9 ರಾಜ್ಯಗಳಿಗೆ ಹೊಸ ರಾಜ್ಯಪಾಲರು
ನವದೆಹಲಿ,ಜು.೨೮- ಕೇಂದ್ರದಲ್ಲಿ ೩ನೇ ಬಾರಿಗೆ ಅಧಿಕಾರಕ್ಕೆ ಬಂದ ನಂತರ ಪ್ರಧಾನಿ ನರೇಂದ್ರಮೋದಿ ನೇತೃತ್ವದ ಎನ್‌ಡಿಎ ಸರ್ಕಾರ ವಿವಿಧ ರಾಜ್ಯಗಳಿಗೆ ಹೊಸ ರಾಜ್ಯಪಾಲರ ನೇಮಕ ಮಾಡಿದ್ದು, ಕರ್ನಾಟಕದ ಮಾಜಿ ಸಚಿವ ಸಿ.ಎಚ್ ವಿಜಯಶಂಕರ್ ಅವರನ್ನು ಮೇಘಾಲಯದ ರಾಜ್ಯಪಾಲರನ್ನಾಗಿ ನೇಮಕ ಮಾಡಲಾಗಿದೆ. ಈ ಮೂಲಕ ಬಹಳ ವರ್ಷಗಳ ನಂತರ ಕರ್ನಾಟಕದವರೊಬ್ಬರಿಗೆ ರಾಜ್ಯಪಾಲರ ಹುದ್ದೆ ಸಿಕ್ಕಂತಾಗಿದೆ.
ದೇಶದ ೬ ರಾಜ್ಯಗಳಿಗೆ ಹೊಸದಾಗಿ ರಾಜ್ಯಪಾಲರನ್ನು ನೇಮಕಮಾಡಿರುವ ರಾಷ್ಟ್ರಪತಿ ದ್ರೌಪದಿಮುರ್ಮುಅವರು ಮೂರು ರಾಜ್ಯಗಳ ರಾಜ್ಯಪಾಲರನ್ನು ವರ್ಗಾವರ್ಗಿ ಮಾಡಿ ಆದೇಶ ಹೊರಡಿಸಿದ್ದಾರೆ. ಹಾಗೆಯೇ ಪುದುಚೆರಿಗೂ ಉಪರಾಜ್ಯಪಾಲರ ನೇಮಕ ಮಾಡಲಾಗಿದೆ.
ಉಳಿದಂತೆ ರಾಜಸ್ತಾನ, ತೆಲಂಗಾಣ,ಸಿಕ್ಕಿಂ, ಜಾರ್ಖಂಡ್, ಛತ್ತೀಸ್‌ಘಡ,ಮೇಘಾಲಯಗಳಿಗೆ ಹೊಸ ರಾಜ್ಯಪಾಲರ ನೇಮಕ ಆಗಿದ್ದು, ಜಾರ್ಖಂಡ್, ಅಸ್ಸಾಂ ಮತ್ತು ಸಿಕ್ಕಿಂನ ರಾಜ್ಯಪಾಲರುಗಳನ್ನು ಬೇರೆ ರಾಜ್ಯಗಳ ರಾಜ್ಯಪಾಲರನ್ನಾಗಿ ವರ್ಗಾವಣೆ ಮಾಡಲಾಗಿದೆ.
