ಇಸ್ರೇಲ್ ದಾಳಿ: ಹಿಜ್ಬುಲ್ಲಾ ಕಮಾಂಡರ್ ಹತ್ಯೆ
ಬೈರುತ್,ಜು,೩೧- ಇಸ್ರೇಲ್‌ನ ಗೋಲನ್ ಹೈಟ್ಸ್‌ನಲ್ಲಿ ೧೨ ಯುವಕರನ್ನು ಹತ್ಯೆ ಮಾಡಿದ ಪ್ರತೀಕಾರವಾಗಿ ಇಸ್ರೇಲ್ ಸೇನೆ ನಡೆಸಿದ ದಾಳಿಯಲ್ಲಿ ಹಿರಿಯ ಹಿಜ್ಬುಲ್ಲಾ ಕಮಾಂಡರ್ ಫುವಾಡ್ ಶುಕ್ರ್ ಅನ್ನು ಹತ್ಯೆ ಮಾಡಿರುವುದಾಗಿ ಪ್ರಕಟಿಸಿದೆ.
ಹಿಜ್ಬುಲ್ಲಾ ಕಮಾಡಂರ್ ಹತ್ಯೆಯ ವೇಳೆ ಮೂರು ಮಂದಿ ನಾಗರಿಕರು ಸಾವನ್ನಪ್ಪಿದ್ದಾರೆ, ಇಸ್ರೇಲ್ ಮೇಲೆ ದಾಳಿ ಮಾಡಿದರೆ ಲೆಬನಾನ್‌ನಲ್ಲಿ ಇರಾನ್ ಬೆಂಬಲಿತ ಉಗ್ರಗಾಮಿ ಗುಂಪು ಹಿಜ್ಬುಲ್ಲಾ ಸಂಘಟನೆಯನ್ನು ಸುಮ್ಮನೆ ಬಿಡುವುದಿಲ್ಲ ಎಂದು ಸೇನೆ ಗುಡುಗಿದೆ
ಗೋಲನ್ ಹೈಟ್ಸ್‌ನಲ್ಲಿ ನಡೆದ ದಾಳಿಯಲ್ಲಿ ಯಾವುದೇ ಪಾತ್ರವನ್ನು ಹಿಜ್ಬುಲ್ಲಾ ಉಗ್ರಗಾಮಿ ಗುಂಪು ನಿರಾಕರಿಸಿದ್ದರೂ ಈ ದುಷ್ಕೃತ್ಯಕ್ಕೆ ಹಿಜ್ಬುಲ್ಲಾ ಸಂಘಟನೆಯೇ ನೇರ ಹೊಣೆ ಎಂದು ಇಸ್ರೇಲ್ ದೂಷಿಸಿದೆ.
ಇಸ್ರೇಲಿ ರಕ್ಷಣಾ ಸಚಿವ ಯೋವ್ ಗ್ಯಾಲಂಟ್ ಪ್ರತಿಕ್ರಿಯೆ ನೀಡಿ, ಹಿಜ್ಬುಲ್ಲಾ ಕಮಾಂಡರ್ ಫೌದ್ ಶುಕ್ರ್ ಅವರನ್ನು ಸೇನೆ ಹತ್ಯೆ ಮಾಡುವಲ್ಲಿ ಯಶಸ್ವಿಯಾಗಿದೆ. ಅಮಾಯಕ ೧೨ ಮಂದಿಯ ಹತ್ಯೆಗೆ ಪ್ರತೀಕಾರ ತೆಗೆದುಕೊಂಡಿದ್ದೇವೆ. ದೇಶದ ನಾಗರಿಕ ತಂಟೆಗೆ ಬಂದರೆ ಸುಮ್ಮನೆ ಬಿಡುವುದಿಲ್ಲ ಎಂದು ಹೇಳಿದ್ದಾರೆ
ವೈದ್ಯಕೀಯ ಮತ್ತು ಭದ್ರತಾ ಮೂಲಗಳ ಪ್ರಕಾರ ಬೈರುತ್‌ನ ದಕ್ಷಿಣ ಉಪನಗರಗಳ ಮೇಲೆ ಇಸ್ರೇಲಿ ದಾಳಿ ನಡೆಸಿದ ಪರಿಣಾಮ ಇಬ್ಬರು ಮಕ್ಕಳು ಸೇರಿದಂತೆ ಮೂವರು ನಾಗರಿಕರು ಹತ್ಯೆಯಾಗಿದ್ದಾರೆ. ದಾಳಿಯಲ್ಲಿ ೭೪ ಜನರು ಗಾಯಗೊಂಡಿದ್ದಾರೆ ಎಂದು ಲೆಬನಾನ್‌ನ ಮಾಧ್ಯಮಗಳು ಮಾಹಿತಿ ನೀಡಿವೆ.
ಪ್ರತ್ಯಕ್ಷದರ್ಶಿಗಳ ಪ್ರಕಾರ ಭಾರೀ ಸ್ಫೋಟದ ಸದ್ದು ಬೈರುತ್‌ನ ದಕ್ಷಿಣ ಉಪನಗರದಲ್ಲಿ ಕೇಳಿಸಿದ್ದು ಆದಾದ ಬಳಿಕ ಹೊಗೆ ಕಾಣಿಸಿಕೊಂಡಿತು, ಇರಾನ್ ಬೆಂಬಲಿತ ಹಿಜ್ಬುಲ್ಲಾ ಗುಂಪಿನ ಭದ್ರಕೋಟೆಯ ಮೇಲೆ ಇಸ್ರೇಲ್ ಸೇನೆ ದಾಳಿ ನಡೆಸಿದ್ದು ಗೊತ್ತಾಯಿತು ಎಂದಿದ್ಧಾರೆ
ಗೋಲನ್ ದಾಳಿಯಲ್ಲಿ ಭಾಗಿಯಾಗಿರುವುದನ್ನು ಹಿಜ್ಬುಲ್ಲಾ ನಿರಾಕರಿಸಿದೆ, ಆದರೆ ಗುಂಪು ಗೋಲನ್ ಹೈಟ್ಸ್‌ನಲ್ಲಿರುವ ಮಿಲಿಟರಿ ಗುರಿಯ ಮೇಲೆ ರಾಕೆಟ್‌ಗಳನ್ನು ಹಾರಿಸಿದೆ ಎನ್ನಲಾಗಿದೆ