ಸರ್ಕಾರಿ ಜಾಗದಲ್ಲಿ ಅಕ್ರಮ ಬಡಾವಣೆ ನಿರ್ಮಾಣ
ಕೆ.ಆರ್.ಪುರ,ಜು.೩೧- ಬೆಂಗಳೂರು ಪೂರ್ವ ತಾಲ್ಲೂಕು ಬಿದರಹಳ್ಳಿ ಹೋಬಳಿ ಆದೂರು ಗ್ರಾಮಕ್ಕೆ ಸೇರಿದ ಸರ್ವೆ ನಂ ೧೩೫ , ೮೪ ರಲ್ಲಿ ಸರ್ಕಾರಿ ಓಣಿ ಜಾಗದಲ್ಲಿ ಪ್ರಭಾವಿಗಳು ಅಕ್ರಮ ಬಡಾವಣೆ ನಿರ್ಮಿಸುತ್ತಿದ್ದರು ಅಧಿಕಾರಿಗಳು ಜಾಣಕುರುಡುತಣ ಪ್ರದರ್ಶನ ಮಾಡುತ್ತಿದ್ದಾರೆ ಎಂದು ಡಿ.ಎಸ್.ಎಸ್. ಅಂಬೇಡ್ಕರ್ ವಾದ ಬೆಂಗಳೂರು ವಿಭಾಗೀಯ ಸಂಚಾಲಕ ಮಣಿಪಾಲ್ ರಾಜಪ್ಪ ಅವರು ದೂರಿದರು.
ಆದೂರು ಗ್ರಾಮಕ್ಕೆ ಸೇರಿದ ಸರ್ವೆ ನಂ ೧೩೫ , ೮೪ ರಲ್ಲಿ ಅಕ್ರಮವಾಗಿ ನಿರ್ಮಾಣ ಮಾಡಿರುವ ವಿನಾಯಕ ಬಡಾವಣೆಗೆ ಬೇಟಿ ನೀಡಿ ಮಾತನಾಡಿದ ಅವರು ಸರ್ಕಾರಿ ಜಾಗದಲ್ಲಿ ಅಕ್ರಮ ಬಡಾವಣೆ ಮಾಡಲು ಅಧಿಕಾರಿಗಳು ಹಾಗು ಜನ ಪ್ರತಿನಿಧಿಗಳು ಶಾಮೀಲಾಗಿದ್ದಾರೆ. ಬಲಾಢ್ಯರು ಮಾಡಿರುವ ಅಕ್ರಮ ಬಡಾವಣೆಗಳಿಂದ ಸರ್ಕಾರಕ್ಕೆ ಕೋಟ್ಯಾಂತರ ರೂಪಾಯಿ ನಷ್ಟ ಉಂಟಾಗುತ್ತದೆ. ಈ ಬಗ್ಗೆ ತಾವುಗಳು ಸಂಬಂಧಪಟ್ಟ ಅಧಿಕಾರಿಗಳ ಮುಖಾಂತರ ಖುದ್ದು ಸ್ಥಳ ಪರಿಶೀಲನೆ ಮಾಡಿ ಸರ್ಕಾರಕ್ಕೆ ವಶಪಡಿಸಿಕೊಂಡು ಸಾರ್ವಜನಿಕ ಉದ್ದೇಶಕ್ಕೆ ಬಳಸಬೇಕಾಗಿದೆ. ಅಕ್ರಮ ಬಡಾವಣೆ ನಿರ್ಮಾಣ ಮಾಡಿರುವವರ ವಿರುದ್ಧ ಸರ್ಕಾರ ಸೂಕ್ತ ಕ್ರಮ ತೆಗೆದುಕೊಳ್ಳುವಂತೆ ಒತ್ತಾಯಿಸಿದರು.
ನಗರ ಜಿಲ್ಲಾ ಪ್ರಧಾನ ಸಂಚಾಲಕ ಮುನಿನಂಜಪ್ಪ ಮಾತನಾಡಿ ಆದೂರು ಗ್ರಾಮದ ಸರ್ವೆ ನಂ . ೧೨೫ ರ ಆಜು ಬಾಜುಗಳಲ್ಲಿ ಇದ್ದ ಎಲ್ಲಾ ನೀರು ಹರಿಯುವ ರಾಜಕಾಲುವೆಗಳನ್ನು ಬಂಡವಾಳ ಶಾಯಿಗಳು ಅಕ್ರಮವಾಗಿ ಬಡಾವಣೆಗಳನ್ನು ನಿರ್ಮಿಸಿದ್ದಾರೆ. ಅಧಿಕಾರಿಗಳು ಸರ್ಕಾರಿ ಜಾಗದ ನಾಮಫಲಕ ಹಾಕಿದರೂ ಅದನ್ನು ಬಿಡದೆ ಹಾಳು ಮಾಡಿ ರಾಜಾರೋಷವಾಗಿ ಮನೆಗಳನ್ನು ನಿರ್ಮಾಣ ಮಾಡುತ್ತಿದ್ದಾರೆ ಎಂದು ದೂರಿದರು.
ಡಿ.ಎಸ್.ಎಸ್. ಅಂಬೇಡ್ಕರ್ ವಾದ ಪೂರ್ವ ತಾಲ್ಲೂಕು ಸಂಘಟನಾ ಸಂಚಾಲಕ ಆದೂರು ಮಂಜುನಾಥ್ ಇದ್ದರು.