ಗ್ರಾಮಸಭೆಗೆ ಅಧಿಕಾರಿಗಳ ಗೈರು: ಎಸ್‌ಆರ್‌ವಿ ಬೇಸರ
ಬೆಂಗಳೂರು,ಆ.೩:ಗ್ರಾಮಸಭೆಗೆ ಗೈರು ಹಾಜರಾದ ತಹಶೀಲ್ದಾರ್ ಮತ್ತು ತಾಲ್ಲೂಕು ಪಂಚಾಯಿತಿ ಕಾರ್ಯನಿರ್ವಾಹಕ ಅಧಿಕಾರಿಗಳ ವಿರುದ್ಧ ಶಾಸಕ ಎಸ್.ಆರ್. ವಿಶ್ವನಾಥ್ ಬೇಸರ ವ್ಯಕ್ತಪಡಿಸಿದ ಘಟನೆ ರಾಜಾನುಕುಂಟೆ ಗ್ರಾಮಪಂಚಾಯಿತಿಯ ಗ್ರಾಮಸಭೆಯಲ್ಲಿ ನಡೆದಿದೆ.
ರಾಜಾನುಕುಂಟೆ ಗ್ರಾಮಪಂಚಾಯಿತಿ ವತಿಯಿಂದ ಸರ್ಕಾರಿ ಶಾಲಾ ಆವರಣದಲ್ಲಿ ಏರ್ಪಡಿಸಿದ್ದ ೨೦೨೪-೨೫ನೇ ಸಾಲಿನ ಮೊದಲಸುತ್ತಿನ ಗ್ರಾಮಸಭೆಯನ್ನು ಉದ್ಘಾಟಿಸಿ ಮಾತನಾಡಿದ ಅವರು, ಕಂದಾಯ ಇಲಾಖೆಯು ಎಲ್ಲ ಇಲಾಖೆಗಳಿಗೆ ಮಾತೃ ಇಲಾಖೆ ಇದ್ದಂತೆ, ಇಲ್ಲಿ ಸಾರ್ವಜನಿಕರು ಮತ್ತು ರೈತರಿಗೆ ಸಂ ಬಂಧಿಸಿದ ಹಲವು ಸಮಸ್ಯೆಗಳಿರುತ್ತವೆ. ಅವುಗಳಿಗೆ ಸೂಕ್ತಪರಿಹಾರ ಕಂಡುಕೊಳ್ಳಲು ಕಂದಾಯ ಇಲಾಖೆಯ ಅಧಿಕಾರಿಗಳ ಹಾಜರಾತಿ ಅತ್ಯಗತ್ಯ ಎಂದರು.
ಹಿರಿಯ ಅಧಿಕಾರಿಗಳು ಕುಂಟುನೆಪಗಳನ್ನು ಹೇಳಿ ಗ್ರಾಮಸಭೆಗಳಿಗೆ ಗೈರುಹಾಜರಾಗುವ ಮೂಲಕ ನೆಪಮಾತ್ರಕ್ಕೆ ತಮ್ಮ ಸಿಬ್ಬಂದಿಯನ್ನು ಪ್ರತಿನಿಧಿಗಳನ್ನಾಗಿ ಕಳುಹಿಸಿ ನಿರ್ಲಕ್ಷ್ಯ ತೋರುತ್ತಿದ್ದಾರೆ ಎಂದು ಅಸಮಧಾನ ಹೊರಹಾಕಿದ ಅವರು, ಇದರಿಂದ ಗ್ರಾಮೀಣ ಜನರ ಹಾಗೂ ರೈತರ ಸಮಸ್ಯೆಗಳು ಬಗೆಹರಿಯುವುದಾದರೂ ಹೇಗೆ ಎಂದು ಪ್ರಶ್ನಿಸಿದರು.ಸವಲತ್ತುಗಳ ವಿತರಣೆ:ಕಾರ್ಯಕ್ರಮದಲ್ಲಿ ಫಲಾನುಭವಿಗಳಿಗೆ ೯೪ಸಿಸಿ ಅಡಿಯಲ್ಲಿ ಹಕ್ಕುಪತ್ರ, ಅಂಗವಿಕಲರಿಗೆ ಸಹಾಯಧನದ ಚೆಕ್, ಸರ್ಕಾರಿ ಶಾಲಾ ಮಕ್ಕಳಿಗೆ ನೋಟ್‌ಪುಸ್ತಕ ಮತ್ತು ಕ್ರೀಡಾಸಾಮಗ್ರಿಗಳ ಕಿಟ್, ಎಸ್.ಎಸ್.ಎಲ್‌ಸಿ ಮತ್ತು ಪಿಯುಸಿ ಪರೀಕ್ಷೆಯಲ್ಲಿ ಅತ್ಯುತ್ತಮ ಅಂಕಗಳಿಸಿದ ವಿದ್ಯಾರ್ಥಿಗಳಿಗೆ ಪ್ರೋತ್ಸಾಹ ಧನದ ಚೆಕ್, ಅಂಗನವಾಡಿ ಮಕ್ಕಳಿಗೆ ಸಮವಸ್ತ್ರ, ಪೌಷ್ಠಿಕ ಆಹಾರದ ಕಿಟ್ ಸೇರಿ ಮಹಿಳೆಯರಿಗೆ ಸರ್ಕಾರದ ವಿವಿಧ ಸವಲತ್ತುಗಳ ಸಹಾಯಧನದ ಚೆಕ್ ಮತ್ತಿತರ ಸೌಲಭ್ಯಗಳನ್ನು ವಿತರಿಸಲಾಯಿತು.
