ಒಲಿಂಪಿಕ್ಸ್ ಕ್ರೀಡಾಕೂಟ: ಬಾಕ್ಸಿಂಗ್ ನಲ್ಲಿ ಲವ್ಲೀನಾ ಕ್ವಾರ್ಟರ್ ಫೈನಲ್ ಗೆ ಲಗ್ಗೆ
ಪ್ಯಾರಿಸ್: ಪ್ಯಾರಿಸ್ ನಲ್ಲಿ ನಡೆದಿರುವ ಒಲಿಂಪಿಕ್ಸ್ ಕ್ರೀಡಾಕೂಟದಲ್ಲಿ ಭಾರತದ ಮಹಿಳಾ ಬಾಕ್ಸರ್ ಲವ್ಲಿನಾ ಕ್ವಾರ್ಟರ್ ಫೈನಲ್ ಪ್ರವೇಶಿಸುವ ಮೂಲಕ ಪದಕಗಳಿಸುವ ವಿಶ್ವಾಸ ಮೂಡಿಸಿದ್ದಾರೆ.
ಇಂದು ನಡೆದ 75 ಕೆ.ಜಿ. ವಿಭಾಗದ 16ರ ಸುತ್ತಿನ ಬಾಕ್ಸಿಂಗ್ ಹೋರಾಟದಲ್ಲಿ ನಾರ್ವೆಯ ಸನ್ನಿವಾ ಹೊಫ್‌ಸ್ತಾಡ್‌ ಅವರನ್ನು 5-0 ಅಂತರದಿಂದ ಮಣಿಸಿ ಕ್ವಾರ್ಟರ್ ಫೈನಲ್ ಗೆ ಲಗ್ಗೆ ಹಾಕಿದ್ದಾರೆ.
ಏಕಮುಖವಾಗಿ ಸಾಗಿದ ಈ ಸ್ಪರ್ಧೆಯಲ್ಲಿ ಲವ್ಲೀನಾ ಮುಂದೆ ನಾರ್ವೆಯ ಪ್ರತಿಸ್ಪರ್ಧಿ ಸಂಪೂರ್ಣ ಶರಣಾದರು.
ಕ್ವಾರ್ಟರ್ ಫೈನಲ್ ಪಂದ್ಯದಲ್ಲಿ ಲವ್ಲೀನಾ ಅವರು ಎರಡು ಬಾರಿಯ ಒಲಿಂಪಿಕ್ ಪದಕ ವಿಜೇತ ಚೀನಾದ ಲಿ ಕಿಯಾನ್ ಅವರನ್ನು ಎದುರಿಸಲಿದ್ದಾರೆ.
ಕಳೆದ ಏಷ್ಯನ್ ಗೇಮ್ಸ್ ಮಹಿಳೆಯರ 75 ಕೆಜಿ ವಿಭಾಗದ ಫೈನಲ್‌ನಲ್ಲಿ ಲಿ ವಿರುದ್ಧ ಲವ್ಲೀನಾ ಸೋಲು ಕಂಡಿದ್ದರು. ಕ್ವಾರ್ಟರ್ ಫೈನಲ್ ಪಂದ್ಯ ಆಗಸ್ಟ್ 4 ರಂದು ನಡೆಯಲಿದೆ. ಇಲ್ಲಿ ಗೆದ್ದರೆ ಪದಕವೊಂದು ಖಾತ್ರಿಯಾಗಲಿದೆ. ಟೋಕಿಯೋ ಒಲಿಂಪಿಕ್ಸ್ನಲ್ಲಿ ಲವ್ಲಿನಾ 69 ಕೆ.ಜಿ. ವಿಭಾಗದಲ್ಲಿ ಕಂಚಿನ ಪದಕ ಗೆದ್ದು ಇತಿಹಾಸ ನಿರ್ಮಿಸಿದ್ದರು.