ಅಧಿಕಾರಕ್ಕೆ ಬಂದ್ರೆ ಅಗ್ನಿವೀರ್ ಯೋಜನೆ ರದ್ದು: ಅಖಿಲೇಶ್
ಲಖನೌ.ಜು.೨೮-ನಾವು ಅಧಿಕಾರಕ್ಕೆ ಬಂದ ತಕ್ಷಣ ಅಗ್ನಿವೀರ್ ಯೋಜನೆಯನ್ನು ರದ್ದು ಮಾಡುವುದಾಗಿ ಸಮಾಜವಾದಿ ಪಕ್ಷದ ಅಧ್ಯಕ್ಷ ಅಖಿಲೇಶ್ ಯಾದವ್ ಹೇಳಿದ್ದಾರೆ. ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ನಿವೃತ್ತ ಅಗ್ನಿವೀರರಿಗೆ ಮೀಸಲಾತಿ ಘೋಷಿಸಿದ ಒಂದು ದಿನದ ನಂತರ ಅಖಿಲೇಶ್ ಯಾದವ್ ಈ ಟ್ವೀಟ್ ಮಾಡಿದ್ದಾರೆ.
ಲೋಕಸಭೆ ಚುನಾವಣೆಗೆ ಪ್ರಚಾರ ಮಾಡುವಾಗ ಸಮಾಜವಾದಿ ಪಕ್ಷವು ಒಂದು ಘಟಕವಾಗಿರುವ ಇಂಡಿಯಾ ಒಕ್ಕೂಟವು ಅಧಿಕಾರಕ್ಕೆ ಬಂದರೆ ಅಲ್ಪಾವಧಿಯ ಮಿಲಿಟರಿ ನೇಮಕಾತಿ ಯೋಜನೆ ಅಗ್ನಿವೀರ್ ಅನ್ನು ರದ್ದುಗೊಳಿಸುವುದಾಗಿ ಯಾದವ್ ಪದೇ ಪದೇ ಭರವಸೆ ನೀಡಿದ್ದರು. ಈಗ ಮತ್ತೆ ವಿಚಾರವನ್ನು ಪ್ರಸ್ತಾಪಿಸಿ ಸುದ್ದಿಯಾಗಿದ್ದಾರೆ.
ಈ ಬಗ್ಗೆ ಎಕ್ಸ್‌ನಲ್ಲಿ ಪೋಸ್ಟ್ ಮಾಡಿರುವ ಅಖಿಲೇಶ್ “ನಾವು ಅಧಿಕಾರಕ್ಕೆ ಬಂದ ತಕ್ಷಣ, ದೇಶದ ಭದ್ರತೆಗೆ ರಾಜಿ ಮಾಡಿಕೊಳ್ಳುವ ಮತ್ತು ಸೈನಿಕರ ಭವಿಷ್ಯದ ಜೊತೆ ಆಟವಾಡುವ ಅಲ್ಪಾವಧಿಯ ‘ಅಗ್ನಿವೀರ್ ಸೇನಾ ನೇಮಕಾತಿಯನ್ನು ೨೪ ಗಂಟೆಗಳಲ್ಲಿ ರದ್ದುಗೊಳಿಸಲಾಗುವುದು” ಎಂದು ಬರೆದುಕೊಂಡಿದ್ದಾರೆ.