ನಸ್ರಲ್ಲಾ ಹತ್ಯೆ ಖಂಡಿಸಿ ಪಾಕ್ ನಲ್ಲಿ ಪ್ರತಿಭಟನೆ
ಕರಾಚಿ,ಸೆ.೩೦- ಲೆಬನಾನ್‌ನಲ್ಲಿ ಹೆಜ್ಬೊಲ್ಲಾ ಸಂಘಟನೆಯ ಪ್ರಧಾನ ಕಾರ್ಯದರ್ಶಿ ಸಯ್ಯದ್ ಹಸನ್ ನಸ್ರಲ್ಲಾ ಅವರ ಹತ್ಯೆಯನ್ನು ಖಂಡಿಸಿ ಪಾಕಿಸ್ತಾನದ ಕರಾಚಿಯಲ್ಲಿ ಹಿಂಸಾತ್ಮಕ ಪ್ರತಿಭಟನೆಗಳು ಆರಂಭವಾಗಿವೆ.
ಪ್ರತಿಭಟನಾಕಾರರು ಯುಎಸ್ ರಾಯಭಾರಿ ಕಚೇರಿಗೆ ಕಡೆಗೆ ಮೆರವಣಿಗೆ ನಡೆಸಲು ಪ್ರಯತ್ನಿಸಿದಾಗ ಪೊಲೀಸರೊಂದಿಗೆ ಘರ್ಷಣೆ ನಡೆಸಿದ್ದಾರೆ. ಪ್ರತಿಭಟನೆಯ ನೇತೃತ್ವವನ್ನು ಮಜ್ಜಿಸ್ ವಹತ್-ಎ-ಮುಸ್ಲಿಮೀನ್ ಸಂಘ ವಹಿಸಿದೆ.
ನಸ್ರಲ್ಲಾ ಅವರ ಮರಣದ ನಂತರ, ಅನೇಕ ರಾಜಕೀಯ-ಧಾರ್ಮಿಕ ಪಕ್ಷಗಳಿಂದ ಕರಾಚಿ ಸೇರಿದಂತೆ ಪಾಕಿಸ್ತಾನದ ವಿವಿಧ ಪ್ರದೇಶಗಳಲ್ಲಿ ಪ್ರತಿಭಟನೆ ನಡೆಸಲಾಗಿದೆ. ಪ್ರತಿಭಟನಾಕಾರರನ್ನು ಚದುರಿಸಲು ಪೊಲೀಸರು ಲಾಠಿ ಚಾರ್ಜ್, ಅಶ್ರುವಾಯು ಶೆಲ್‌ಗಳನ್ನು ಸಿಡಿಸಿ ಮತ್ತು ವೈಮಾನಿಕ ಗುಂಡಿನ ದಾಳಿ ನಡೆಸಲಾಗಿದೆ. ಪ್ರತಿಭಟನಾಕಾರರು ಕೆಲವು ಪತ್ರಕರ್ತರು ಮತ್ತು ಛಾಯಾಗ್ರಾಹಕರನ್ನು ಹೊಡೆದು ಗಾಯಗೊಳಿಸಿದ್ದಾರೆ.
ಎರಡು ಪೊಲೀಸ್ ವಾಹನಗಳನ್ನು ಹಾನಿಗೊಳಿಸಿದ್ದಾರೆ ಮತ್ತು ಮೋಟಾರ್ ಸೈಕಲ್‌ಗೆ ಬೆಂಕಿ ಹಚ್ಚಿದ್ದಾರೆ. ವರದಿಯ ಪ್ರಕಾರ, ಸ್ಟೇಷನ್ ಹೌಸ್ ಆಫೀಸರ್ (ಎಸ್‌ಎಚ್‌ಒ) ಅವರು ಕಲ್ಲು ತೂರಾಟದಿಂದ ಗಂಭೀರವಾಗಿ ಗಾಯಗೊಂಡಿದ್ದಾರೆ ಅವರನ್ನು ಚಿಕಿತ್ಸೆಗಾಗಿ ಆಸ್ಪತ್ರೆಗೆ ಕರೆದೊಯ್ಯಲಾಗಿದೆ. ಸಿಂಧ್ ಆಂತರಿಕ ಸಚಿವ ಜಿಯಾ-ಉಲ್-ಹಸನ್ ಲಿಂಜಾರ್ ಅವರು ಪ್ರದೇಶದಲ್ಲಿ ಸುವ್ಯವಸ್ಥೆಯನ್ನು ಕಾಪಾಡಲು ಹೆಚ್ಚುವರಿ ಪೊಲೀಸ್ ನಿಯೋಜನೆಯ ಅಗತ್ಯವನ್ನು ಒತ್ತಿ ಹೇಳಿದ್ದಾರೆ ಮತ್ತು ನಾಗರಿಕರು ಮತ್ತು ಪತ್ರಕರ್ತರನ್ನು ರಕ್ಷಿಸಲು ಭದ್ರತಾ ಕ್ರಮಗಳನ್ನು ಹೆಚ್ಚಿಸುವಂತೆ ಒತ್ತಾಯಿಸಿದ್ದಾರೆ.
ಹಿಜ್ಜುಲ್ಲಾ ನಾಯಕನ ಹತ್ಯೆಯನ್ನು ಪ್ರತಿಭಟಿಸಲು ಯುಎಸ್ ರಾಯಭಾರಿ ಕಚೇರಿಗೆ ತೆರಳುತ್ತಿದ್ದ ಪ್ರತಿಭಟನಾಕಾರರನ್ನು ಚದುರಿಸಲು ಪೊಲೀಸರು ಅಶ್ರುವಾಯು ಮತ್ತು ಲಾಠಿ ಚಾರ್ಜ್ ಮಾಡಿದರು ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಧಾರ್ಮಿಕ-ರಾಜಕೀಯ ಪಕ್ಷವಾದ ಮಜ್ಜಿಸ್ ವಹತ್ ಮುಸ್ಲಿಮೀನ್ (ಎಂಡಬ್ಲ್ಯುಎಂ) ಪ್ರತಿಭಟನೆಗೆ ಕರೆ ನೀಡಿದೆ ಎಂದು ಕರಾಚಿ ಪೊಲೀಸರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.