ಇದಕ್ಕೂ ಮುನ್ನ ಶಾಸಕ ವಿಶ್ವನಾಥ್, ರಾಜಾನುಕುಂಟೆ ಗ್ರಾಮದಲ್ಲಿ ರೂ.೮೦ ಲಕ್ಷ ವೆಚ್ಚದಲ್ಲಿ ಕಾಂಕ್ರೀಟ್ ರಸ್ತೆ ಅಭಿವೃದ್ಧಿ ಕಾಮಗಾರಿಗೆ ಗುದ್ದಲಿಪೂಜೆ ನೆರವೇ ರಿಸಿದರು.
ನೂತನ ಬಸ್ ನಿಲ್ದಾಣ ಮತ್ತು ಸರ್ಕಾರಿ ಶಾಲೆಯಲ್ಲಿ ವಿವೇಕ ಯೋಜನೆಯಡಿ ನಿರ್ಮಿಸಿರುವ ೪ ನೂತನ ಕೊಠಡಿಗಳನ್ನು ಉದ್ಘಾಟಿಸಿದರು. ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ (ಎಲ್.ಕೆಜಿ)ಆಂಗ್ಲಮಾಧ್ಯಮ ತರಗತಿಗೆ ಚಾಲನೆ ನೀಡಿದರು.ಗ್ರಾಮಪಂಚಾಯಿತಿ ಅಧ್ಯಕ್ಷೆ ಚನ್ನಮ್ಮ ಪಟಾಲಪ್ಪ, ಉಪಾಧ್ಯಕ್ಷ ವೆಂಕಟೇಶ್, ಮಾಜಿ ಅಧ್ಯಕ್ಷರಾದ ಎಸ್.ಜಿ.ನರಸಿಂಹಮೂರ್ತಿ, ಅಂಬಿಕಾ ರಾಜೇಂದ್ರಕುಮಾರ್, ಕೆ.ವೀರಣ್ಣ, ಪಿಡಿಒ ನಾಗರಾಜ್, ಕಾರ್ಯದರ್ಶಿ ರಾಕೇಶ್, ಬಿಜೆಪಿ ಮುಖಂಡರಾದ ಚೊಕ್ಕನಹಳ್ಳಿ ವೆಂಕಟೇಶ್, ಅದ್ದೆ ವಿಶ್ವನಾಥಪುರ ಮಂಜುನಾಥ್, ಎಂ. ಮೋಹನ್ ಕುಮಾರ್ ಮತ್ತಿತರರು ಉಪಸ್ಥಿತರಿದ್ದರು.
ಗ್ರಾಮಸಭೆಗೆ ಗೈರು ಹಾಜರಾದ ಅಧಿಕಾರಿಗಳ ವಿರುದ್ಧ ಶಾಸಕ ವಿಶ್ವನಾಥ್ ಅಸಮಧಾನ ರಾಜಾನುಕುಂಟೆ ಗ್ರಾಮಪಂಚಾಯಿತಿ ವತಿಯಿಂದ ಆಯೋಜಿಸಿದ್ದ ಗ್ರಾಮಸಭೆಯನ್ನು ಶಾಸಕ ಎಸ್.ಆರ್.ವಿಶ್ವನಾಥ್ ಉದ್ಘಾಟಿಸಿದರು. ಗ್ರಾಮಪಂಚಾಯಿತಿ ಅಧ್ಯಕ್ಷೆ ಚನ್ನಮ್ಮ ಪಟಾಲಪ್ಪ, ಉಪಾಧ್ಯಕ್ಷ ವೆಂಕಟೇಶ್, ಮಾಜಿ ಅಧ್ಯಕ್ಷರಾದ ಎಸ್.ಜಿ.ನರಸಿಂಹಮೂರ್ತಿ, ಅಂಬಿಕಾ ರಾಜೇಂದ್ರಕುಮಾರ್, ಕೆ.ವೀರಣ್ಣ ಇತರರು ಇದ್ದರು.