ಮುಡಾ ಹಗರಣ: ೧೫೦ ಪುಟಗಳ ದಾಖಲೆ ಲೋಕಾಗೆ ಸಲ್ಲಿಕೆ
ಬೆಂಗಳೂರು, ಜು.೩೧-ಮುಡಾ ಹಗರಣ ಸಂಬಂಧಿಸಿದಂತೆ ಮತ್ತಷ್ಟು ೨೫ ಪುಟಗಳ ಮಹತ್ವದ ದಾಖಲೆಗಳನ್ನು ಲೋಕಾಯುಕ್ತರಿಗೆ ಸಲ್ಲಿಸಲಾಗಿದೆ ಎಂದು ಭ್ರಷ್ಟಾಚಾರ ವಿರೋಧಿ ವೇದಿಕೆ ಅಧ್ಯಕ್ಷ ಎನ್.ಆರ್.ರಮೇಶ್ ಹೇಳಿದ್ದಾರೆ.
ನಗರದಲ್ಲಿಂದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮುಡಾದಲ್ಲಿ ಕಾನೂನುಬಾಹಿರವಾಗಿ ಬದಲಿ ನಿವೇಶನಗಳನ್ನು ಹಂಚಿಕೆ ಮಾಡುವ ಮೂಲಕ ಸರ್ಕಾರಕ್ಕೆ ೬೦ ಕೋಟಿ ರೂಪಾಯಿಗಳಷ್ಟು ವಂಚನೆ ಮಾಡಿರುವ ಬದಲಿ ನಿವೇಶನಗಳ ಹಂಚಿಕೆ ಹಗರಣಕ್ಕೆ ಸಂಬಂಧಿಸಿದಂತೆ ಸುಮಾರು ೪೦೦ ಪುಟಗಳ ಸಂಪೂರ್ಣ ದಾಖಲೆಗಳನ್ನು ಈಗಾಗಲೇ ಸಲ್ಲಿಕೆ ಮಾಡಿದ್ದೇನೆ ಎಂದರು.
ಇನ್ನೂ ಮುಖ್ಯಮಂತ್ರಿ ಸಿದ್ಧರಾಮಯ್ಯ ಮತ್ತವರ ಕುಟುಂಬಸ್ಥರು ಹಾಗೂ ಕೆಲವು ಅಧಿಕಾರಿಗಳ ವಿರುದ್ಧ ಪ್ರಮುಖ ದಾಖಲೆಗಳಿವೆ.೧೯೯೭-೯೮ ರ ಅವಧಿಯಲ್ಲಿ ಎಲ್ ಮತ್ತು ಟಿ ಸಂಸ್ಥೆಯ ಮೂಲಕ ಮುಡಾ ವು ಸಂಪೂರ್ಣ ಅಭಿವೃದ್ಧಿ ಪಡಿಸಿ – ಡಾಂಬರೀಕರಣಗೊಂಡ ರಸ್ತೆಗಳು, ಪಾದಚಾರಿ ಮಾರ್ಗಗಳು, ಚರಂಡಿಗಳು, ಕುಡಿಯುವ ನೀರಿನ ಕೊಳವೆಗಳು, ಒಳಚರಂಡಿ ಕೊಳವೆಗಳು ಮತ್ತು ಬೀದಿ ದೀಪಗಳನ್ನು ಒಳಗೊಂಡ “ದೇವನೂರು ೩ನೇ ಹಂತದ ಬಡಾವಣೆ”ಯಲ್ಲಿನ ನಿವೇಶನಗಳನ್ನು ಅರ್ಜಿದಾರರಿಗೆ ಹಂಚಿಕೆ ಮಾಡಲಾಗಿತ್ತು ಹಾಗೂ ಮೂರ್ನಾಲ್ಕು ವರ್ಷಗಳಲ್ಲಿಯೇ ಸದರಿ ಬಡಾವಣೆಯಲ್ಲಿ ಹತ್ತಾರು ಕಟ್ಟಡಗಳು ತಲೆ ಎತ್ತಿದ್ದವು.
