ಕೇಂದ್ರ ಬಜೆಟ್, ರಾಜ್ಯಕ್ಕೆ ಅನ್ಯಾಯವಿಲ್ಲ
ಹೆಚ್ಚು ಅನುದಾನ, ತೆರಿಗೆ ಪಾಲು ಹಂಚಿಕೆ ಮಾಡಲಾಗಿದೆ, ಕೇಂದ್ರದ ವಿರುದ್ಧ ಅಪಪ್ರಚಾರ
ಬೆಂಗಳೂರು, ಜು. ೨೮- ಕೇಂದ್ರ ಸರ್ಕಾರದ ಬಜೆಟ್‌ನಲ್ಲಿ ರಾಜ್ಯಕ್ಕೆ ಅನ್ಯಾಯವಾಗಿದೆ ಎಂಬ ರಾಜ್ಯ ಸರ್ಕಾರದ ಆರೋಪ ಸತ್ಯಕ್ಕೆ ದೂರವಾದದ್ದು. ಈ ಬಜೆಟ್‌ನಲ್ಲಿ ರಾಜ್ಯಕ್ಕೆ ೧೫,೩೦೦ ಕೋಟಿ ರೂ. ನೆರವು ನೀಡಲಾಗಿದೆ. ಹಾಗೆಯೇ ೪೫,೪೮೬ ಕೋಟಿ ರೂ. ತೆರಿಗೆ ಪಾಲು ಹಂಚಿಕೆ ಮಾಡಲಾಗಿದೆ ಎಂದು ಕೇಂದ್ರದ ಹಣಕಾಸು ಸಚಿವೆ ನಿರ್ಮಲ ಸೀತರಾಮನ್ ಹೇಳಿದರು.
ಬೆಂಗಳೂರಿನ ಬಿಜೆಪಿ ಕಚೇರಿಯಲ್ಲಿಂದು ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕೇಂದ್ರದ ಬಜೆಟ್‌ನಲ್ಲಿ ರಾಜ್ಯಕ್ಕೆ ಅನ್ಯಾಯ ಮಾಡಲಾಗಿದೆ ಎಂಬ ಅಪಪ್ರಚಾರ ಮಾಡಲಾಗುತ್ತಿದೆ. ಇದು ವಾಸ್ತವಕ್ಕೆ ವಿರುದ್ಧವಾಗಿದೆ. ವಾಸ್ತವವಾಗಿ ಕೇಂದ್ರದಿಂದ ರಾಜ್ಯಕ್ಕೆ ಯುಪಿಎ ಸರ್ಕಾರದ ಅವಧಿಯಲ್ಲಿ ನೀಡಿದ್ದಕ್ಕಿಂತ ಹೆಚ್ಚಿನ ನೆರವು, ಆದಾಯ ಹಂಚಿಕೆಯನ್ನು ಮಾಡಲಾಗಿದೆ ಎಂದು ಅಂಕಿ-ಅಂಶಗಳ ಸಮೇತ ಮಾಹಿತಿ ನೀಡಿದರು.
ಹಣದುಬ್ಬರ ರಾಷ್ಟ್ರೀಯ ಸರಾಸರಿಗಿಂತ ಕಡಿಮೆ ಇದ್ದ ಕರ್ನಾಟಕದಲ್ಲಿ ಕಾಂಗ್ರೆಸ್ ಸರ್ಕಾರ ಬಂದ ನಂತರ ಹಣದುಬ್ಬರ ರಾಷ್ಟ್ರೀಯ ಸರಾಸರಿಗಿಂತ ಹೆಚ್ಚಾಗಿದೆ. ಆದಾಯ ಹೆಚ್ಚಳವಿದ್ದ ಕರ್ನಾಟಕ ಈಗ ವಿತ್ತೀಯ ಕೊರತೆ ಎದುರಿಸುತ್ತಿದೆ. ಸಾಲದ ಮಿತಿಯೂ ಹೆಚ್ಚಿದೆ, ಸಾಲವೂ ಹೆಚ್ಚಾಗಿದೆ. ಹೀಗಿರುವಾಗ ಈ ಸರ್ಕಾರ ಕೇಂದ್ರದ ವಿರುದ್ಧ ಆರೋಪ ಮಾಡುತ್ತಿರುವುದು ನಿರಾಧಾರ ಎಂದರು.
