ಕಿವೀಸ್ ಕಿವಿ ಹಿಂಡಿದ ಲಂಕಾಕ್ಕೆ ಗೆಲುವು
ಗಾಲೆ.ಸೆ.೨೯- ನ್ಯೂಜಿಲ್ಯಾಂಡ್ ವಿರುದ್ಧದ ೨ನೇ ಟೆಸ್ಟ್ ಪಂದ್ಯದಲ್ಲಿ ಶ್ರೀಲಂಕಾ ತಂಡ ಅಮೋಘ ಗೆಲುವು ದಾಖಲಿಸಿದೆ.
ಇಲ್ಲಿನ ಗಾಲೆ ಇಂಟರ್ನ್ಯಾಷನಲ್ ಸ್ಟೇಡಿಯಂನಲ್ಲಿ ನಡೆದ ಈ ಪಂದ್ಯದಲ್ಲಿ ಟಾಸ್ ಗೆದ್ದ ಲಂಕಾ ತಂಡದ ನಾಯಕ ನಾಯಕ ಧನಂಜಯ ಡಿಸಿಲ್ವಾ ಬ್ಯಾಟಿಂಗ್ ಆಯ್ದುಕೊಂಡಿದ್ದರು. ಅದರಂತೆ ಪ್ರಥಮ ಇನಿಂಗ್ಸ್ ಆಡಿದ ಶ್ರೀಲಂಕಾ ಪರ ದಿನೇಶ್ ಚಂಡಿಮಲ್ (೧೧೬), ಏಂಜೆಲೊ ಮ್ಯಾಥ್ಯೂಸ್ (೮೮) ಭರ್ಜರಿ ಬ್ಯಾಟಿಂಗ್ ಪ್ರದರ್ಶಿಸಿದ್ದರು.
ಇನ್ನು ಐದನೇ ಕ್ರಮಾಂಕದಲ್ಲಿ ಕಣಕ್ಕಿಳಿದ ಕಮಿಂದು ಮೆಂಡಿಸ್ ೨೫೦ ಎಸೆತಗಳಲ್ಲಿ ೧೬ ಫೋರ್ ಹಾಗೂ ೪ ಸಿಕ್ಸ್ಗಳೊಂದಿಗೆ ಅಜೇಯ ೧೮೨ ರನ್ ಬಾರಿಸಿದರು. ಹಾಗೆಯೇ ವಿಕೆಟ್ ಕೀಪರ್ ಬ್ಯಾಟರ್ ಕುಸಾಲ್ ಮೆಂಡಿಸ್ ೧೦೯ ಎಸೆತಗಳಲ್ಲಿ ೧೦೬ ರನ್ ಕಲೆಹಾಕಿದರು. ಈ ಮೂಲಕ ಶ್ರೀಲಂಕಾ ತಂಡವು ಮೊದಲ ಇನಿಂಗ್ಸ್ನಲ್ಲಿ ೫ ವಿಕೆಟ್ ನಷ್ಟಕ್ಕೆ ೬೦೨ ರನ್ ಕಲೆಹಾಕಿ ಡಿಕ್ಲೇರ್ ಘೋಷಿಸಿತು.
೬೦೨ ರನ್‌ಗಳ ಪ್ರಥಮ ಇನಿಂಗ್ಸ್‌ಗೆ ಉತ್ತರವಾಗಿ ಮೊದಲ ಇನಿಂಗ್ಸ್ ಆರಂಭಿಸಿದ ನ್ಯೂಝಿಲೆಂಡ್ ತಂಡವು ಯಾವುದೇ ಹಂತದಲ್ಲೂ ನಿರೀಕ್ಷಿತ ಪ್ರದರ್ಶನ ನೀಡಿರಲಿಲ್ಲ. ಆರಂಭಿಕರಾದ ಟಾಮ್ ಲಾಥಮ್ (೨) ಹಾಗೂ ಡೆವೊನ್ ಕಾನ್ವೆ (೯) ಬೇಗನೆ ವಿಕೆಟ್ ಒಪ್ಪಿಸಿದರೆ, ಮೂರನೇ ಕ್ರಮಾಂಕದಲ್ಲಿ ಕಣಕ್ಕಿಳಿದ ಕೇನ್ ವಿಲಿಯಮ್ಸನ್ ೭ ರನ್ಗಳಿಸಿ ಔಟಾದರು.
ಇದರ ಬೆನ್ನಲ್ಲೇ ಅಜಾಝ್ ಪಟೇಲ್ (೮) ಹಾಗೂ ರಚಿನ್ ರವೀಂದ್ರ (೧೦) ಕೂಡ ವಿಕೆಟ್ ಕೈಚೆಲ್ಲಿದರು. ಇನ್ನು ಡೇರಿಲ್ ಮಿಚೆಲ್ (೧೩), ಟಾಮ್ ಬ್ಲಂಡೆಲ್ (೧) ಹಾಗೂ ಗ್ಲೆನ್ ಫಿಲಿಪ್ಸ್ (೦) ವಿಕೆಟ್ ಕಬಳಿಸುವ ಮೂಲಕ ಪ್ರಭಾತ್ ಜಯಸೂರ್ಯ ೫ ವಿಕೆಟ್‌ಗಳ ಸಾಧನೆ ಮಾಡಿದರು.
ಈ ಹಂತದಲ್ಲಿ ಮಿಚೆಲ್ ಸ್ಯಾಂಟ್ನರ್ ೫೧ ಎಸೆತಗಳಲ್ಲಿ ೧ ಸಿಕ್ಸ್ ಹಾಗೂ ೪ ಫೋರ್ಗಳೊಂದಿಗೆ ೨೯ ರನ್ ಬಾರಿಸಿದರು. ಆದರೆ ಮತ್ತೊಂದೆಡೆ ಪ್ರಭಾತ್ ಜಯಸೂರ್ಯ ಸ್ಪಿನ್ ಮೋಡಿಯೊಂದಿಗೆ ಟಿಮ್ ಸೌಥಿ (೨) ಗೆ ಪೆವಿಲಿಯನ್ ಹಾದಿ ತೋರಿಸಿದರು. ಈ ಮೂಲಕ ಶ್ರೀಲಂಕಾ ನ್ಯೂಝಿಲೆಂಡ್ ತಂಡವನ್ನು ಪ್ರಥಮ ಇನಿಂಗ್ಸ್ನಲ್ಲಿ ಕೇವಲ ೮೮ ರನ್‌ಗಳಿಗೆ ಆಲೌಟ್ ಮಾಡಿತು. ಶ್ರೀಲಂಕಾ ಪರ ೧೮ ಓವರ್ಗಳನ್ನು ಎಸೆದ ಪ್ರಭಾತ್ ಜಯಸೂರ್ಯ ೬ ಮೇಡನ್ಗಳೊಂದಿಗೆ ಕೇವಲ ೪೨ ರನ್ ನೀಡಿ ೬ ವಿಕೆಟ್ ಕಬಳಿಸಿ ಮಿಂಚಿದರು.