ಆದರೆ, ಅದಾಗಲೇ ಅಭಿವೃದ್ಧಿಗೊಂಡಿದ್ದ ಸದರಿ ಬಡಾವಣೆಯಲ್ಲಿ ೩.೧೬ ಎಕರೆ ವಿಸ್ತೀರ್ಣದ ಪ್ರದೇಶವನ್ನು “ಭೂ ಪರಿವರ್ತನೆ” ಮಾಡಿ ಕೊಡುವಂತೆ ದಿನಾಂಕ ೨೦೦೪ರಲ್ಲಿ ಸಲ್ಲಿಸಿದ್ದ ಅರ್ಜಿಗೆ ಸಂಬಂಧಿಸಿದಂತೆ, ಅಂದಿನ ಜಿಲ್ಲಾಧಿಕಾರಿಗಳು ತಾಲ್ಲೂಕು ತಹಶೀಲ್ದಾರರ ವರದಿಯನ್ನಾಧರಿಸಿ ೨೦೦೫ ರಲ್ಲಿ ಖುದ್ದು ಸ್ಥಳ ಪರಿಶೀಲನೆ ಮಾಡಿ ಮೈಸೂರು ತಾಲ್ಲೂಕು, ಕಸಬಾ ಹೋಬಳಿ, ಕೆಸರೆ ಗ್ರಾಮದ ಸರ್ವೆ ನಂ: ೪೬೪ ರ ೩.೧೬ ಎಕರೆ ವಿಸ್ತೀರ್ಣದ ವ್ಯವಸಾಯದ ಜಮೀನನ್ನು ವಸತಿ ಉದ್ದೇಶಕ್ಕೆ ಬಳಸಲು ಭೂ ಪರಿವರ್ತನೆ ಮಾಡಲು ಅನುಮತಿ ನೀಡಲಾಗಿದೆ ಎಂದು ಸ್ಥಳ ತನಿಖಾ ಟಿಪ್ಪಣಿಯಲ್ಲಿ ಲಿಖಿತವಾಗಿ ಇದೆ ಎಂದು ಆರೋಪಿಸಿದರು.
೨೦೦೫ ಕ್ಕೂ ಏಳೆಂಟು ವರ್ಷಗಳ ಹಿಂದೆಯೇ ಸಂಪೂರ್ಣ ಅಭಿವೃದ್ಧಿ ಪಡಿಸಲಾಗಿದ್ದ “ದೇವನೂರು ೩ನೇ ಹಂತದ ಬಡಾವಣೆ”ಯಲ್ಲಿ ವ್ಯವಸಾಯದ ಜಮೀನು ಇರಲು ಹೇಗೆ ಸಾಧ್ಯ. ೨೦೦೪-೨೦೦೬ ರ ಅವಧಿಯಲ್ಲಿ ಧರ್ಮಸಿಂಗ್ ಅವರ ಸಚಿವ ಸಂಪುಟದಲ್ಲಿ ಉಪ ಮುಖ್ಯಮಂತ್ರಿ, ಹಣಕಾಸು ಸಚಿವ, ಮೈಸೂರು ಜಿಲ್ಲಾ ಉಸ್ತುವಾರಿ ಸಚಿವರಾಗಿದ್ದ ಸಿದ್ಧರಾಮಯ್ಯ ರಾಜಕೀಯ ಪ್ರಭಾವಕ್ಕೆ ಮತ್ತು ಒತ್ತಡಗಳಿಗೆ ಒಳಗಾಗಿದ್ದ ಆಗಿನ ಜಿಲ್ಲಾಧಿಕಾರಿಗಳು ಮತ್ತು ತಹಶೀಲ್ದಾರ್ ಗಳು ಈ ರೀತಿಯ ಹಾಸ್ಯಾಸ್ಪದ ಮತ್ತು ಕಾನೂನು ಬಾಹಿರವಾದ ಭೂ ಪರಿವರ್ತನೆ ಕಾರ್ಯಕ್ಕೆ ಅನುಮೋದನೆ ನೀಡಿರುವುದು ಅತ್ಯಂತ ಸ್ಪಷ್ಟವಾಗಿದೆ ಎಂದು ರಮೇಶ್ ಹೇಳಿದರು.