ಈ ಬಜೆಟ್‌ನಲ್ಲಿ ೧೫,೩೦೦ ಕೋಟಿ ರೂ. ಅನುದಾನವನ್ನು ರಾಜ್ಯಕ್ಕೆ ಒದಗಿಸಿದ್ದೇವೆ. ಹಾಗೆಯೇ ಸುಮಾರು ೪೫ ಸಾವಿರ ಕೋಟಿ ರೂಪಾಯಿ ತೆರಿಗೆ ಪಾಲನ್ನು ಹಂಚಿಕೆ ಮಾಡಲಾಗಿದೆ. ಹೀಗಿದ್ದರೂ ಕೇಂದ್ರದ ಬಜೆಟ್‌ನಲ್ಲಿ ರಾಜ್ಯಕ್ಕೆ ಅನ್ಯಾಯವಾಗಿದೆ ಎಂಬ ಮಾತುಗಳು ಸರಿಯಲ್ಲ ಎಂದು ಅವರು ಹೇಳಿದರು.
ರಾಜ್ಯದ ಕಾಂಗ್ರೆಸ್ ಆಡಳಿತದಿಂದ ವಿತ್ತೀಯ ಕೊರತೆಯಾಗಿದೆ. ಬಂಡವಾಳ ವೆಚ್ಚ ಆಗುತ್ತಿಲ್ಲ. ಇದರಿಂದ ಉದ್ಯೋಗ ಸೃಷ್ಠಿಯಾಗುತ್ತಿಲ್ಲ. ಇದನ್ನು ಬಿಟ್ಟು ಸುಮ್ಮನೆ ಕೇಂದ್ರ ಸರ್ಕಾರದ ಮೇಲೆ ದೂಷಣೆ ಮಾಡುತ್ತಿರುವುದು ಸರಿಯಲ್ಲ ಎಂದು ಅವರು ಹೇಳಿದರು.
ರಾಜ್ಯದಲ್ಲಿ ಹಣದುಬ್ಬರ ರಾಷ್ಟ್ರೀಯ ಸರಾಸರಿಗಿಂತ ಹೆಚ್ಚಾಗಿರುವುದಕ್ಕೆ ರಾಜ್ಯದ ಬೆಲೆ ಏರಿಕೆ ನೀತಿಯೇ ಕಾರಣ ಎಂದು ಟೀಕಿಸಿದರು.
ಕೇಂದ್ರ ಬಜೆಟ್‌ನಲ್ಲಿ ರಾಜ್ಯಕ್ಕೆ ಏನೆಲ್ಲಾ ನೆರವು ನೀಡಲಾಗಿದೆ ಎಂಬುದನ್ನು ಅಂಕಿ-ಅಂಶಗಳ ಸಮೇತ ವಿವರ ನೀಡಿದ ಅವರು, ಬಜೆಟ್‌ನಲ್ಲಿ ರಾಜ್ಯದ ೬ ನಗರಗಳನ್ನು ಸ್ಮಾರ್ಟ್‌ಸಿಟಿ ಯೋಜನೆಯಡಿ ಆಯ್ಕೆ ಮಾಡಲಾಗಿದೆ. ಈಗಾಗಲೇ ೯೦೪ ಕಾಮಗಾರಿಗಳಿಗೆ ಕಾರ್ಯಾದೇಶವನ್ನೂ ನೀಡಿದ್ದೇವೆ ಎಂದರು.
ರಾಜ್ಯದ ರೈಲ್ವೆ ಯೋಜನೆಗೆ ಹೆಚ್ಚು ಹಣ
ರಾಜ್ಯದ ರೈಲ್ವೆ ಯೋಜನೆಗಳಿಗೆ ಈ ಬಜೆಟ್‌ನಲ್ಲಿ ೭,೫೫೯ ಕೋಟಿ ರೂ.ಗಳನ್ನು ಒದಗಿಸಿದ್ದೇವೆ. ೨೦೦೯ ರಿಂದ ೨೦೧೪ರ ವರೆಗೂ ಯುಪಿಎ ೨ನೇ ಆಡಳಿತದ ಅವಧಿಯಲ್ಲಿ ರಾಜ್ಯಕ್ಕೆ ರೈಲ್ವೆ ಅಭಿವೃದ್ಧಿಗಾಗಿ ಬಂದಿದ್ದು ಕೇವಲ ೮೩೫ ಕೋಟಿ ರೂಪಾಯಿ. ನಾವು ಈ ವರ್ಷವೇ ರಾಜ್ಯದ ರೈಲ್ವೆ ಅಭಿವೃದ್ಧಿ ೭೫೫೯ ಕೋಟಿ ರೂ.ಗಳನ್ನು ಒದಗಿಸಿದ್ದೇವೆ. ಈಗಾಗಲೇ ಪ್ರಗತಿಯಲ್ಲಿರುವ ಯೋಜನೆಗಳಿಗೂ ಹಣ ಒದಗಿಸಿದ್ದೇವೆ ಎಂದರು.
