ಮನುಗೆ ಕೈತಪ್ಪಿದ ಹ್ಯಾಟ್ರಿಕ್ ಪದಕ
ಪ್ಯಾರಿಸ್.ಆ.೩- ಶೂಟರ್ ಮನು ಭಾಕರ್ ಮಹಿಳೆಯರ ೨೫ಮೀ. ಪಿಸ್ತೂಲ್ ವಿಭಾಗದ ಫೈನಲ್‌ನಲ್ಲಿ ನಾಲ್ಕನೆ ಸ್ಥಾನ ಪಡೆದು ಮೂರನೆ ಪದಕದ ಕನಸು ಭಗ್ನಗೊಂಡಿದೆ.
೨ ಕಂಚಿನ ಪದಕಗಳೊಂದಿಗೆ ಮನು ತವರಿಗೆ ಮರಳಲಿದ್ದಾರೆ.
೨೫ ಮೀ. ಪಿಸ್ತೂಲ್ ವಿಭಾಗದ ಅಂತಿಮ ಹಣಾಹಣಿಯಲ್ಲಿ ಮನು ಭಾಕರ್‌ಗೆ ಹಂಗೇರಿಯ ಮೇಜರ್ ವೆರೋನಿಕಾ ಕಠಿಣ ಪೈಪೋಟಿ ನೀಡಿದರು. ಹರ್ಯಾಣದ ಶೂಟರ್
ಮನು ಮೊದಲ ಸುತ್ತಿನಲ್ಲಿ ೨ ಅಂಕ ಪಡೆದು ೬ನೇ ಸ್ಥಾನ ಪಡೆದರು. ೨ನೇ ಸುತ್ತಿನಲ್ಲಿ ಸುಧಾರಿತ ಪ್ರದರ್ಶನ ನೀಡಿ ನಾಲ್ಕನೆ ಸ್ಥಾನ ಪಡೆದರು.
ನಾಲ್ಕು ಸರಣಿಗಳ ನಂತರ ಮನು ಮತ್ತೆ ೬ನೇ ಸ್ಥಾನಕ್ಕೆ ಕುಸಿದರು. ಐದನೆ ಸರಣಿಯಲ್ಲಿ ೩ನೇ ಸ್ಥಾನಕ್ಕೆ ಜಿಗಿದರು. ೬ನೇ ಸುತ್ತಿನಲ್ಲಿ ಮನು ೨೨ ಅಂಕಗಳನ್ನು ಪಡೆದು ಎರಡನೆ ಸ್ಥಾನಕ್ಕೇರಿದರು. ೭ನೇ ಸುತ್ತಿನಲ್ಲಿ ಉತ್ತಮ ಪ್ರದರ್ಶನ ಮುಂದುವರೆಸಿ ೨ನೇ ಸ್ಥಾನದಲ್ಲಿ ಉಳಿದರು. ಕೊನೆಯಲ್ಲಿ ನಾಲ್ಕು ಅಥ್ಲಿಟ್‌ಗಳು ಉಳಿದರು. ಮನು ಭಾಕರ್ ಮತ್ತು ವೆರೊನಿಕಾ ತಲಾ ೨೮ ಅಂಕಗಳ ಸಮಬಲ ಸಾಧಿಸಿದರು. ಐದು ಶಾಟ್‌ಗಳಲ್ಲಿ ಮನು ಎರಡು ಬಾರಿ ಗುರಿ ತಪ್ಪಿದರೆ ವೆರೊನಿಕಾ ಒಂದು ಬಾರಿ ಮಾತ್ರ ಗುರಿ ತಪ್ಪಿತು.
ಹಂಗೇರಿಯ ವೆರೊನಿಕಾ ಮೇಜರ್ ಅವರಿಗಿಂತ ಮನು ಒಂದು ಅಂಕದ ಹಿನ್ನಡೆ ಅನುಭವಿಸಿದ್ದರಿಂದ ನಾಲ್ಕನೆ ಸ್ಥಾನಕ್ಕೆ ತೃಪ್ತಿಪಡಬೇಕಾಯಿತು.
ದಕ್ಷಿಣ ಕೊರಿಯಾದ ಯಾನ್ ಜಿನ್ ಚಿನ್ನ ಗೆದ್ದರು. ಫ್ರಾನ್ಸ್‌ನ ಕಾಮಿಲೀ ಜೆಡ್ರೆಜೆವ್ಸಿ ಬೆಳ್ಳಿ ಪದಕ ಪಡೆದರು.