ಕೇಂದ್ರದ ಮಾಜಿ ಸಚಿವ ಸಂತೋಷ್ ಕುಮಾರ್ ಗಂಗ್ವಾರ್ ಅವರನ್ನು ಜಾರ್ಖಂಡ್ ರಾಜ್ಯಪಾಲರನ್ನಾಗಿ ತ್ರಿಪುರಾದ ಮಾಜಿ ಉಪಮುಖ್ಯಮಂತ್ರಿ ಜಿಷ್ಣು ದೇವ್ ವರ್ಮಾ ಅವರನ್ನು ತೆಲಂಗಾಣ ನೂತನ ರಾಜ್ಯಪಾಲರನ್ನಾಗಿ, ರಾಜಸ್ತಾನದ ರಾಜ್ಯಪಾಲರಾಗಿ ಮಹಾರಾಷ್ಟ್ರದ ಬಿಜೆಪಿಯ ಹಿರಿಯ ನಾಯಕ ಹರಿಬಾವುಕಿಸನ್‌ರಾವ್ ಬಾಗಡೆ ಅವರನ್ನು ಸಿಕ್ಕಿಂ ರಾಜ್ಯಪಾಲರನ್ನಾಗಿ ಮತ್ತೊಬ್ಬ ಬಿಜೆಪಿಯ ಹಿರಿಯ ನಾಯಕ ಓಂ ಪ್ರಕಾಶ್ ಮಾಥೂರ್ ಅವರನ್ನು, ಛತ್ತೀಸ್‌ಘಡ ರಾಜ್ಯಪಾಲರನ್ನಾಗಿ ರಮನ್‌ದೆಖಾ ಅವರನ್ನು ನೇಮಕ ಮಾಡಿ ರಾಷ್ಟ್ರಪತಿಗಳು ಆದೇಶ ಹೊರಡಿಸಿದ್ದಾರೆ.
ಪ್ರಧಾನಿ ನರೇಂದ್ರಮೋದಿ ಅವರ ಆಪ್ತರಾಗಿರುವ ಗುಜರಾತ್‌ನ ಮುಖ್ಯ ಕಾರ್ಯದರ್ಶಿ ಕೆ. ಕೈಲಾಸನಾಥನ್ ಅವರನ್ನು ಪುದುಚೆರಿಯ ಲೆಫ್ಟಿನೆಂಟ್ ಗೌರ್‍ನರ್ ಆಗಿ ನೇಮಕ ಮಾಡಲಾಗಿದೆ.
ಹಾಗೆಯೇ ಜಾರ್ಖಂಡ್‌ನ ರಾಜ್ಯಪಾಲರಾಗಿದ್ದ ಸಿ.ಪಿ ರಾಧಾಕೃಷ್ಣ ಅವರನ್ನು ಮಹಾರಾಷ್ಟ್ರ ರಾಜ್ಯಪಾಲರನ್ನಾಗಿ ನೇಮಕ ವರ್ಗಾಯಿಸಲಾಗಿದೆ. ಅಸ್ಸಾಂ ರಾಜ್ಯಪಾಲರಾಗಿದ್ದ ಗುಲಾಬ್‌ಚಂದ್‌ಕಟಾರಿಯ ಅವರನ್ನು ಪಂಜಾಬ್ ರಾಜ್ಯಪಾಲರಾಗಿ ಮತ್ತು ಕೇಂದ್ರಾಡಳಿತ ಪ್ರದೇಶವಾದ ಚಂಡೀಘಡದ ಆಡಳಿತಾಧಿಕಾರಿಯಾಗಿ ವರ್ಗಾಯಿಸಲಾಗಿದೆ. ಸಿಕ್ಕಿಂ ರಾಜ್ಯಪಾಲರಾಗಿದ್ದ ಲಕ್ಷ್ಮಣ ಪ್ರಸಾದ್ ಆಚಾರ್ಯ ಅಸ್ಸಾಂ ರಾಜ್ಯಪಾಲರಾಗಿ ವರ್ಗಾಯಿಸಿ ಮಣಿಪುರ ರಾಜ್ಯಪಾಲರ ಹೆಚ್ಚುವರಿ ಜವಾಬ್ದಾರಿ ಸಹ ನೀಡಲಾಗಿದೆ.
