ಪಾಕ್ ಪ್ರಜೆ ಸೇರಿ ನಾಲ್ವರ ಸೆರೆ
ಖಾಕಿ ಕಾರ್ಯಾಚರಣೆ
ಬೆಂಗಳೂರು,ಸೆ.೩೦-ನಗರದ ಹೊರವಲಯದ ಆನೇಕಲ್ ಜಿಗಣಿಯ ಬಳಿಯ ಅಪಾರ್ಟ್‌ಮೆಂಟ್‌ನಲ್ಲಿ ಅಕ್ರಮವಾಗಿ ನೆಲೆಸಿದ್ದ ಪಾಕಿಸ್ತಾನ ಪ್ರಜೆಯನ್ನು ಪೊಲೀಸರು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
ರಾತ್ರಿ ಕಾರ್ಯಾಚರಣೆ ನಡೆಸಿ ಪೊಲೀಸರು ಪಾಕಿಸ್ತಾನದ ಪ್ರಜೆಯ ಜೊತೆಗೆ ನಾಲ್ವರು ವಿದೇಶಿ ಪ್ರಜೆಗಳನ್ನು ಪೊಲೀಸರು ಬಂಧಿಸಿ ತೀವ್ರ ವಿಚಾರಣೆ ಕೈಗೊಂಡಿದ್ದಾರೆ.
ಧರ್ಮದ ವಿಚಾರಕ್ಕೆ ಪಾಕಿಸ್ತಾನದಲ್ಲಿ ಭಿನ್ನಾಭಿಪ್ರಾಯ ಉಂಟಾದ ಸಂದರ್ಭದಲ್ಲಿ ಬಂಧಿತ ಆರೋಪಿಯು ಪಾಕಿಸ್ತಾನ ತೊರೆದು ಬಾಂಗ್ಲಾದೇಶದ ಢಾಕಾದಲ್ಲಿ ನೆಲಸಿದ್ದನು.
ಢಾಕಾದಲ್ಲಿ ಓರ್ವ ಯುವತಿಯನ್ನು ವಿವಾಹವಾಗಿದ್ದಾನೆ. ಬಳಿಕ ಬಂಧಿತ ಪಾಕಿಸ್ತಾನ ಪ್ರಜೆ ಪತ್ನಿ ಮತ್ತು ಇಬ್ಬರು ಮಕ್ಕಳೊಂದಿಗೆ ೨೦೧೪ರಲ್ಲಿ ಅಕ್ರಮವಾಗಿ ದೆಹಲಿಗೆ ಬಂದಿದ್ದಾನೆ. ಅಲ್ಲಿ, ಸ್ಥಳೀಯ ವ್ಯಕ್ತಿಯ ನೆರವಿನಿಂದ ಆಧಾರ್ ಕಾರ್ಡ್, ಡ್ರೈವಿಂಗ್ ಲೈಸೆನ್ಸ್, ಪಾಸ್‌ಪೋರ್ಟ್ ಮಾಡಿಸಿಕೊಂಡಿದ್ದಾನೆ.
ಬಳಿಕ, ೨೦೧೮ರಲ್ಲಿ ಕುಟುಂಬ ಸಮೇತ ಆನೇಕಲ್ ತಾಲೂಕಿನ ಜಿಗಣಿಗೆ ಬಂದು ವಾಸವಾಗಿದ್ದಾನೆ. ಈತನ ವಿಚಾರ ತಿಳಿದ ಕೇಂದ್ರ ಗುಪ್ತಚರ ಇಲಾಖೆ ಅಧಿಕಾರಿಗಳು, ಜಿಗಣಿ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಮಾಹಿತಿ ಆಧರಿಸಿ, ಜಿಗಣಿ ಪೊಲೀಸರು ತಡರಾತ್ರಿ ಕಾರ್ಯಾಚರಣೆ ನಡೆಸಿ, ಕುಟುಂಬ ಸಮೇತ ಆರೋಪಿಯನ್ನು ಬಂಧಿಸಿದ್ದಾರೆ. ಜಿಗಣಿ ಪೊಲೀಸರು ಪ್ರಕರಣ ದಾಖಲಿಸಿ ಹೆಚ್ಚಿನ ತನಿಖೆ ಕೈಗೊಂಡಿದ್ದಾರೆ.
