸಿದ್ದಾರೆ. ಒಬ್ಬಾಕೆಯಂತೂ ತಮ್ಮವರ ಶವ ನೋಡಿ ಕುಸಿದುಬಿದ್ದಿದ್ದಾರೆ ನೂರಾರು ಸಾವುಗಳು ಉಂಟಾಗಿರುವ ಹಿನ್ನೆಲೆಯಲ್ಲಿ ಹೆಚ್1ಎನ್1 ಸೇರಿ ಸಾಂಕ್ರಾಮಿಕ ರೋಗ ಭೀತಿ ಆವರಿಸಿದೆ. ಮಾಸ್ಕ್ ಕಡ್ಡಾಯಗೊಳಿಸಿದೆ.