ಪಂಜಾಬ್‌ನ ರಾಜ್ಯಪಾಲರಾಗಿದ್ದ ಬನ್ವಾರಿಲಾಲ್ ಪುರೋಹಿತ್ ಅವರ ರಾಜೀನಾಮೆಯನ್ನು ರಾಷ್ಟ್ರಪತಿಗಳು ಅಂಗೀಕರಿಸಿ ಹೊಸ ರಾಜ್ಯಪಾಲರ ನೇಮಕ ಮಾಡಲಾಗಿದೆ.
ಪ್ರಧಾನಿಮೋದಿ ಅವರು ಗುಜರಾತ್‌ನ ರಾಜ್ಯಪಾಲರಾಗಿದ್ದ ಅವರ ಪ್ರಧಾನ ಕಾರ್ಯದರ್ಶಿಯಾಗಿದ್ದ ಕೈಲಾಶ್‌ನಾಥ್ ಅವರಿಗೆ ರಾಜ್ಯಪಾಲರ ಹುದ್ದೆ ನೀಡಲಾಗಿದ್ದು, ಕೈಲಾಶ್‌ನಾಥ್ ಮತ್ತು ಇತ್ತೀಚಿನವರೆಗೂ ಗುಜರಾತ್‌ನ ಹಾಲಿ ಮುಖ್ಯಮಂತ್ರಿಗಳ ಪ್ರಧಾನ ಕಾರ್ಯದರ್ಶಿಯಾಗಿ ಸೇವೆ ಸಲ್ಲಿಸಿ ಕಳೆದ ಜೂ. ೩೦ ರಂದು ನಿವೃತ್ತರಾಗಿದ್ದರು. ಈಗ ಅವರನ್ನು ಪುದುಚೆರಿಯ ಲೆಫ್ಟಿನೆಂಟ್ ಗೌರ್‍ನರ್ ಆಗಿ ನೇಮಕ ಮಾಡಲಾಗಿದೆ.
ನೂತನ ರಾಜ್ಯಪಾಲರು
ಮೇಘಾಲಯದ ನೂತನ ರಾಜ್ಯಪಾಲರಾಗಿ ನೇಮಕಗೊಂಡಿರುವ ರಾಜ್ಯದ ಮಾಜಿ ಸಚಿವ ವಿಜಯಶಂಕರ್ ಅವರು ಶಾಸಕರಾಗಿ, ಸಂಸದರಾಗಿ ಹಾಗೂ ರಾಜ್ಯದಲ್ಲಿ ಸಚಿವರಾಗಿ ಕಾರ್ಯನಿರ್ವಹಿಸಿದ್ದಾರೆ.
ಮೂಲತಃ ಹಾವೇರಿ ಜಿಲ್ಲೆಯ ರಾಣೆಬೆನ್ನೂರಿನವರಾದ ಸಿ.ಎಚ್. ವಿಜಯಶಂಕರ್ ಬಿಜೆಪಿಯ ಜತೆ ರಾಜಕೀಯ ಜೀವನ ಆರಂಭಿಸಿ ಹುಣಸೂರಿನಿಂದ ಕರ್ನಾಟಕ ವಿಧಾನಸಭೆಗೆ ಆಯ್ಕೆಯಾಗಿದ್ದರು. ನಂತರ ೧೯೯೮ರಲ್ಲಿ ೨೦೦೪ ರಲ್ಲಿ ಅವರು ಮೈಸೂರು-ಕೊಡಗು ಕ್ಷೇತ್ರದಿಂದ ಬಿಜೆಪಿ ಸಂಸದರಾಗಿಯೂ ಕೆಲಸ ಮಾಡಿದ್ದರು. ನಂತರ ವಿಧಾನ ಪರಿಷತ್‌ನ ಸದಸ್ಯರಾಗಿದ್ದ ಅವರು ರಾಜ್ಯಸರ್ಕಾರದಲ್ಲಿ ಅರಣ್ಯ ಇಲಾಖೆಯ ಸಚಿವರಾಗಿಯೂ ಕಾರ್ಯನಿರ್ವಹಿಸಿದ್ದರು.