ಬಿಜೆಪಿ ಅವಧಿ ಭ್ರಷ್ಟಾಚಾರ ಏಕೆ ತನಿಖೆ ಆರಂಭಿಸಿಲ್ಲ
ವಿಜಯಪುರ, ಜು. ೨೮- ಬಿಜೆಪಿ ಸರ್ಕಾರದ ಅವಧಿಯ ಭ್ರಷ್ಟಾಚಾರದ ಬಗ್ಗೆ ತನಿಖೆ ಮಾಡದೆ ಸುಮ್ಮನೆ ಏಕೆ ಕುಳಿತಿದ್ದೀರಿ ಎಂದು ಬಿಜೆಪಿ ಹಿರಿಯ ನಾಯಕ ಬಸನಗೌಡ ಪಾಟೀಲ್ ಯತ್ನಾಳ್ ಮುಖ್ಯಮಂತ್ರಿ ಸಿದ್ದರಾಮಯ್ಯನವರ ವಿರುದ್ಧ ಕಿಡಿಕಾರಿದ್ದಾರೆ.
ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದು ೧೪ ತಿಂಗಳಾಗಿದೆ. ೧೪ ತಂಗಳಲ್ಲಿ ಬಿಜೆಪಿ ಆಡಳಿತದ ಭ್ರಷ್ಟಾಚಾರದ ಬಗ್ಗೆ ಏಕೆ ತನಿಖೆ ಮಾಡಲಿಲ್ಲ. ಈಗ ಬಿಜೆಪಿ ಆಡಳಿತದ ಭ್ರಷ್ಟಾಚಾರದ ಬಗ್ಗೆ ಮಾತನಾಡುತ್ತಿದ್ದೀರಾ ಎಂದು ವಾಗ್ದಾಳಿ ನಡೆಸಿದರು.
ರಾಜ್ಯದ ಬಿಜೆಪಿ ಅಧ್ಯಕ್ಷ ವಿಜಯೇಂದ್ರ ಹಾಗೂ ನಿಮ್ಮ ನಡುವೆ ಮತ್ತು ಡಿ.ಕೆ. ಶಿವಕುಮಾರ್ ನಡುವೆ ಒಳ ಒಪ್ಪಂದವಾಗಿದೆ. ಈ ಒಳ ಒಪ್ಪಂದದಿಂದ ಮೂರು ರಾಜಕೀಯ ಪಕ್ಷಗಳಿಗೂ ಪೆಟ್ಟು ಬಿದ್ದಿದೆ. ಎಲ್ಲದರ ಬಗ್ಗೆಯೂ ತನಿಖೆ ಮಾಡಿ ಎಲ್ಲವೂ ಬಯಲಾಗುತ್ತದೆ ಎಂದರು.
ಬಿಜೆಪಿ ಭ್ರಷ್ಟಾಚಾರದ ಬಗ್ಗೆ ಕನಕಪುರ ಬಂಡೆ ಡಿ.ಕೆ. ಶಿವಕುಮಾರ್ ಏಕೆ ಸುಮ್ಮನಿದ್ದರು, ವಿಜಯೇಂದ್ರ ಬಂಡಲ್ ಕಡತ ಹೊಯ್ದರೆ ಅದಕ್ಕೆ ತಕ್ಷಣ ಡಿ.ಕೆ. ಶಿವಕುಮಾರ್ ಸಹಿ ಮಾಡುತ್ತಾರೆ. ಇದೆಲ್ಲಾ ಒಳಒಪ್ಪಂದ ಎಂದು ಹರಿಹಾಯ್ದ ಅವರು, ಮೂರು ಪಕ್ಷದ ಒಳ ಒಪ್ಪಂದದ ಗಿರಾಕಿಗಳು ಹೊರಗೆ ಬಂದು ಹೊಸ ಪಕ್ಷ ಕಟ್ಟಿ ಒಳಒಪ್ಪಂದ ಪಾರ್ಟಿ ಎಂದು ಹೆಸರಿಡಲಿ ಎಂದು ವ್ಯಂಗ್ಯವಾಡಿದರು.
ಈ ಒಳ ಒಪ್ಪಂದದ ಗಿರಾಕಿಗಳು ಬಿಜೆಪಿ, ಕಾಂಗ್ರೆಸ್, ಜೆಡಿಎಸ್‌ನಿಂದ ಹೊರ ಬಂದರೆ ಮೂರು ಪಕ್ಷಗಳು ಶುದ್ಧ ಆಗುತ್ತವೆ ಎಂದು ಹೇಳಿದರು.
ಹಿಟ್ಲರ್ ವಾದಿಗಳ ಜತೆ ಸೂಡಲ್ ವಾದಿಗಳು ಸೇರಿದ್ದಾರೆ ಎಂದು ಬಿಜೆಪಿ-ಜೆಡಿಎಸ್ ಬಗ್ಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಟೀಕಿಸಿರುವುದಕ್ಕೆ ಪ್ರತಿಕ್ರಿಯಿಸಿದ ಅವರು, ಸಿದ್ದರಾಮಯ್ಯ ರಷ್ಯಾದ ಸರ್ವಾಧಿಕಾರಿ ಮುಸಲೋನಿ ಇರಬೇಕು. ಅವರು ಮುಸಲೋಲಿ, ಇವರು ಹಿಟ್ಲರ್ ಎಂದು ಗೇಲಿ ಮಾಡಿದರು.