ಮಳೆ ನೀರು ಎರಚಿ ಪುಂಡಾಟಿಕೆ ನಾಲ್ವರ ಬಂಧನ
ಲಕ್ನೋ,ಅ.೧-ಉತ್ತರ ಪ್ರದೇಶದ ಲಕ್ನೋದಲ್ಲಿ ಜಲಾವೃತಗೊಂಡ ರಸ್ತೆಯಲ್ಲಿ ಬೈಕ್‌ನಲ್ಲಿ ಹೋಗುತ್ತಿದ್ದ ಇಬ್ಬರಿಗೆ ಪುಂಡರ ಗುಂಪು ಮಳೆಯ ನೀರನ್ನು ಎರಚಿ ಕಿರುಕುಳ ನೀಡಿದೆ .ಇದರ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ, ಘಟನೆ ವಿರುದ್ಧ ನೆಟ್ಟಿಗರು ಕಿಡಿಕಾರಿದ್ದಾರೆ.
ಲಕ್ನೋದ ಗೋಮತಿ ನಗರ ಪ್ರದೇಶದಲ್ಲಿ ರಸ್ತೆಯಲ್ಲಿ ಬೈಕ್ ಚಲಾಯಿಸುತ್ತಿದ್ದ ಯುವಕ ಮತ್ತು ಯುವತಿಯೊಂದಿಗೆ ಅನುಚಿತವಾಗಿ ವರ್ತಿಸಿದ ಪುಂಡ ಪೋಕರಿಗಳ ವಿರುದ್ಧ ಪೊಲೀಸರು ಎಫ್‌ಐಆರ್‌ನಲ್ಲಿ ದೌರ್ಜನ್ಯದ ಕೇಸ್ ದಾಖಲಿಸಿದ್ದಾರೆ . ಇದಲ್ಲದೇ ಈ ಪ್ರಕರಣದಲ್ಲಿ ನಾಲ್ವರು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ.ಉಳಿದ ಆರೋಪಿಗಳ ಪತ್ತೆಗೆ ಪೊಲೀಸರು ಮೂವರು ಸದಸ್ಯರ ತಂಡವನ್ನು ರಚಿಸಿದ್ದಾರೆ.
ವರದಿಯ ಪ್ರಕಾರ ಅಂಬೇಡ್ಕರ್ ನಗರ ಉದ್ಯಾನವನದ ಮುಂಭಾಗದ ರಸ್ತೆಗಳಲ್ಲಿ ಮಳೆಯಿಂದಾಗಿ ಜಲಾವೃತವಾಗಿದೆ. ಇಲ್ಲಿ ಅನೇಕ ಯುವಕರು ಬಂದು ಹೋಗುವ ವಾಹನಗಳಲ್ಲಿ ಸಂಚರಿಸುವವರಿಗೆ ಕಿರುಕುಳ ನೀಡುತ್ತಿದ್ದರು. ಬೈಕ್‌ನಲ್ಲಿ ಜಲಾವೃತವಾದ ರಸ್ತೆಯನ್ನು ಯುವಕನೊಬ್ಬ ತನ್ನ ಸ್ನೇಹಿತೆಯೊಂದಿಗೆ ದಾಟುತ್ತಿದ್ದ ವೇಳೆ ಅಲ್ಲಿದ್ದ ಪುಂಡರು ಕೊಳಕು ಮಳೆ ನೀರನ್ನು ಅವರ ಮೇಲೆ ಎರಚಿದ್ದಾರೆ. ಅಲ್ಲದೆ ಬೈಕ್ ಮುಂದೆ ಹೋಗದಂತೆ ತಡೆದು ಬೈಕ್ ಹಿಂದಕ್ಕೆ ಎಳೆದಿದ್ದಾರೆ.ಈ ಸಂದರ್ಭದಲ್ಲಿ ಬೈಕ್ ನಿಯಂತ್ರಣ ತಪ್ಪಿದೆ, ಹಿಂಬದಿ ಕುಳಿತಿದ್ದ ಮಹಿಳೆ ಜಲಾವೃತವಾದ ರಸ್ತೆಯಲ್ಲಿ ಬಿದ್ದಿದ್ದಾರೆ. ಪುಂಡಾಟದಲ್ಲಿ ತೊಡಗಿದ್ದ ವ್ಯಕ್ತಿಯೊಬ್ಬ ನೆಲಕ್ಕೆ ಬಿದ್ದ ಮಹಿಳೆಯನ್ನು ಮೇಲಕ್ಕೆ ಎತ್ತಲು ಸಹಾಯ ಮಾಡಿದ್ದಾನೆ.
ಘಟನೆಯ ನಂತರ ಸೇತುವೆ ಕೆಳಗೆ ಪುಂಡಾಟ ನಡೆಸುತ್ತಿರುವ ಗುಂಪನ್ನು ಚದುರಿಸಲು ಪೊಲೀಸರು ಮಧ್ಯ ಪ್ರವೇಶಿಸಿದ್ದಾರೆ. ಇದೀಗ ಪೊಲೀಸರು ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಇದುವರೆಗೆ ನಾಲ್ವರು ಆರೋಪಿಗಳನ್ನು ಬಂಧಿಸಿದ್ದಾರೆ.