ಇಸ್ರೇಲಿ ದಾಳಿ ಹಸನ್ ನಸ್ರಲ್ಲಾಹ್ ಪುತ್ರಿ ಜೈನಾಬ್ ಹತ್ಯೆ
ಬೈರುತ್,ಸೆ.೨೮-ಲೆಬನಾನ್‌ನ ದಕ್ಷಿಣ ಬೈರುತ್‌ನಲ್ಲಿರುವ ಹಿಜ್ಬುಲ್ಲಾ ಭದ್ರಕೋಟೆಗಳನ್ನು ಗುರಿಯಾಗಿಸಿಕೊಂಡು ಇಸ್ರೇಲಿ ನಡೆಸಿದ ವೈಮಾನಿಕ ದಾಳಿಯಲ್ಲಿ ಉನ್ನತ ಹಿಜ್ಬುಲ್ಲಾ ನಾಯಕ ಹಸನ್ ನಸ್ರಲ್ಲಾ ಅವರ ಪುತ್ರಿ ಜೈನಾಬ್ ನಸ್ರಲ್ಲಾ ಸಾವನ್ನಪ್ಪಿದ್ದಾರೆ ಎನ್ನಲಾಗಿದೆ, ಆದರೆ ಅವರ ಸಾವಿನ ಬಗ್ಗೆ ಇಸ್ರೇಲ್, ಹಿಜ್ಬುಲ್ಲಾ ಅಥವಾ ಲೆಬನಾನ್ ಅಧಿಕಾರಿಗಳಿಂದ ಯಾವುದೇ ಅಧಿಕೃತ ಮಾಹಿತಿ ಬಂದಿಲ್ಲ. ಒಂದು ವೇಳೆ ಝೈನಾಬ್ ಸಾವು ದೃಢಪಟ್ಟರೆ ಹೆಜ್ಬುಲ್ಲಾಗೆ ಈ ಸುದ್ದಿ ಭಾರೀ ಆಘಾತ ಉಂಟು ಮಾಡುತ್ತದೆ.ಹಿಜ್ಬುಲ್ಲಾ ಹೋರಾಟಗಾರರು ಸೇಡು ತೀರಿಸಿಕೊಳ್ಳಲು ಯಾವುದೇ ಮಿತಿಯನ್ನು ದಾಟಬಹುದು ಎಂದು ಅಂದಾಜಿಸಲಾಗಿದೆ.
ಇಸ್ರೇಲಿ ಸೈನ್ಯವು ಹಿಜ್ಬುಲ್ಲಾದ ನಾಯಕನನ್ನು ಗುರಿಯಾಗಿಸಿಕೊಂಡಿತು ಮತ್ತು ಬೈರುತ್‌ನಲ್ಲಿರುವ ಅದರ ಕೇಂದ್ರ ಕಛೇರಿಯ ಮೇಲೆ ದಾಳಿ ಮಾಡಿತು. ವರದಿಗಳನ್ನು ಪ್ರಕಾರ, ಹಲವಾರು ಎತ್ತರದ ಕಟ್ಟಡಗಳು ಒಂದರ ನಂತರ ಒಂದರಂತೆ ಬೃಹತ್ ಸ್ಫೋಟಗಳಿಂದ ನಾಶವಾಗಿವೆ. ಈ ಮಾಹಿತಿಯನ್ನು ಇಸ್ರೇಲ್ ಸೇನೆ ನೀಡಿದೆ.
ದಾಳಿಯಲ್ಲಿ ಕನಿಷ್ಠ ಆರು ಮಂದಿ ಸಾವನ್ನಪ್ಪಿದ್ದು, ೯೧ ಮಂದಿ ಗಾಯಗೊಂಡಿದ್ದಾರೆ ಎಂದು ಲೆಬನಾನ್ ಆರೋಗ್ಯ ಸಚಿವಾಲಯ ತಿಳಿಸಿದೆ. ಲೆಬನಾನಿನ ರಾಜಧಾನಿಯಲ್ಲಿ ನಡೆದ ಈ ದಾಳಿಯಿಂದಾಗಿ, ಸಂಘರ್ಷವು ಪೂರ್ಣ ಪ್ರಮಾಣದ ಯುದ್ಧವಾಗಿ ಬದಲಾಗುವ ಆತಂಕವು ಹೆಚ್ಚಾಗಿದೆ.