ಕಮಲಾ ಭಾರತೀಯರೋ, ಕಪ್ಪು ವರ್ಣಿಯರೋ
ಚಿಕಾಗೋ,ಆ.೧- ಡೆಮಾಕ್ರಟಿಕ್ ಪಕ್ಷದ ಅಧ್ಯಕ್ಷೀಯ ಅಭ್ಯರ್ಥಿ ಕಮಲಾ ಹ್ಯಾರಿಸ್ ಭಾರತೀಯರೋ ಅಥವಾ ಕಪ್ಪು ವರ್ಣಿಯರೋ ಎನ್ನುವುದನ್ನು ಅಮೆರಿಕಾದ ಜನರ ಎದುರು ಸ್ಪಷ್ಟಪಡಿಸಲಿ ಎಂದು ರಿಪಬ್ಲಿಕನ್ ಪಕ್ಷದ ಅಧ್ಯಕ್ಷೀಯ ಅಭ್ಯರ್ಥಿ ಡೋನಾಲ್ಡ್ ಟ್ರಂಪ್ ಆಗ್ರಹಿಸಿದ್ದಾರೆ.
ಕಮಲಾ ಹ್ಯಾರಿಸ್ ಸದಾ ಭಾರತೀಯ ಪರಂಪರೆ ಹೊಂದಿದ್ದಾರೆ. ಆಕೆ ಯಾವಾಗಲೂ ಭಾರತೀಯತೆ ಮತ್ತು ಅಲ್ಲಿನ ಪರಂಪರೆ ಪ್ರಚಾರ ಮಾಡುತ್ತಿದ್ದರು. ಕಳೆದ ಬಾರಿ ಉಪಾಧ್ಯಕ್ಷ ಸ್ಥಾನಕ್ಕೆ ಸ್ಪರ್ಧಿಸಿದ್ದ ವೇಳೆ ಕಪ್ಪು ವರ್ಣೀಯರು ಎಂದು ತಮ್ಮನ್ನು ಗುರುತಿಸಿಕೊಂಡಿದ್ದಾರೆ. ಹೀಗಾಗಿ ಅವರು ಭಾರತೀಯರೋ ಇಲ್ಲವೆ ಕಪ್ಪು ವರ್ಣಿಯರೋ ಎನ್ನುವುದನ್ನು ಸ್ಪಷ್ಟಪಡಿಸಲಿ ಎಂದು ಒತ್ತಾಯಿಸಿದ್ದಾರೆ.
ಅಮೆರಿಕಾ ಅಧ್ಯಕ್ಷೀಯ ಚುನಾವಣೆಗೆ ನವಂಬರ್ ೫ ರಂದು ಮತದಾನ ನಿಗದಿಯಾಗಿರುವ ಸಮೀಪದಲ್ಲಿ ಅಧ್ಯಕ್ಷ ಸ್ಥಾನ ತಮ್ಮದಾಗಿಸಿಕೊಳ್ಳಲು ವಯಕ್ತಿಕ ದಾಳಿ ನಿಂದನೆ ನಡೆಯುತ್ತಿವೆ.
ಅಮೆರಿಕಾದ ಅತಿದೊಡ್ಡ ಕಪ್ಪು ವರ್ಣೀಯ ಪತ್ರಕರ್ತರ ವಾರ್ಷಿಕ ಸಭೆಯಲ್ಲಿ ಪಾಲ್ಗೊಂಡು ಮಾತನಾಡಿದ ಅವರು ಕಮಲಾ ಹ್ಯಾರೀಸ್ ಮೊದಲು ತಾವು ಏನು ಎನ್ನುವ ಗುರುತು ಬಹಿರಂಗ ಮಾಡಬೇಕು ಎಂದು ಟ್ರಂಪ್ ಆಗ್ರಹಿಸಿದ್ದಾರೆ.
ಉಪಾಧ್ಯಕ್ಷ ಚುನಾವಣೆಗೆ ಕಳೆದ ಬಾರಿ ಸ್ಪರ್ಧೆ ಮಾಡುವ ತನಕ ಭಾರತೀಯಳಾಗಿದ್ದರು. ಚುನಾವಣೆಗೆ ಸ್ಪರ್ಧೆ ಮಾಡುತ್ತಿದ್ದಂತೆ ಜನರ ಮನ ಗೆಲ್ಲಲು ಕಪ್ಪು ವರ್ಣೀಯರು ಎಂದು ಹೇಳಿಕೊಂಡರು. ಆಕೆ ಭಾರತೀಯರೋ ಇಲ್ಲ ಕಪ್ಪು ವರ್ಣೀಯರೋ ಎನ್ನುವುದನ್ನು ಜನತೆ ಮುಂದೆ ಹೇಳಲಿ ಎಂದಿದ್ದಾರೆ.
ಭಾರತೀಯ ಮತ್ತು ಜಮೈಕಾದ ಪರಂಪರೆ ಹೊಂದಿರುವ ಕಮಲಾ ಹ್ಯಾರಿಸ್, ಕಪ್ಪು ಮತ್ತು ಏಷ್ಯನ್ ಎಂದು ಗುರುತಿಸಿಕೊಂಡಿದ್ದಾರೆ. ಅಮೇರಿಕಾ ಉಪಾಧ್ಯಕ್ಷರಾಗಿ ಆಯ್ಕೆಯಾಗುವ ಮುನ್ನ ಮೊದಲ ಕಪ್ಪು ವ್ಯಕ್ತಿ ಮತ್ತು ಏಷ್ಯನ್ ಅಮೆರಿಕನ್ ವ್ಯಕ್ತಿ ಎಂದು ಕರೆದುಕೊಂಡಿದ್ದಾರೆ ಎಂದು ತಿಳಿಸಿದ್ದಾರೆ.
ತಿರುಗೇಟು ನೀಡಿದ ಕಮಲಾ
ರಿಪಬ್ಲಿಕನ್ ಪಕ್ಷದ ಅಧ್ಯಕ್ಷೀಯ ಅಭ್ಯರ್ಥಿ ಡೊನಾಲ್ಡ್ ಟ್ರಂಪ್ ಮಾಡಿರುವ ಆರೋಪಕ್ಕೆ ಡೆಮಾಕ್ರಟಿಕ್ ಪಕ್ಷ ಅಧ್ಯಕ್ಷೀಯ ಅಭ್ಯರ್ಥಿ ಕಮಲಾ ಹ್ಯಾರೀಸ್ ತಿರುಗೇಟು ನೀಡಿದ್ದಾರೆ.
ಡೋನಾಲ್ಡ್ ಟ್ರಂಪ್ ಅವರು ಅಧ್ಯಕ್ಷ ಅವಧಿಯಲ್ಲಿ ಅಮೇರಿಕಾದಲ್ಲಿ ಏನಾಗಿದೆ ಎನ್ನುವುದು ಜನರಿಗೆ ಗೊತ್ತಿದೆ. ಅವರು ಚುನಾವಣೆಯಲ್ಲಿ ಗೆಲ್ಲಲು ಏನು ಬೇಕಾದರೂ ಮಾಡಲು ಸಿದ್ದರಿದ್ದಾರೆ ಎಂದು ಹೇಳಿದ್ದಾರೆ.