ಸೂರ್ಯೋದಯದೊಂದಿಗೆ ಗಂಭೀರ್ ಯುಗಾರಂಭ
ಪಲ್ಲಕಲ್ಲೆ : ಭಾರತ ಕ್ರಿಕೆಟ್ ತಂಡದ ನೂತನ ಕೋಚ್ ಗೌತಮ್ ಗಂಭೀರ್ ಮತ್ತು ನೂತನ ನಾಯಕ ಸೂರ್ಯಕುಮಾರ್ ಯಾದವ್ ಅವರ ಯುಗಾರಂಭವಾಗಿದ್ದು ಆತಿಥೇಯ ಶ್ರೀಲಂಕಾ ವಿರುದ್ಧ ಮೂರು ಪಂದ್ಯಗಳ ಟಿ೨೦ ಸರಣಿ ಆಡಲಿದ್ದಾರೆ.
ಎರಡು ಬಾರಿ ವಿಶ್ವಕಪ್ ವಿಜೇತೆ ಗೌತಮ್ ಗಂಭೀರ್ ತಂಡದ ಮುಖ್ಯ ಕೋಚ್ ಆಗಿ ಚುಕ್ಕಾಣಿ ಹಿಡಿದಿದ್ದಾರೆ. ಇನ್ನು ಟಿ೨೦ ಆವೃತ್ತಿಯಲ್ಲಿ ವಿಶ್ವದ ಅತ್ಯುತ್ತಮ ಬ್ಯಾಟರ್ ಎನಿಸಿರುವ ಸೂರ್ಯ ಕುಮಾರ್ ಅವರು ತಂಡದ ಸಾರಥಿಯಾಗಿ ಕಾರ್ಯನಿರ್ವಹಿಸಲಿದ್ದಾರೆ.
ಗಂಭೀರ್ ಐಪಿಎಲ್‌ನಲ್ಲಿ ಮುಖ್ಯ ಕೋಚ್ ಆಗಿ ಕಾರ್ಯನಿರ್ವಹಿಸಿದ ಅನುಭವ ಹೊಂದಿದ್ದು ಕೋಲ್ಕತ್ತಾ ತಂಡಕ್ಕೆ ಮೂರು ಬಾರಿ ಚಾಂಪಿಯನ್ ಪಟ್ಟ ಕೊಡಿಸಿದ್ದಾರೆ (ಎರಡು ಬಾರಿ ನಾಯಕನಾಗಿ ಮತ್ತು ಕೋಚ್). ಇದೀಗ ರಾಹುಲ್ ದ್ರಾವಿಡ್ ಅವರ ಉತ್ತರಾಕಾರಿಯಾಗಿ ಕಾರ್ಯನಿರ್ವಹಿಸಲಿದ್ದಾರೆ.
ಈ ಹಿಂದೆ ಭಾರತ ತಂಡ ಎರಡು ಬಾರಿ ಫೈನಲ್ ತಲುಪಿದರೂ ಪ್ರಶಸ್ತಿ ಗೆಲ್ಲಲು ಆಗಿರಲಿಲ್ಲಘಿ. ಇದು ಕೋಚ್ ಗಂಭೀರ್‌ಗೆ ಸವಾಲಿನ ವಿಚಾರವಾಗಿದ್ದು ತಂಡವನ್ನು ಹೇಗೆ ಯಶಸ್ಸಿನಡೆಗೆ ಕೊಂಡೊಯ್ಯುತ್ತಾರೆ ಎನ್ನುವ ಕುತೂಹಲವಿದೆ.
ಗಂಭೀರ್ ಅವರ ದೃಷ್ಟಿಕೋನ ಆಟಗಾರರಿಗೆ ವಿಭಿನ್ನ ಕೋಚ್ ಆಗಿ ಕಾಣಿಸಿಕೊಳ್ಳಲಿದ್ದಾರೆ. ಆಯ್ಕೆ ಸಮಿತಿ ಆಲ್ರೌಂಡರ್ ಹಾರ್ದಿಕ್ ಪಾಂಡ್ಯ ಅವರನ್ನ ಕೈಬಿಟ್ಟು ಸೂರ್ಯ ಕುಮಾರ್‌ಗೆ ನಾಯಕತ್ವ ನೀಡಿದ್ದು ಅಚ್ಚರಿ ನೀಡಿತು.
ಮುಂದಿನ ಟಿ೨೦ ವಿಶ್ವಕಪ್ ೨೦೨೬ರಂದು ಇದೇ ಲಂಕಾ ನಾಡಲ್ಲಿ ನಡೆಯುವುದರಿಂದ ತಂಡವನ್ನು ಮತ್ತೆ ಕಟ್ಟಲು ಸಾಕಷ್ಟು ಸಮಯಾವಕಾಶವಿದೆ.
ಉಪನಾಯಕ ಶುಭಮನ್ ಗಿಲ್ ತಮ್ಮ ಸ್ಥಾನವನ್ನು ಭದ್ರಪಡಿಸಿಕೊಳ್ಳಲು ಒಳ್ಳೆಯ ಅವಕಾಶವಾಗಿದೆ. ಯಶಸ್ವಿ ಜೈಸ್ವಾಲ್, ರಿಂಕು ಸಿಂಗ್ ಮತ್ತು ರಿಯಾನ್ ಪರಾಗ್ ಕೂಡ ಅವಕಾಶಕ್ಕಾಗಿ ಕಾಯುತ್ತಿದ್ದಾರೆ.
ಜಡೇಜಾ ಸ್ಥಾನವನ್ನು ಅಕ್ಷರ್ ಪಟೇಲ್ ತುಂಬುವ ಸೂಕ್ತ ಆಟಗಾರನಾಗಿದ್ದಾರೆ. ಆಲ್ರೌಂಡರ್ ವಿಭಾಗದಲ್ಲಿ ಶಿವಂ ದುಬೆ, ಹಾರ್ದಿಕ್ ಮತ್ತು ವಾಷಿಂಗ್ಟನ್ ಸುಂದರ್ ಇದ್ದಾರೆ.
ಬುಮ್ರಾ ಅನುಪಸ್ಥಿತಿಯಲ್ಲಿ ಅರ್ಷದೀಪ್, ಮೊಹ್ಮದ್ ಸಿರಾಜ್‌ಗೆ ಪಲ್ಲಕಲ್ಲೆ ಮೈದಾನ ಉತ್ತಮ ನೆರವು ನೀಡಲಿದೆ. ಸರಣಿ ಆರಂಭಕ್ಕೂ ಮುನ್ನ ಲಂಕಾ ತನ್ನ ಅನುಭವಿ ಬೌಲರ್‌ಗಳಾದ ದುಶ್ಮಾಂತ ಚಾಮೀರಾ (ಶ್ವಾಸಕೋಶ ಸೋಂಕು) ಮತ್ತು ನುವಾನ್ ತುಷರಾ (ಬೆರಳು ಮುರಿತ)ಸರಣಿಗೆ ಲಭ್ಯರಿಲ್ಲ. ಬ್ಯಾಟಿಂಗ್ ದಂತಕತೆ ಸನತ್ ಜಯಸೂರ್ಯ ತಂಡಕ್ಕೆ ಹಂಗಾಮಿ ಕೋಚ್ ಆಗಿ ನೇಮಕಗೊಂಡಿದ್ದಾರೆ.