ರಾಜ್ಯದ ರಸ್ತೆ ಅಭಿವೃದ್ಧಿಗೆ ಎನ್‌ಡಿಎ ಸರ್ಕಾರ ೧ ಲಕ್ಷ ಕೋಟಿ ರೂಪಾಯಿ ಹಣವನ್ನು ರಾಜ್ಯಕ್ಕಾಗಿಯೇ ಒದಗಿಸಿದೆ. ೪೬೦೦ ಕಿ.ಮೀ. ರಸ್ತೆಯನ್ನು ಈಗಾಗಲೇ ನಿರ್ಮಿಸಿದೆ ಎಂದರು.
ಭಾರತ್ ಮಾಲಾ ಯೋಜನೆಯಡಿ ರಾಜ್ಯದಲ್ಲಿ ಯೋಜನೆಗಳನ್ನು ಪ್ರಕಟಿಸಿದ್ದೇವೆ ಎಂದು ಅವರು ತಿಳಿಸಿದರು.
ರಾಜ್ಯಕ್ಕೆ ಕೋವಿಡ್ ನಂತರ ಮೂಲಭೂತ ಸೌಕರ್ಯಗಳ ಅಭಿವೃದ್ದಿಗಾಗಿ ಕೇಂದ್ರದಿಂದ ಬಡ್ಡಿ ರಹಿತ ಸೌಲವನ್ನು ನೀಡಿದ್ದೇವೆ. ೨೦೨೧-೨೩ರ ವರೆಗೆ ೮,೩೧೨ ಕೋಟಿ ರೂ. ಬಡ್ಡಿ ಸಾಲ ನೀಡಿದ್ದರೆ, ಈ ವರ್ಷ ೨೦೬೬ ಕೋಟಿ ಬಡ್ಡಿ ರಹಿತ ಸಾಲವನ್ನು ಒದಗಿಸಿದ್ದೇವೆ ಎಂದಕು.
ಬಜೆಟ್‌ನಲ್ಲಿ ದೇಶದ ೭ ಕಡೆ ಜವಳಿ ಪಾರ್ಕ್ ಸ್ಥಾಪನೆ ಮಾಡಲಾಗಿದ್ದು, ಈ ೭ ರಲ್ಲಿ ರಾಜ್ಯದ ಕಲ್ಬುರ್ಗಿಯಲ್ಲೂ ಜವಳಿ ಪಾರ್ಕ್ ಘೋಷಣೆ ಮಾಡಲಾಗಿದೆ. ಹೀಗಿರುವಾಗ ಕೇಂದ್ರ ಬಜೆಟ್‌ನಿಂದ ರಾಜ್ಯಕ್ಕೆ ಎಲ್ಲಿ ಅನ್ಯಾಯವಾಗಿದೆ ಎಂದು ಪ್ರಶ್ನಿಸಿದರು.
ಯುಪಿಎ ಅವಧಿಯಲ್ಲಿ ರಾಜ್ಯದ ಅಭಿವೃದ್ಧಿಗೆ ನೀಡಿದ ಅನುದಾನಕ್ಕೂ, ಎನ್‌ಡಿಎ ಅವಧಿಯಲ್ಲೂ ನೀಡಿದ ಅನುದಾನಕ್ಕೂ ಹೋಲಿಕೆ ಮಾಡಲು ಸಾಧ್ಯವೇ ಇಲ್ಲ. ರಾಜ್ಯಕ್ಕೆ ಹೆಚ್ಚಿನ ಅನುದಾನವನ್ನು ಎನ್‌ಡಿಎ ಸರ್ಕಾರ ನೀಡಿದೆ ಎಂದು ಅಂಕಿ-ಅಂಶಗಳನ್ನು ಸುದ್ದಿಗೋಷ್ಠಿಯಲ್ಲಿ ಒದಗಿಸಿದರು.
