ಶಿರಾಡಿ ಘಾಟ್ ನಲ್ಲಿ ಭೂಕುಸಿತ ತಪ್ಪಿದ ಅನಾಹುತ
ಹಾಸನ, ಜು.30- ರಾಜ್ಯಾದ್ಯಂತ ಮಳೆಯ ಆರ್ಭಟ ಮುಂದುವರಿದ ಕಾರಣ ವಿವಿಧ ಜಿಲ್ಲೆಗಳಲ್ಲಿ ಅವಾಂತರಗಳು ಮುಂದುವರಿದಿವೆ. ಹಾಸನ-ಚಿಕ್ಕಮಗಳೂರಿನ ಘಾಟ್ ಪ್ರದೇಶದಲ್ಲಿ ಭಾರೀ ಭೂಕುಸಿತಗಳು ಸಂಭವಿಸಿವೆ.
ಸಕಲೇಶಪುರದ ದೊಡ್ಡತಪ್ಲು ಬಳಿಯ ಶಿರಾಡಿ ಘಾಟ್ ರಾಷ್ಟ್ರೀಯ ಹೆದ್ದಾರಿ 75ರಲ್ಲಿ ಗುಡ್ಡ ಕುಸಿತ ಉಂಟಾಗಿದೆ. ಈ ಸಂದರ್ಭದಲ್ಲಿ ಹಾದುಹೋಗುತ್ತಿದ್ದ ಎರಡು ಕಾರು, ಗ್ಯಾಸ್ ಟ್ಯಾಂಕರ್ , ಲಾರಿ ಸೇರಿ ಆರು ವಾಹನಗಳ ಮೇಲೆ ಗುಡ್ಡ ಕುಸಿದು ಅನಾಹುತ ಸಂಭವಿಸಿದೆ.
ಮಣ್ಣು ಬಿದ್ದಿರುವ ಧಾಟಿಗೆ ಗ್ಯಾಸ್ ಟ್ಯಾಂಕರ್ ಮತ್ತು ಲಾರಿ ಪಲ್ಟಿ ಹೊಡೆದಿವೆ. ಅದೃಷ್ಟವಶಾತ್ ವಾಹನಗಳಲ್ಲಿದ್ದವರು ಪ್ರಾಣಾಪಾಯದಿಂದ _ಆಶ್ಷರ್ಯಕರ ರೀತಿಯಲ್ಲಿ ಪಾರಾಗಿದ್ದಾರೆ.
ಗ್ಯಾಸ್ ಟ್ಯಾಂಕರ್ ಪಲ್ಟಿ ಹೊಡೆದ ಪರಿಣಾಮ ಗ್ಯಾಸ್ ಸೋರಿಕೆ ಭೀತಿ ಎದುರಾಗಿದೆ. ಭಾರೀ ಮಳೆ ನಡುವೆಯೇ ಮಣ್ಣು ತೆರವು ಕಾರ್ಯ ನಡೆದಿದೆ.
ಎತ್ತಿನಹೊಳೆ ಯೋಜನೆ ಕಾಮಗಾರಿಯ ಪರಿಣಾಮ ಸಕಲೇಶಪುರದ ಕುಂಬರಡಿ-ಹಾರ್ಲೆ ಎಸ್ಟೇಟ್ ನಡುವೆ ಗುಡ್ಡ ಕುಸಿದು ಸುಮಾರು 200 ಅಡಿಯಷ್ಟು ದೂರದವರೆಗೂ ರಸ್ತೆಯೇ ಕತ್ತರಿಸಿಹೋಗಿದೆ. ಈ ಭಾಗದಲ್ಲಿ ರಸ್ತೆ ಎಲ್ಲಿದ ಎಂಬುದೇ ಕ ಕಾಣುತ್ತಿಲ್ಲ. ಇದರಿಂದ ಬಾರ್ಲಿ-ಮಲ್ಲಗದ್ದೆ-ಕಾಡುಮನೆ ಸೇರಿ ಸುಮಾರು 10 ಗ್ರಾಮಗಳಿಗೆ ಸಂಪರ್ಕ ಕಡಿದುಹೋಗಿದೆ.
ಮಂಗಳೂರು ಉಪ್ಪಿನಂಗಡಿ ಬಂದ್
ಕರಾವಳಿ ಜಿಲ್ಲೆಯಲ್ಲಿ ಭಾರೀ ಮಳೆಯ ಪರಿಣಾಮ ಸರಳಿಕಟ್ಟೆಗೆ ಸಂಪರ್ಕ ಕಲ್ಪಿಸುವ ರಸ್ತೆ ಗುಡ್ಡ ಕುಸಿದು ಅಜಿಲಮೊಗರು – ಸರಳಿಕಟ್ಟೆ – ಉಪ್ಪಿನಂಗಡಿ ಮಾರ್ಗ ಸಂಪೂರ್ಣ ಬಂದ್ ಆಗಿದೆ. ಪಂಜುಕ್ಕು ಪ್ರಯಾಣಿಕರ ತಂಗುದಾಣದ ಬಳಿಯೇ ಘಟನೆ ನಡೆದಿದೆ. ಸದ್ಯ ಬಸ್‌ಗೆ ಯಾವುದೇ ಹಾನಿಯಾಗಿಲ್ಲ. ಗುಡ್ಡ ಕುಸಿತದಿಂದ ವಿದ್ಯುತ್ ಕಂಬಗಳು ಧರೆಗುಳಿದಿದ್ದು ವಿದ್ಯುತ್ ಸಂಪರ್ಕ ಕಡಿತಗೊಂಡಿದೆ. ಹಾಗಾಗಿ ಉಪ್ಪಿನಂಗಡಿ, ಪುತ್ತೂರು, ಬಿ.ಸಿರೋಡು ತೆರಳುವ ಪ್ರಯಾಣಿಕರು ಬದಲಿ ರಸ್ತೆ ಬಳಸುವಂತೆ ಜಿಲ್ಲಾಡಳಿತ ಸೂಚಿಸಿದೆ.