ವಯನಾಡು ಭೂಕುಸಿತ: ಮೃತರ ಸಂಖ್ಯೆ 252: ಕುಸಿದು ಬಿದ್ದ ತಾತ್ಕಾಲಿಕ ಸೇತುವೆ
ತಿರುವನಂತಪುರ,ಜು.31- ದೇವರನಾಡು ಕೇರಳದ ವಯನಾಡು ಜಿಲ್ಲೆಯಲ್ಲಿ ಸಂಭವಿಸಿದ ಭಯಾನಕ ಸರಣಿ ಭೂಕುಸಿತದಲ್ಲಿ ಮೃತರ‌ ಸಂಖ್ಯೆ 252ಕ್ಕೆ ಏರಿಕೆಯಾಗಿದೆ.
ಪರಿಹಾರ ಕಾರ್ಯಾಚರಣೆ ನಿರಂತರವಾಗಿ ಮುಂದುವರೆದಿದ್ದು, ಪರಿಹಾರ ಕಾರ್ಯಾಚರಣೆಗೆ ನಿರ್ಮಿಸಲಾಗಿದ್ದ ತಾತ್ಕಾಲಿಕ ಸೇತುವೆ ಕುಸಿದು ಬಿದ್ದಿದೆ.
ಸೇನಾಪಡೆಗಳು ನಿರಂತರ ಕಾರ್ಯಾಚರಣೆ ಮುಂದುವರಿಸಿದ್ದು, ಕ್ಷಣಕ್ಣಕ್ಕೂ ಮೃತರ ಸಂಖ್ಯೆ ಹೆಚ್ಚಾಗುತ್ತಿದ್ದು, ತೀವ್ರ ಅತಂಕಕ್ಕೆ ಕಾರಣವಾಗಿದೆ.
ಇದುವರೆಗೆ 160 ಶವಗಳನ್ನು ಅವಶೇಷಗಳಿಂದ ಹೊರತೆಗೆಯಲಾಗಿದ್ದು, ಈಗಲೂ ಕಾರ್ಯಾಚರಣೆ ಮುಂದುವರಿದಿದೆ. ಅಷ್ಟೇ ಅಲ್ಲ, 220 ಜನ ಇನ್ನೂ ನಾಪತ್ತೆಯಾಗಿರುವ ಕಾರಣ, ಅವರು ನಾಪತ್ತೆಯಾಗಿ ಈಗಾಗಲೇ 48 ಗಂಟೆಯಾಗಿರುವ ಕಾರಣ ಸಾವಿನ ಸಂಖ್ಯೆ ಹೆಚ್ಚಾಗುವ ಭೀತಿ ಎದುರಾಗಿದೆ.
ಕಲ್ಲು, ಮಣ್ಣು ಸೇರಿ ಹಲವು ಅವಶೇಷಗಳ ಅಡಿಯಲ್ಲಿ ಸಿಲುಕಿರುವ ಶವಗಳನ್ನು ಎನ್‌ಡಿಆರ್‌ಎಫ್‌ ಹಾಗೂ ಎಸ್‌ಡಿಆರ್‌ಎಫ್‌ ಸಿಬ್ಬಂದಿಯು ನಿರಂತರ ಕಾರ್ಯಾಚರಣೆ ಮೂಲಕ ಹೊರತೆಗೆಯುತ್ತಿದ್ದಾರೆ. ಮೆಪ್ಪಾಡಿ ಕೌಟುಂಬಿಕ ಆರೋಗ್ಯ ಕೇಂದ್ರ ಹಾಗೂ ನಿಲಂಬುರ್‌ ಸರ್ಕಾರಿ ಆಸ್ಪತ್ರೆಯಲ್ಲಿ ಶವಗಳ ರಾಶಿಯೇ ಬಿದ್ದದ್ದು, ಅವರ ಕುಟುಂಬಸ್ಥರು ಶವಗಳನ್ನು ಪತ್ತೆಹಚ್ಚಲು ಕೂಡ ಹೆಣಗಾಡುವಂತಾಗಿದೆ.
ಶವ ಪತ್ತೆಹಚ್ಚುವ ಕುಟುಂಬಸ್ಥರ ಆಕ್ರಂದನವು ಮುಗಿಲು ಮುಟ್ಟಿದೆ. ಮೆಪ್ಪಾಡಿ ಆರೋಗ್ಯ ಕೇಂದ್ರ ಹಾಗೂ ನಿಲಂಬುರ್‌ ಆಸ್ಪತ್ರೆಯಲ್ಲಿ ಈಗ ಎಲ್ಲೆಂದರಲ್ಲಿ ಶವಗಳೇ ಕಾಣುತ್ತಿವೆ.
ಎನ್‌ಡಿಆರ್‌ಎಫ್‌, ಎಸ್‌ಡಿಆರ್‌ಎಫ್‌ ಜತೆಗೆ ಭಾರತೀಯ ಸೇನೆಯ ಯೋಧರು, ರಾಜ್ಯ ಪೊಲೀಸರು ಕೂಡ ರಕ್ಷಣಾ ಕಾರ್ಯಾಚರಣೆಯಲ್ಲಿ ನಿರತರಾಗಿದ್ದಾರೆ. ಭೂಕುಸಿತ ಪೀಡಿತ ಪ್ರದೇಶಗಳಿಂದ ಸೈನಿಕರು ಸುಮಾರು 5,500 ಜನರನ್ನು ಸುರಕ್ಷಿತ ಸ್ಥಳಕ್ಕೆ ಸ್ಥಳಾಂತರ ಮಾಡಿದ್ದಾರೆ. ಎನ್‌ಡಿಆರ್‌ಎಫ್‌, ಎಸ್‌ಡಿಆರ್‌ಎಫ್‌, ಸೇನೆ, ಪೊಲೀಸರು, ಅರಣ್ಯ ಇಲಾಖೆ ಅಧಿಕಾರಿಗಳು ಹಾಗೂ ಸ್ವಯಂ ಸೇವಕರು ಸೇರಿ ಒಟ್ಟು 600 ಮಂದಿಯು ರಕ್ಷಣಾ ಕಾರ್ಯಾಚರಣೆಯಲ್ಲಿ ತೊಡಗಿದ್ದಾರೆ.