ಯುಪಿಎ ಆಡಳಿತ ಇದ್ದಾಗ ೧೦ ವರ್ಷದಲ್ಲಿ ರಾಜ್ಯದಲ್ಲಿ ಸುಮಾರು ೬೦,೭೭೯ ಕೋಟಿ ರೂಪಾಯಿ ಅನುದಾನ ನೀಡಲಾಗಿತ್ತು. ಎನ್‌ಡಿಎನ ೧೦ ವರ್ಷದ ಆಡಳಿತದಲ್ಲಿ ೨,೩೬,೯೫೫ ಕೋಟಿ ರೂಪಾಯಿ ಅನುದಾನ ನೀಡಲಾಗಿದೆ. ಈ ವರ್ಷ ೪೫ ಸಾವಿರ ಕೋಟಿ ರೂ. ತೆರಿಗೆ ಹಂಚಿಕೆ ಜತೆಗೆ ೧೫,೩೦೦ ಸಾವಿರ ಕೋಟಿ ರೂಪಾಯಿ ಅನುದಾನದ ನೆರವನ್ನು ಒದಗಿಸಿದ್ದೇವೆ. ಇಷ್ಟಾದರೂ ಕೇಂದ್ರದ ವಿರುದ್ಧ ಕಾಂಗ್ರೆಸ್ ಸರ್ಕಾರ ಅಪಪ್ರಚಾರ ಮಾಡುತ್ತಿರುವುದು ಸರಿಯಲ್ಲ. ರಾಜ್ಯದ ಜನತೆಗೆ ವಾಸ್ತವತೆಯನ್ನು ವಿವರಿಸಲು ಈ ಅಂಕಿಅಂಶಗಳನ್ನು ನೀಡಿದ್ದೇನೆ ಎಂದರು.
ಕೇಂದ್ರದ ನೀತಿಗಳಿಂದ ರಾಜ್ಯದಲ್ಲಿ ಹೆಚ್ಚು ಬಂಡವಾಳ ಹೂಡಿಕೆಯಾಗುತ್ತಿದೆ. ಇಷ್ಟಾದರೂ ಕೇಂದ್ರದ ವಿರುದ್ದ ಆರೋಪ ಮಾಡುತ್ತಿರುವುದು ಸರಿಯಲ್ಲ. ಕೇಂದ್ರದ ಈ ವರ್ಷದ ಬಜೆಟ್‌ನಲ್ಲಿ ರಾಜ್ಯದ ಅಭಿವೃದ್ಧಿಗೆ ಸಾಕಷ್ಟು ಅನುದಾನವನ್ನು ನೀಡಲಾಗಿದೆ. ಹಾಗೆಯೇ ಹೆಚ್ಚಿನ ತೆರಿಗೆ ಪಾಲನ್ನು ಹಂಚಿಕೆ ಮಾಡಲಾಗಿದೆ ಎಂದು ಅವರು ಸ್ಪಷ್ಟಪಡಿಸಿದರು.
ಯುಪಿಎ ಸರ್ಕಾರದ ೧೦ ವರ್ಷಗಳ ಅವಧಿಯಲ್ಲಿ ರಾಜ್ಯಕ್ಕೆ ೮೧,೭೯೧ ಕೋಟಿ ರೂ. ತೆರಿಗೆ ಪಾಲು ಬಂದಿತ್ತು. ಎನ್‌ಡಿಎ ಸರ್ಕಾರದ ೧೦ ವರ್ಷದ ಅವಧಿಯಲ್ಲಿ ರಾಜ್ಯಕ್ಕೆ ೨,೯೫,೮೧೮ ಕೋಟಿ ರೂ. ತೆರಿಗೆ ಪಾಲು ಬಂದಿದೆ ಎಂದು ಅವರು ಹೇಳಿದರು.
ಬಜೆಟ್‌ನಲ್ಲಿ ಎಂಎಸ್‌ಎಂವಿಗಳ ಅಭಿವೃದ್ಧಿಗೆ ನೀಡಿರುವ ಹಣ, ಕೌಶಲ್ಯ ತರಬೇತಿಗೆ ಒದಗಿಸಿರುವ ಹಣ, ವಸತಿ ನಿರ್ಮಾಣಕ್ಕೆ ನೀಡಿರುವ ಹಣ ಎಲ್ಲದರಲ್ಲೂ ರಾಜ್ಯಕ್ಕೆ ಪಾಲು ಸಿಗುತ್ತದೆ. ಹೀಗಿರುವಾಗ ಕೇಂದ್ರ ಬಜೆಟ್‌ನಿಂದ ರಾಜ್ಯಕ್ಕೆ ಅನ್ಯಾಯವಾಗಿದೆ ಎಂಬ ಅಪಪ್ರಚಾರ ಸರಿಯಲ್ಲ ಎಂದು ಸಚಿವೆ ನಿರ್ಮಲ ಸೀತರಾಮನ್ ಹೇಳಿದರು.
ಸುದ್ದಿಗೋಷ್ಠಿಯಲ್ಲಿ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ಉಪಸ್ಥಿತರಿದ್ದರು.