ಬಂಧಿಯಾಗಿರುವ ಪಾಕ್ ಪ್ರಜೆಯು ಪತ್ನಿ, ಇಬ್ಬರು ಮಕ್ಕಳ ಜತೆ ವಾಸವಿದ್ದ. ಆತನ ಪತ್ನಿ ಬಾಂಗ್ಲಾದೇಶದವಳಾಗಿದ್ದಾಳೆ.
ಕೇಂದ್ರ ಗುಪ್ತಚರ ಇಲಾಖೆ ಅಧಿಕಾರಿಗಳು ಖಚಿತ ಮಾಹಿತಿ ಸಂಗ್ರಹಿಸಿದ್ದರು. ಕೇಂದ್ರ ಗುಪ್ತಚರ ಇಲಾಖೆ ನೀಡಿದ ಮಾಹಿತಿ ಆಧರಿಸಿ ಕಾರ್ಯಾಚರಣೆ ನಡೆಸಿದ ಜಿಗಣಿ ಪೊಲೀಸರು ಎಲ್ಲರನ್ನು ವಶಕ್ಕೆ ಪಡೆದುಕೊಂಡಿದ್ದಾರೆ.
ಜಿಗಣಿ ಠಾಣೆಯಲ್ಲಿ ಈ ಸಂಬಂಧ ಪ್ರಕರಣ ದಾಖಲಾಗಿದ್ದು, ತನಿಖೆಯನ್ನು ನಡೆಸಲಾಗುತ್ತಿದೆ. ಪಾಕ್ ಪ್ರಜೆ ಬಂಧನದ ಹಿನ್ನೆಲೆ ಹಿರಿಯ ಪೊಲೀಸ್ ಅಧಿಕಾರಿಗಳು ದೌಡಾಯಿಸಿದ್ದಾರೆ.
ಬೆಂಗಳೂರು ಗ್ರಾಮಾಂತರ ಹೆಚ್ಚುವರಿ ಎಸ್‌ಪಿ ಕೆ ಎಸ್ ನಾಗರಾಜ್ ಭೇಟಿ ನೀಡಿ ಇನ್ಸ್‌ಸ್ಪೆಕ್ಟರ್ ಮಂಜುನಾಥ್ ಬಳಿ ಮಾಹಿತಿ ಸಂಗ್ರಹಿಸಿದ್ದಾರೆ.
ಇತ್ತೀಚೆಗೆ ಕೇಂದ್ರ ತನಿಖಾ ಸಂಸ್ಥೆ (ಎನ್‌ಐಎ) ಅಧಿಕಾರಿಗಳು ಜಿಗಣಿಯಲ್ಲಿ ವಾಸವಿದ್ದ ಶಂಕಿತ ಉಗ್ರ ಗಿರೀಶ್ ಬೋರಾ ಅಲಿಯಾಸ್ ಗೌತಮ್‌ನನ್ನು ಬಂಧಿಸಿದ್ದರು.
ಶಂಕಿತ ಉಗ್ರ ಅಸ್ಸಾಂನ ಗುವಾಹಟಿಯಲ್ಲಿ ಐದು ಕಡೆ ಐಇಡಿ ಬಾಂಬ್ ಇಟ್ಟು ಬೆಂಗಳೂರಿನ ಜಿಗಣಿಯಲ್ಲಿ ನೆಲಸಿದ್ದನು. ಶಂಕಿತ ಉಗ್ರ ಅಲ್ಫಾ ಸಂಘಟನೆ ಸೇರಿದವನಾಗಿದ್ದು,ಹೆಚ್ಚಿನ ತನಿಖೆಯನ್ನು ಕೈಗೊಳ್ಳಲಾಗಿದೆ.